ಸರಕಾರಿ ಅಧಿಕಾರಿಗಳಿಗಿಂತ ವೇಶ್ಯೆಯರೇ ಮೇಲು ಎಂದ ಬಿಜೆಪಿ ಶಾಸಕ!

Update: 2018-06-06 06:44 GMT

ಹೊಸದಿಲ್ಲಿ, ಜೂ.6: ಸರಕಾರಿ ಅಧಿಕಾರಿಗಳಿಗಿಂತ ವೇಶ್ಯೆಯರೇ ಮೇಲು ಎಂದು ಹೇಳಿ ಉತ್ತರ ಪ್ರದೇಶದ ಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಮತ್ತೊಮ್ಮೆ ವಿವಾದಕ್ಕಿಡಾಗಿದ್ದಾರೆ.

ಸರಕಾರಿ ಅಧಿಕಾರಿಗಳು ಲಂಚಕ್ಜೆ ಬೇಡಿಕೆಯಿಟ್ಟರೆ ಅವರನ್ನು ಥಳಿಸಿರಿ ಎಂದು ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಸಿಂಗ್ ಮರುದಿನವೇ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ, ಸರಕಾರಿ ಅಧಿಕಾರಿಗಳು ಮತ್ತು ವೇಶ್ಯೆಯರ ನಡುವೆ ವಿಚಿತ್ರ ಸಾಮ್ಯತೆ ಕಲ್ಪಿಸಲು ಯತ್ನಿಸಿದ್ದಾರೆ.

‘‘ವೇಶ್ಯೆಯರು ಸರಕಾರಿ ಅಧಿಕಾರಿಗಳಿಗಿಂತ ಮೇಲು, ಕನಿಷ್ಠ ಅವರು ಹಣ ಪಡೆದು ತಮ್ಮ ಕೆಲಸ ಮಾಡುತ್ತಾರೆ ಹಾಗೂ ವೇದಿಕೆಯ ಮೇಲೆ ನೃತ್ಯ ಕೂಡ ಮಾಡುತ್ತಾರೆ. ಆದರೆ ಈ ಅಧಿಕಾರಿಗಳು, ಹಣ ಪಡೆದುಕೊಂಡ ನಂತರವೂ ತಮ್ಮ ಕೆಲಸ ಮಾಡುವುದಿಲ್ಲ. ಮೇಲಾಗಿ ಅವರು ಕೆಲಸ ಮಾಡಿಕೊಡುತ್ತಾರೆಂಬುದಕ್ಕೂ ಖಾತರಿಯಿಲ್ಲ’’ ಎಂದು ಹೇಳಿದರು.

ಮಂಗಳವಾರ ಚೇತಾವನಿ ದಿವಸ್ ಅಥವಾ ಎಚ್ಚರಿಕೆಯ ದಿನ ಆಚರಿಸಿದ ಅವರು ಸರಕಾರಿ ಅಧಿಕಾರಿಗಳ ವಿರುದ್ಧ ‘‘ಘೂಸ್ ಮಾಂಗೇ ತೋ ಗೂಸಾ ದೋ, ನಹೀ ಮಾನೇ ತೋ ಜೂತಾ ದೋ,’’ (ಕೆಲಸ ಮಾಡಲು ಒಪ್ಪದೇ ಇದ್ದರೆ ಆತನಿಗೆ ಥಳಿಸಿ ಪಾಠ ಕಲಿಸಿ, ಮತ್ತೂ ಒಪ್ಪದೇ ಇದ್ದರೆ ಚಪ್ಪಲಿಯಿಂದ ಹೊಡೆಯಿರಿ) ಎಂಬ ಘೋಷಣೆ ರಚಿಸಿದರು.

ಕಳೆದ ತಿಂಗಳು ಉತ್ತರ ಪ್ರದೇಶ ಸಚಿವ ಹಾಗೂ ಸುಹೇಲದೇವ್ ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ಓಂ ಪ್ರಕಾಶ್ ರಾಜಭರ್ ಅವರನ್ನು ವೇಶ್ಯೆಗೆ ಅವರು ಹೋಲಿಸಿದ್ದರಲ್ಲದೆ ತಮ್ಮ ಕುಟುಂಬ ಸದಸ್ಯರನ್ನು ರಾಜಕೀಯಕ್ಕೆ ಇಳಿಸಿ ಅವರು ಹಣ ಗಳಿಸುತ್ತಿದ್ದಾರೆಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಂಗ್ ‘‘ವೇಶ್ಯೆಯೊಬ್ಬಳಿಗೆ ಎಲ್ಲರೂ ತನ್ನಂತೆ ಕಾಣುತ್ತಾರೆ’’ ಎಂದು ಹೇಳಿದ್ದರು.

ಗೋರಖಪುರ ಉಪಚುನಾವಣೆ ಇಸ್ಲಾಂ ಮತ್ತು ಭಗವಾನ್ ನಡುವಿನ ಯುದ್ಧ ಎಂದು ಅವರು ಹೇಳಿದ್ದರೆ ಇದಕ್ಕೂ ಮುಂಚೆ ಅವರು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಶೂರ್ಪನಖಾ ಎಂದು ಬಣ್ಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News