ಅಂಬೇಡ್ಕರ್‌ರಂತೆ ನೀಲಿಬಣ್ಣದ ಸೂಟು ಧರಿಸಿ ಬಿಎಸ್ಪಿಯ ಎನ್.ಮಹೇಶ್ ಪ್ರಮಾಣ ವಚನ

Update: 2018-06-06 14:20 GMT

ಬೆಂಗಳೂರು, ಜೂ. 6: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದಲ್ಲಿ ಸಹಭಾಗಿಯಾಗಿರುವ ಬಿಎಸ್ಪಿಯ ಎನ್.ಮಹೇಶ್ ಅವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಮಾದರಿಯಲ್ಲೇ ನೀಲಿ ಬಣ್ಣದ ಸೂಟು-ಬೂಟು, ಟೈ ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದು, ವಿಶೇಷ ಗಮನ ಸೆಳೆಯಿತು.

ಬುಧವಾರ ಮಧ್ಯಾಹ್ನ ರಾಜಭವನದ ಗಾಜಿನ ಮನೆಯಲ್ಲಿ ಏರ್ಪಡಿಸಿದ್ದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಎನ್. ಮಹೇಶ್, ಬುದ್ಧ, ಬಸವ ಹಾಗೂ ಅಂಬೇಡ್ಕರ್ ಹೆಸರಿನಲ್ಲಿ ಅಧಿಕಾರಿ ಮತ್ತು ಗೌಪ್ಯತೆ ಪ್ರಮಾಣ ಸ್ವೀಕಾರ ಮಾಡಿದರು.

ಪ್ರಮಾಣ ವಚನ ಸ್ವೀಕರಿಸುವ ಮೂಲಕ ನೂತನವಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಎನ್.ಮಹೇಶ್ ಅವರನ್ನು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪುಷ್ಪಗುಚ್ಛ ನೀಡಿ, ಕೈಕುಲುಕಿ ಅಭಿನಂದನೆ ಸಲ್ಲಿಸಿದರು. ಅಲ್ಲದೆ, ಇದೇ ವೇಳೆ ಹಲವು ಅಭಿಮಾನಿಗಳು ಅವರೊಂದಿಗೆ ಸೆಲ್ಫಿಗೆ ಮುಗಿಬಿದ್ದ ಘಟನೆಯೂ ನಡೆಯಿತು.

ಸಮಾರಂಭದಲ್ಲಿ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರದ ಮಾಜಿ ಸಚಿವ ಡಾ.ಎಂ. ವೀರಪ್ಪ ಮೊಯ್ಲಿ, ಸಿಎಂ ಕುಮಾರಸ್ವಾಮಿಯವರ ತಾಯಿ ಚೆನ್ನಮ್ಮ ದೇವೇಗೌಡ ಸೇರಿದಂತೆ ನೂತನ ಸಂಪುಟ ಸಚಿವರ ಕುಟುಂಬದ ಸದಸ್ಯರು ಹಾಜರಿದ್ದರು.

ಮೈತ್ರಿ ಸರಕಾರದ ಸಂಖ್ಯಾಬಲ 27ಕ್ಕೆ ಏರಿಕೆ:
‘ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದ ನೂತನ ಸಂಪುಟ ದರ್ಜೆ ಸಚಿವರಾಗಿ ಕಾಂಗ್ರೆಸಿನ 15 ಹಾಗೂ ಜೆಡಿಎಸ್‌ನ 10 ಮಂದಿ ಸೇರಿ 25 ಮಂದಿ ಸೇರ್ಪಡೆಯಾಗಿದ್ದು, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸೇರಿ ಮೈತ್ರಿ ಸರಕಾರದ ಸಂಖ್ಯಾಬಲ 27ಕ್ಕೆ ಏರಿಕೆಯಾಗಿದೆ’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News