ಚುನಾವಣಾ ಫಲಿತಾಂಶ ಜಾತ್ಯತೀತ ಪಕ್ಷಗಳಿಗೆ ಪಾಠವಾಗಲಿ: ಪಿಎಫ್‌ಐ ಕೇಂದ್ರ ಸಮಿತಿ

Update: 2018-06-06 14:30 GMT

ಬೆಂಗಳೂರು, ಜೂ.6: ಕರ್ನಾಟಕ ವಿಧಾನ ಸಭಾ ಚುನಾವಣೆ ಹಾಗೂ ಇತರ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಗಳ ಫಲಿತಾಂಶವು ದೇಶದ ಜಾತ್ಯತೀತ ಪಕ್ಷಗಳಿಗೆ ದೊಡ್ಡ ಪಾಠವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೇಂದ್ರ ಸಮಿತಿ ಅಭಿಪ್ರಾಯಿಸಿದೆ.

ಬಿಜೆಪಿಗೆ ಪರ್ಯಾಯವಾಗಿ ತಮ್ಮ ಏಕತೆ ಮತ್ತು ವಿಶಾಲ ಮೈತ್ರಿ ರಚನೆಯಲ್ಲಿ ಅವುಗಳ ಅಸ್ತಿತ್ವವಿದೆ ಎಂಬ ಸಂದೇಶವನ್ನು ಚುನಾವಣೆಗಳು ತಿಳಿಸಿವೆ. ಕರ್ನಾಟಕದ ಜನತೆಯ ಒಳಿತಿಗಾಗಿ ತಮ್ಮೆಲ್ಲಾ ಭೇದಭಾವಗಳನ್ನು ತೊರೆದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ನಿಲ್ಲುವ ಇಚ್ಛೆಯನ್ನು ವ್ಯಕ್ತಪಡಿಸಿದ್ದು ಅನುಕರಣೀಯವಾಗಿದೆ. ಒಂದು ವೇಳೆ ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡಿದ್ದರೆ ಅವರು ಬಿಜೆಪಿಗೆ ಉತ್ತಮ ಪಾಠವನ್ನು ಕಲಿಸಬಹುದಾಗಿತ್ತು.

ಇದೇ ವೇಳೆ ಯುಪಿ ಉಪಚುನಾವಣಾ ಫಲಿತಾಂಶವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರ ‘ಗರಿಷ್ಠ ಮತಾಂಧತೆ, ಕನಿಷ್ಠ ಆಡಳಿತ’ ಶೈಲಿಯ ಕುರಿತ ಅತೃಪ್ತಿ ಮತ್ತು ನಿರಾಶೆಯ ಪ್ರತಿಫಲನವಾಗಿದೆ. ಕೈರಾನದಲ್ಲಿ ಪಕ್ಷಗಳ ಮೈತ್ರಿಯಿಂದ ಬಿಜೆಪಿಗೆ ಆದ ಸೋಲು ಬಿಜೆಪಿಯ ಕೋಮುವಾದಿ ರಾಜಕೀಯಕ್ಕೆ ನೀಡಿದ ಎಚ್ಚರಿಕೆಯಾಗಿದೆ.

ರೈತರ ಸಮಸ್ಯೆಗಳನ್ನು ಪರಿಹರಿಸಿ: ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ, ಸ್ವಾಮಿನಾಥನ್ ಆಯೋಗದ ವರದಿ ಜಾರಿ, ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ಕಿಸಾನ್ ಮಹಾಸಂಘದ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ರೈತರ ಆಂದೋಲನಕ್ಕೆ ಬೆಂಬಲ ಸೂಚಿಸಲು ಸಮಿತಿ ಮುಂದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News