ಅವಕಾಶ ವಂಚಿತರ ಮನವೊಲಿಕೆಗೆ ಪ್ರಯತ್ನ: ಉಪ ಮುಖ್ಯಮಂತ್ರಿ ಪರಮೇಶ್ವರ್

Update: 2018-06-06 14:56 GMT

ಬೆಂಗಳೂರು, ಜೂ.6: ರಾಜ್ಯ ಸಚಿವ ಸಂಪುಟ ರಚನೆಯನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ಸಚಿವರಾಗುವ ಅರ್ಹತೆಯನ್ನು ಹೊಂದಿದ್ದಾರೆ. ಆದರೆ, ಅಂಕಿ-ಸಂಖ್ಯೆಯ ಇತಿಮಿತಿ ಇರುವ ಹಿನ್ನೆಲೆಯಲ್ಲಿ ಕೆಲವರಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಅವಕಾಶ ವಂಚಿತರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುವುದು ಸಹಜ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿ ಅವಕಾಶ ಕೈ ತಪ್ಪಿರುವ ಎಲ್ಲ ಮುಖಂಡರೊಂದಿಗೆ ಪಕ್ಷದ ಅಧ್ಯಕ್ಷನಾಗಿ ನಾನು ಮಾತುಕತೆ ನಡೆಸಿ ಅವರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ರಾಜ್ಯದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದಿದ್ದು, ಸಂಪುಟ ವಿಸ್ತರಣೆ ಆಗಿದೆ. ನೂತನ ಸಚಿವರಿಗೆ ಮುಖ್ಯಮಂತ್ರಿ ಶೀಘ್ರದಲ್ಲೇ ಖಾತೆಗಳನ್ನು ಹಂಚಿಕೆ ಮಾಡಲಿದ್ದಾರೆ. ಆಡಳಿತ ಯಂತ್ರ ಚುರುಕುಗೊಳಿಸುವ ಕುರಿತಂತೆ ನೂತನ ಸಚಿವರಿಗೆ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಮಾರ್ಗದರ್ಶನ ಮಾಡಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

ಮೈತ್ರಿ ಸರಕಾರದಲ್ಲಿ ಜನತೆಗೆ ಉತ್ತಮ ಆಡಳಿತ ನೀಡುವ ದೃಷ್ಟಿಯಿಂದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಶೀಘ್ರದಲ್ಲೇ ಜಾರಿ ಮಾಡಿ ಮೈತ್ರಿ ಪಕ್ಷಗಳು ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದೆ. ರೈತರ ಸಾಲ ಮನ್ನಾ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸರಕಾರ ಬದ್ಧವಾಗಿದೆ ಎಂದು ಪರಮೇಶ್ವರ್ ಹೇಳಿದರು.

ಸಂಪುಟ ಸೇರ್ಪಡೆಗೆ ಕೆಲವರಿಗೆ ಅವಕಾಶ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ. ಅವರೆಲ್ಲರನ್ನೂ ನಮ್ಮ ಹಂತದಲ್ಲಿ ಹಾಗೂ ಹೈಕಮಾಂಡ್ ಹಂತದಲ್ಲಿ ಸಮಾಧಾನ ಹೇಳುವ ಕೆಲಸ ಮಾಡುತ್ತೇವೆ. ಯಾವುದೇ ಗೊಂದಲಗಳಿಗೆ ಅವಕಾಶ ನೀಡುವುದಿಲ್ಲ. ಆದುದರಿಂದ, ಕಾಂಗ್ರೆಸ್ ಪಕ್ಷದಲ್ಲಿ ಆರು ಸ್ಥಾನಗಳನ್ನು ಖಾಲಿ ಇಟ್ಟಿದ್ದೇವೆ. ಇಂತಹ ಸಂದರ್ಭ ಬಂದಾಗ ಅಸಮಾಧಾನಗೊಂಡಿರುವವರನ್ನು ಪರಿಗಣಿಸಬಹುದು. ಜೆಡಿಎಸ್‌ನಲ್ಲಿಯೂ ಒಂದು ಸ್ಥಾನ ಖಾಲಿಯಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಚಿವರಾದ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಬಂಡೆಪ್ಪ ಕಾಶೆಂಪೂರ್, ಝಮೀರ್‌ ಅಹ್ಮದ್‌ ಖಾನ್, ಎಸ್.ಆರ್.ವಾಸು, ವೆಂಕಟರಾವ್‌ನಾಡಗೌಡ, ಸಾ.ರಾ.ಮಹೇಶ್, ಎನ್.ಮಹೇಶ್, ಆರ್.ಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News