ಬ್ರಿಟನ್ ನಲ್ಲಿ ಮಸೀದಿ, ಗುರುದ್ವಾರಕ್ಕೆ ಬೆಂಕಿ

Update: 2018-06-06 16:10 GMT

ಲಂಡನ್, ಜೂ. 6: ಬ್ರಿಟನ್‌ನ ಲೀಡ್ಸ್‌ನಲ್ಲಿರುವ ಪ್ರಸಿದ್ಧ ಗುರುದ್ವಾರ ಮತ್ತು ಮಸೀದಿಗೆ ಮಂಗಳವಾರ ಬಹುತೇಕ ಏಕಕಾಲದಲ್ಲಿ ಬೆಂಕಿ ಹಚ್ಚಲಾಗಿದೆ ಎಂದು ಬ್ರಿಟಿಶ್ ಮಾಧ್ಯಮಗಳು ವರದಿ ಮಾಡಿವೆ.

ಈ ದಾಳಿಗಳನ್ನು ಪೊಲೀಸರು ದ್ವೇಷಾಪರಾಧಗಳು ಎಂಬುದಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.

ಬೀಸ್ಟನ್‌ನ ಹಾರ್ಡಿ ಸ್ಟ್ರೀಟ್‌ನಲ್ಲಿರುವ ಜಾಮಿಯಾ ಮಸ್ಜಿದ್ ಅಬು ಹುರೈರ ಮಸೀದಿ ಮತ್ತು ಲೇಡಿ ಪಿಟ್ ಲೇನ್‌ನಲ್ಲಿರುವ ಗುರು ನಾನಕ್ ನಿಶ್ಕಾಮ್ ಸೇವಕ್ ಜತ ಗುರುದ್ವಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಮಂಗಳವಾರ ಮುಂಜಾನೆ ಸುಮಾರು 3:45ಕ್ಕೆ ಮಸೀದಿಯ ಪ್ರಧಾನ ಬಾಗಿಲಿಗೆ ಬೆಂಕಿ ಕೊಡಲಾಗಿದೆ. ಕೆಲವು ನಿಮಿಷಗಳ ಬಳಿಕ, ಗುರುದ್ವಾರದ ಬಾಗಿಲಿಗೂ ಬೆಂಕಿ ಕೊಡಲಾಗಿದೆ ಎಂದು ಬಿಬಿಸಿ ವರದಿ ತಿಳಿಸಿದೆ.

ಗುರುದ್ವಾರದ ಹೊಸ್ತಿಲಲ್ಲಿ ಪೆಟ್ರೋಲ್ ತುಂಬಿದ ಬಾಟಲಿಗೆ ಬೆಂಕಿ ಕೊಡಲಾಗಿದೆ ಎಂದು ಸಿಖ್ ಪ್ರೆಸ್ ಅಸೋಸಿಯೇಶನ್ ತಿಳಿಸಿದೆ. ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಅವರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು.

‘‘ಈ ಎರಡೂ ಘಟನೆಗಳು ಪರಸ್ಪರ ಸಮೀಪದಲ್ಲಿ ಹಾಗೂ ಏಕಕಾಲದಲ್ಲಿ ಸಂಭವಿಸಿರುವುದರಿಂದ ಅವುಗಳ ನಡುವೆ ನಂಟಿದೆ ಎಂದು ನಾವು ಭಾವಿಸುತ್ತೇವೆ’’ ಎಂದು ತನಿಖಾಧಿಕಾರಿ ರಿಚರ್ಡ್ ಹೋಮ್ಸ್ ಹೇಳಿದರು.

‘‘ನಮ್ಮ ತನಿಖೆ ಈಗಾಗಲೇ ಆರಂಭಿಕ ಹಂತದಲ್ಲಿದೆ. ಆದಾಗ್ಯೂ, ಇವುಗಳನ್ನು ಧಾರ್ಮಿಕ ಸ್ಥಳಗಳು ಎಂಬ ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಅವುಗಳ ಮೇಲೆ ದಾಳಿ ನಡೆಸಲಾಗಿದೆ ಎಂಬು ನಂಬುತ್ತೇವೆ ಹಾಗೂ ಅವುಗಳನ್ನು ದ್ವೇಷಾಪರಾಧಗಳು ಎಂಬುದಾಗಿ ಪರಿಗಣಿಸುತ್ತೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News