ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನದ ಪ್ರಾತಿನಿಧ್ಯವಿಲ್ಲದ 12 ಜಿಲ್ಲೆಗಳು

Update: 2018-06-06 16:15 GMT

ಬೆಂಗಳೂರು, ಜೂ.6: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಇಂದು 25 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಜಿಲ್ಲಾವಾರು ಹಂಚಿಕೆಯಲ್ಲಿ 12 ಜಿಲ್ಲೆಗಳಿಗೆ ಸಚಿವ ಸ್ಥಾನ ಪ್ರಾತಿನಿಧ್ಯ ನೀಡುವಲ್ಲಿ ಕಡೆಗಣಿಸಲಾಗಿದೆ ಎಂಬ ಅಸಮಾಧಾನ ಕೇಳಿಬರುತ್ತಿದೆ.

ಬುಧವಾರ ನಡೆದ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಜೆಡಿಎಸ್ -9, ಕಾಂಗ್ರೆಸ್-14, ಬಿಎಸ್ಪಿ-1 ಹಾಗೂ ಪಕ್ಷೇತರ-1 ಅಭ್ಯರ್ಥಿಗಳು ಸಚಿವ ಸಂಪುಟ ಸೇರಿದ್ದಾರೆ. ಇವರಲ್ಲಿ ಹಳೆಮೈಸೂರು ಪ್ರಾಂತ್ಯದ ಅಭ್ಯರ್ಥಿಗಳು ಹೆಚ್ಚು ಕಂಡುಬಂದಿದ್ದು, ಉತ್ತರ ಕರ್ನಾಟಕ, ಮುಂಬೈ ಕರ್ನಾಟಕ ಮತ್ತು ಮಲೆನಾಡು ಜಿಲ್ಲೆಗಳು ಸಚಿವ ಪ್ರಾತಿನಿಧ್ಯದಿಂದ ವಂಚಿತವಾಗಿವೆ.

ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಕೋಲಾರ, ಧಾರವಾಡ, ಗದಗ, ಉಡುಪಿ, ಯಾದಗಿರಿ, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಿಗೆ ಸಚಿವ ಪ್ರಾತಿನಿಧ್ಯ ಇಲ್ಲವಾಗಿದೆ. ಈ ಜಿಲ್ಲೆಗಳಲ್ಲಿ ಬಹುತೇಕವಾಗಿ ಬಿಜೆಪಿ ಅಭ್ಯರ್ಥಿಗಳೆ ಜಯಗಳಿಸಿರುವುದರಿಂದ ಸಚಿವ ಪ್ರಾತಿನಿಧ್ಯತೆಯನ್ನು ಕಳೆದುಕೊಳ್ಳುವಂತಾಗಿದೆ.

ಕಳೆದ ಬಾರಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪ್ರಮೋದ್ ಮಧ್ವರಾಜ್‌ಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ, ಈ ಬಾರಿ ಅವರು ಪರಾಭವಗೊಂಡಿದ್ದು, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಪಾಲಾಗಿರುವುದರಿಂದ ಜಿಲ್ಲೆಗೆ ಸಚಿವ ಪ್ರಾತಿನಿಧ್ಯ ಸಿಕ್ಕಿಲ್ಲ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಗೆಲವು ಸಾಧಿಸಿದ್ದು, ಉಳಿದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿದೆ. ಹೀಗಾಗಿ ಈ ಜಿಲ್ಲೆಗೂ ಸಚಿವ ಸ್ಥಾನದ ಪ್ರಾತಿನಿಧ್ಯ ಇಲ್ಲವಾಗಿದೆ. ಹಾಗೆಯೇ ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಂಗಮೇಶ್ವರ ಗೆಲುವು ಸಾಧಿಸಿದ್ದು, ಉಳಿದ ಆರು ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಹೀಗಾಗಿ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಕಾಂಗ್ರೆಸ್‌ನ ಯು.ಟಿ.ಖಾದರ್ ಮಾತ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. 

ಇನ್ನು ಗದಗ ಜಿಲೆಯಲ್ಲಿ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಎಚ್.ಕೆ.ಪಾಟೀಲ್‌ರನ್ನು ಹೊರತು ಪಡಿಸಿದರೆ, ಉಳಿದ ಎಲ್ಲ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಹಾಗೆಯೇ ಬಳ್ಳಾರಿ ಜಿಲ್ಲೆಯಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ಸಿಂಗ್ ಗೆಲವು ಸಾಧಿಸಿದ್ದಾರೆ. ಹಡಗಲಿ, ಹಗರಿಬೊಮ್ಮನಹಳ್ಳಿ, ಕಂಪ್ಲಿ, ಬಳ್ಳಾರಿ ಗ್ರಾಮಾಂತರ, ಬಳ್ಳಾರಿ ನಗರ, ಸಂಡೂರು, ಕೂಡ್ಲಿಗಿಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಹಾಗಾಗಿ ಈ ಜಿಲ್ಲೆಗಳು ಸಚಿವ ಪ್ರಾತಿನಿಧ್ಯತೆಯಿಂದ ವಂಚಿತವಾಗಿವೆ.

ಉಳಿದಂತೆ ಕಳೆದ ಬಾರಿ ಉತ್ತರ ಕರ್ನಾಟಕ ಪ್ರದೇಶದಲ್ಲಿ ಸಚಿವರಾಗಿದ್ದ ವಿನಯ್‌ ಕುಲಕರ್ಣಿ, ಬಸವರಾಜ ರಾಯರೆಡ್ಡಿ, ಕೋಳಿವಾಡ, ಉಮಾಶ್ರೀ, ಶರಣ ಪ್ರಕಾಶ್ ಪಾಟೀಲ್ ಈ ಬಾರಿ ಪರಾಭವಗೊಂಡಿರುವುದು ಈ ಭಾಗದ ಜಿಲ್ಲೆಗಳಲ್ಲಿ ಸಚಿವ ಪ್ರಾತಿನಿಧ್ಯಕ್ಕೆ ಹೆಚ್ಚಿನ ಅವಕಾಶ ಇಲ್ಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News