ಎಂ.ಎಂ. ಕಲಬುರ್ಗಿಯವರನ್ನು ಹತ್ಯೆಗೈದವರಲ್ಲಿ ಓರ್ವ ಗೌರಿ ಹಂತಕ?

Update: 2018-06-07 08:39 GMT

ಬೆಂಗಳೂರು, ಜೂ.7: ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಎದುರಿಸುತ್ತಿರುವ 37ರ ಹರೆಯದ ಪುಣೆ ನಿವಾಸಿ 2015ರ ಆಗಸ್ಟ್ 30ರಂದು ಧಾರವಾಡದಲ್ಲಿ ಕನ್ನಡದ ಹಿರಿಯ ಸಾಹಿತಿ, ವಿಚಾರವಾದಿ ಎಂ.ಎಂ. ಕಲಬುರ್ಗಿಯವರನ್ನು ಗುಂಡಿಕ್ಕಿ ಹತ್ಯೆಗೈದಿರುವ ಇಬ್ಬರು ದುಷ್ಕರ್ಮಿಗಳ ಪೈಕಿ ಒಬ್ಬನೆಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು timesofindia.indiatimes.com ವರದಿ ಮಾಡಿದೆ.

ಇಬ್ಬರು ಅಪರಿಚಿತ ವ್ಯಕ್ತಿಗಳು ಧಾರವಾಡದ ಕಲ್ಯಾಣ ನಗರದಲ್ಲಿರುವ ಕಲಬುರ್ಗಿಯವರ ನಿವಾಸಕ್ಕೆ ತೆರಳಿದ್ದು, ಬಾಗಿಲು ತೆರೆದ ಕಲಬುರ್ಗಿ ಪತ್ನಿ ಉಮಾದೇವಿಯೊಂದಿಗೆ ಮಾತನಾಡಿದ್ದರು. ಮನೆಗೆ ಬಂದವರು ಕಲಬುರ್ಗಿಯವರ ಶಿಷ್ಯರಿರಬಹುದು ಎಂದು ಭಾವಿಸಿ ಉಮಾದೇವಿ ಮನೆಯೊಳಗೆ ತೆರಳಿದ್ದರು. ಆಗ ಓರ್ವ ವ್ಯಕ್ತಿ ಅಲ್ಲೇ ಇದ್ದ ಕಲಬುರ್ಗಿಯವರಿಗೆ ಗುಂಡಿಟ್ಟು ಸಾಯಿಸಿದ್ದ. ಕಲಬುರ್ಗಿ ಮನೆಗೆ ಭೇಟಿ ನೀಡಿದ್ದ ಓರ್ವ ವ್ಯಕ್ತಿಯನ್ನು ಪುಣೆ ನಿವಾಸಿ ಅಮೋಲ್ ಕಾಳೆ ಎಂದು ಶಂಕಿಸಲಾಗಿದೆ. ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಾಳೆಯನ್ನು ವಿಶೇಷ ತನಿಖಾ ತಂಡ(ಸಿಟ್)ಇದೀಗ ವಿಚಾರಣೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.

‘‘ಹತ್ಯೆ ದಿನ ಕಲಬುರ್ಗಿ ಮನೆಗೆ ಭೇಟಿ ನೀಡಿದ್ದ ಇಬ್ಬರ ಪೈಕಿ ಕಾಳೆ ಕೂಡ ಒಬ್ಬ ಎಂದು ಕಲಬುರ್ಗಿಯವರ ಹತ್ತಿರದ ಕುಟುಂಬ ಸದಸ್ಯರೊಬ್ಬರು ಗುರುತಿಸಿದ್ದಾರೆ. ಕುಟುಂಬ ಸದಸ್ಯರ ಹೇಳಿಕೆ ಸಾಬೀತುಪಡಿಸಲು ನಮಗೆ ಇನ್ನಷ್ಟು ಸಾಕ್ಷಿಗಳ ಅಗತ್ಯವಿದೆ. ಈ ಹಿಂದೆ ಕಲಬುರ್ಗಿ ಹತ್ಯೆ ಪ್ರಕರಣವನ್ನು ತನಿಖೆ ನಡೆಸಿರುವ ಸಿಐಡಿಯನ್ನು ಸಂಪರ್ಕಿಸಲಿದ್ದೇವೆ’’ ಎಂದು ಸಿಟ್ ಮೂಲಗಳು ತಿಳಿಸಿವೆ ಎನ್ನುವುದು ವರದಿಯಲ್ಲಿದೆ.

ಕಾಳೆ ಪುಣೆಯ ಚಿಂಚ್ವಾಡದ ಮಾನೆಕ್ ಕಾಲೊನಿಯ ಆಕಾಶ್ ಪ್ಲಾಝಾ ಅಟಾರ್ಟ್‌ಮೆಂಟ್‌ನಲ್ಲಿ ತಾಯಿ ಹಾಗೂ ಪತ್ನಿಯೊಂದಿಗೆ ವಾಸಿಸುತ್ತಿದ್ದ. ಕಾಳೆ, ಮನೋಹರ್ ಯಾದವ್(ವಿಜಯಪುರ), ಅಮಿತ್ ದೆಗ್ವೇಕರ್(ಸಿಂಧುದುರ್ಗ) ಹಾಗೂ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್(ಮಂಗಳೂರು)ಅವರನ್ನು ಮೈಸೂರಿನ ವಿಚಾರವಾದಿ ಕೆ.ಎಸ್.ಭಗವಾನ್ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಇತ್ತೀಚೆಗೆ ಬಂಧಿಸಲಾಗಿದೆ. ಬಂಧಿತರಿಗೆ ಗೌರಿ ಹತ್ಯೆ ಕೇಸ್‌ನಲ್ಲಿ ಸಂಬಂಧವಿದೆಯೆಂದು ಗೊತ್ತಾದ ಬಳಿಕ ಸಿಟ್ ತನ್ನ ವಶಕ್ಕೆ ಪಡೆದುಕೊಂಡಿದೆ.

ಕಾಳೆಯ ಸಹೋದ್ಯೋಗಿ ನಿಹಾಲ್ ಅಲಿಯಾಸ್ ದಾದಾ ಗೌರಿ ಹತ್ಯೆಯಲ್ಲಿ ಮುಖ್ಯ ಪಾತ್ರವಹಿಸಿದ್ದಾನೆ ಎಂದು ಶಂಕಿಸಲಾಗಿದೆ. ನಿಹಾಲ್ ಪತ್ತೆಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಸಿಟ್ ಮೂಲಗಳು ತಿಳಿಸಿರುವುದಾಗಿ timesofindia.indiatimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News