ರಾಮಲಿಂಗಾರೆಡ್ಡಿ, ರೋಷನ್ ಬೇಗ್, ರಘುಮೂರ್ತಿ ಬೆಂಬಲಿಗರಿಂದ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ

Update: 2018-06-07 12:38 GMT

ಬೆಂಗಳೂರು, ಜೂ.7: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಸಂಪುಟದಲ್ಲಿ ತಮ್ಮ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.

ಗುರುವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಪ್ರಧಾನ ಕಚೇರಿ ಮುಂಭಾಗ ಜಮಾಯಿಸಿದ ಶಾಸಕರಾದ ರಾಮಲಿಂಗಾರೆಡ್ಡಿ, ರೋಷನ್ ಬೇಗ್, ರಘುಮೂರ್ತಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿ, ಹಿರಿಯ ನಾಯಕರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದು, ಘೋಷಣೆ ಕೂಗಿದರು.

ಬೆಂಗಳೂರು ನಗರದಲ್ಲಿ ಏಳು ಬಾರಿ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿರುವ ರಾಮಲಿಂಗಾರೆಡ್ಡಿ ಅವರಿಗೆ ಸಮ್ಮಿಶ್ರ ಸರಕಾರ ಆಡಳಿತದಲ್ಲಿ ಸಚಿವ ಸಂಪುಟ ರಚನೆಯಲ್ಲಿ ಸೂಕ್ತ ಸ್ಥಾನಮಾನ ನೀಡದೆ ಇರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಬಾರಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ರಾಮಲಿಂಗಾರೆಡ್ಡಿ ಬೆಂಬಲಿಗರು ಆರೋಪಿಸಿದರು.

ಶಿವಾಜಿನಗರದ ಶಾಸಕ ರೋಷನ್ ಬೇಗ್ ಅವರ ಬೆಂಬಲಿಗರು ಸಹ ಕೆಪಿಸಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಪಕ್ಷಕ್ಕೆ ಬಹುತೇಕ ಮುಸ್ಲಿಮರು ಮತ ಹಾಕುತ್ತಾರೆ. ಆದರೆ, ಇದೇ ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದ್ದು, ಸಮುದಾಯದ ಹಿರಿಯ ನಾಯಕರನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಚಿತ್ರದುರ್ಗದಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು, ಕೆಪಿಸಿಸಿ ಮುಂದೆ ಪ್ರತಿಭಟನೆ ನಡೆಸಿ, ಹಿರಿಯ ನಾಯಕರು ಈಗಲೇ ಸ್ಥಳಕ್ಕೆ ಬರಬೇಕು ಎಂದು ಮನವಿ ಮಾಡಿದರು.

: ಭದ್ರಾವತಿ ಶಾಸಕ ಸಂಗಮೇಶ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ನಗರದ ಕುಮಾರಕೃಪಾ ರಸ್ತೆಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಮುಂಭಾಗ ಪ್ರತಿಭಟನೆ ನಡೆಸಿದರು. ಭದ್ರಾವತಿಯಿಂದ ಬಂದಿದ್ದ ಕಾರ್ಯಕರ್ತರು, ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಖಾಲಿ ಉಳಿದಿರುವ ಸಚಿವ ಸ್ಥಾನಗಳಲ್ಲಿ ಸಂಗಮೇಶ್ ಅವರಿಗೆ ನೀಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕರ್ನಾಟಕ ಉಸ್ತುವಾರಿ ವೇಣುಗೋಪಾಲ್ ಈಗಲೇ ಸ್ಥಳಕ್ಕೆ ಧಾವಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದಲ್ಲಿ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದೆಂದು ಶಾಸಕರ ಬೆಂಬಲಿಗರು ಎಚ್ಚರಿಕೆ ನೀಡಿದರು.

ಸಂಚಾರ ದಟ್ಟಣೆ
ತಮ್ಮ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದ ಪರಿಣಾಮ, ಇಲ್ಲಿನ ಕ್ವೀನ್ಸ್ ರಸ್ತೆ, ರಾಜಭವನ ರಸ್ತೆ ಸುತ್ತಮುತ್ತ ಸಂಚಾರ ದಟ್ಟಣೆ ಹೆಚ್ಚಾಗಿ ವಾಹನ ಸವಾರರು ಪರದಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News