ಹಲವರಿಗೆ ಸ್ಥಾನ ತಪ್ಪಲು ನಾನು ಕಾರಣವಲ್ಲ, ಯಾರ ಬಗ್ಗೆ ದ್ವೇಷವೂ ಇಲ್ಲ: ಡಾ.ಜಿ.ಪರಮೇಶ್ವರ್

Update: 2018-06-07 12:48 GMT

ಬೆಂಗಳೂರು, ಜೂ.7: ಜೆಡಿಎಸ್-ಕಾಂಗ್ರೆಸ್ ಸರಕಾರದ ಸಚಿವ ಸಂಪುಟದಲ್ಲಿ ಹಲವರಿಗೆ ಸ್ಥಾನ ತಪ್ಪಿರುವುದು ನಿಜ. ಆದರೆ, ನಾನು ಯಾರನ್ನು ದ್ವೇಷಿಸಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದರು.

ಗುರುವಾರ ನಗರದ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಭಾರತದ ಫ್ರಾನ್ಸ್ ದೇಶದ ರಾಯಭಾರಿಗಳೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಷ್ಟು ಶೀಘ್ರದಲ್ಲಿ ಸಚಿವ ಸಂಪುಟದಲ್ಲಿ ಖಾಲಿ ಇರುವ 6 ಸ್ಥಾನಗಳನ್ನು ತುಂಬುತ್ತೇವೆ. ಕರ್ನಾಟಕದಲ್ಲಿ ಸ್ಥಿರ ಸರಕಾರ ನಿಲ್ಲಬೇಕೆನ್ನುವ ಆಪೇಕ್ಷೆ ನಮ್ಮ ಎಲ್ಲ ಶಾಸಕರಿಗೂ ಇದೆ. ಹೀಗಾಗಿ, ಯಾರನ್ನೂ ದ್ವೇಷಿಸುವ ಪ್ರಮೇಯವಿಲ್ಲ ಎಂದರು.

ಎಲ್ಲರ ಸಹಕಾರ ನಾನು ಕೇಳುತ್ತೇನೆ. ಸಣ್ಣಪುಟ್ಟ ಸಮಸ್ಯೆ ಬದಿಗೊತ್ತಿ ಒಂದಾಗಿ ಹೋಗಬೇಕು. ಅಸಮಾಧಾನ ವ್ಯಕ್ತಪಡಿಸಿದವರನ್ನ ಸಮಾಧಾನ ಪಡಿಸುತ್ತೇನೆ. ಹಿರಿಯರನ್ನ ಸಂಪುಟಕ್ಕೆ ಸೇರಿಸಿಕೊಂಡಿಲ್ಲ, ಅವರಿಗೆ ಮತ್ತೆ ಅವಕಾಶ ಸಿಗಲ್ಲ ಅಂತ ನಾನು ಹೇಳಲ್ಲ ಎಂದು ಪರಮೇಶ್ವರ್ ಹೇಳಿದರು.

ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು ಯಾವ ಇಲಾಖೆ ಎಂಬ ಬಗ್ಗೆ ಇದುವರೆಗೂ ಮಾಹಿತಿ ಇಲ್ಲ. ಯಾವುದೇ ಸಮಯದಲ್ಲಿ ನಿಮ್ಮ ಜೊತೆ ಕೆಲಸ ಮಾಡಲು ತಯಾರಿದ್ದೇವೆಂದು ಹೇಳಿದ್ದಾರೆ. ಎಲ್ಲ ರೀತಿಯ ಸಹಕಾರ ಕೊಡಲು ತಯಾರಿದ್ದಾರೆ ಎಂದ ಅವರು, ಸಚಿವ ಸ್ಥಾನಗಳನ್ನ ತುಂಬುವ ಸಂಬಂಧ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ವೇಣುಗೋಪಾಲ್ ಚರ್ಚೆ ಮಾಡಿದ್ದಾರೆ ಎಂದರು.

ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ದಿನೇಶ್ ಗುಂಡೂರಾವ್ ಜೊತೆ ಪ್ರತ್ಯೇಕವಾಗಿ ಚರ್ಚಿಸಿ 15 ಜನರ ಪಟ್ಟಿ ಅಂತಿಮ ಮಾಡಿದ್ದಾರೆ. ಹೀಗಾಗಿ ಮುಂದೆ ಹಲವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಪಕ್ಷದ ನಿರ್ಧಾರದಂತೆ ಪ್ರತಿ ಆರು ತಿಂಗಳಿಗೊಮ್ಮೆ ಸಚಿವರ ಮೌಲ್ಯ ಮಾಪನ ಮಾಡಲಾಗುತ್ತದೆ. ಸಚಿವರು ಕಳಪೆ ಪ್ರದರ್ಶನ ತೋರಿದರೆ ಕಡ್ಡಾಯವಾಗಿ ಬದಲಾವಣೆ ಮಾಡಲಾಗುತ್ತದೆ ಎಂದು ಹೇಳಿದರು.

ಎಂ.ಬಿ.ಪಾಟೀಲ್ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಂಟು ವರ್ಷದಿಂದ ಅಪಮಾನ ಸಹಿಸಿಕೊಂಡು ಬಂದಿದ್ದೇನೆ. ಎಂ.ಬಿ ಪಾಟೀಲ್ ನನ್ನ ಆತ್ಮೀಯ ಸ್ನೇಹಿತ. ಹೀಗಾಗಿ, ಮನವೊಲಿಸಲು ನಾನು ಅವರ ಬಳಿ ಹೋಗುತ್ತೇನೆ. ನನಗೆ ಯಾವುದೇ ದೊಡ್ಡಸ್ಥಿಕೆ ಇಲ್ಲ ಎಂದರು. ಶಂಕರ್‌ಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಕುರುಬ ಸಮುದಾಯಕ್ಕೆ ಅವಕಾಶ ನೀಡಿಲ್ಲ ಎನ್ನುವುದು ಸರಿಯಲ್ಲ ಎಂದು ತಿಳಿಸಿದರು.

ಬಿಜೆಪಿ ಗಾಳಕ್ಕೆ ಬೀಳಲ್ಲ 
ಬಿಜೆಪಿ ಅತೃಪ್ತ ಶಾಸಕರನ್ನು ಸೆಳೆಯಲು ಮುಂದಾಗಿದೆ. ಆದರೆ, ನಮ್ಮ ಶಾಸಕರು ಅವರ ಗಾಳಕ್ಕೆ ಬೀಳಲ್ಲ. ಸಂಪುಟ ವಿಸ್ತರಣೆ, ಪುನರ್ ರಚನೆಯಾಗುವುದರಿಂದ ಅತೃಪ್ತರಿಗೂ ಅವಕಾಶ ಸಿಗುತ್ತದೆ. ಪಕ್ಷದ ನಿರ್ಧಾರದಂತೆ ಪ್ರತಿ ಆರು ತಿಂಗಳಿಗೊಮ್ಮೆ ಸಚಿವರ ಮೌಲ್ಯ ಮಾಪನ ಮಾಡಲಾಗುತ್ತದೆ.
-ಡಾ.ಜಿ.ಪರಮೇಶ್ವರ್ ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News