ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಗೆ ದಕ್ಕಲಿದೆಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನ?

Update: 2018-06-08 10:29 GMT

ಬೆಂಗಳೂರು, ಜೂ.8: ಸಮ್ಮಿಶ್ರ ಸರಕಾರದ ಸಚಿವ ಸಂಪುಟ ರಚನೆಯಾಗಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ ನಂತರ ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಲವರ ಹೆಸರುಗಳು ಕೇಳಿ ಬರುತ್ತಿವೆ. ಇದರಲ್ಲಿ ಪ್ರಮುಖವಾಗಿರುವ ಹೆಸರು ಬಿ.ಕೆ.ಹರಿಪ್ರಸಾದ್ ಹಾಗು ದಿನೇಶ್ ಗುಂಡೂರಾವ್ ಅವರದ್ದು.

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷಕ್ಕೂ ಸಮರ್ಥ ನಾಯಕತ್ವ ಬೇಕಾಗಿದೆ.  ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಲವರ ಹೆಸರು ಕೇಳಿಬರುತ್ತಿವೆ. ಸಚಿವ ಸ್ಥಾನ ಸಿಗದೇ ಇರುವುದರಿಂದ ಬೇಸರಗೊಂಡಿರುವ ಎಂ.ಬಿ.ಪಾಟೀಲ್ ಅವರೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಒಂದು ವರದಿ ತಿಳಿಸಿದರೆ, ಈಗಾಗಲೇ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ನೀಡಿದ್ದ ಆಫರನ್ನು ಅವರು ನಿರಾಕರಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ಈ ನಡುವೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ್ ಸೂಕ್ತ ಆಯ್ಕೆ ಎಂದು ಪಕ್ಷದ ನಾಯಕರು ವರಿಷ್ಟರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. “ಪಕ್ಷದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದು, ಪಕ್ಷವು ಯಾವುದೇ ಜವಾಬ್ದಾರಿ ವಹಿಸಿಕೊಳ್ಳಲು ನಾನು ಸಿದ್ಧನಾಗಿದ್ದೇನೆ” ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತನ್ನ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ‘ವಾರ್ತಾ ಭಾರತಿ’ಗೆ ಪ್ರತಿಕ್ರಿಯೆ ನೀಡಿದ ಅವರು, “ಪಕ್ಷ ಏನು ಹೇಳುತ್ತದೆಯೋ ಅದನ್ನು ಪಾಲಿಸಲು ಬದ್ಧನಾಗಿದ್ದೇನೆ. ಒಂದು ವಾರದೊಳಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಗೊತ್ತಾಗಲಿದೆ. ಪಕ್ಷವು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದರೆ ವಹಿಸಿಕೊಳ್ಳಲು ನಾನು ಸಿದ್ಧನಾಗಿದ್ದೇನೆ” ಎಂದು ಹೇಳಿದರು.

ಇಷ್ಟೇ ಅಲ್ಲದೆ ಬಿ.ಕೆ.ಹರಿಪ್ರಸಾದ್ ಜೊತೆಗೆ ದಿನೇಶ್ ಗುಂಡೂರಾವ್ ಅವರ ಹೆಸರು ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿದೆ. ಹೈಕಮಾಂಡ್ ಈ ಪ್ರಮುಖ ನಾಯಕರಲ್ಲಿ ಯಾರನ್ನು ಆಯ್ಕೆ ಮಾಡಲಿದೆ ಎನ್ನುವುದು ಇನ್ನು ಒಂದು ವಾರದೊಳಗೆ ಸ್ಪಷ್ಟವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News