ಲಾಲ್‌ಬಾಗ್‌ನಲ್ಲಿ ಗಮನ ಸೆಳೆಯುತ್ತಿರುವ ವೈವಿಧ್ಯಮಯ ಸಾವಯವ ಉತ್ಪನ್ನಗಳ ಪ್ರದರ್ಶನ

Update: 2018-06-08 14:27 GMT

ಬೆಂಗಳೂರು, ಜೂ.8: ನಗರದ ಲಾಲ್‌ಬಾಗ್‌ನ ಮರಿಗೌಡ ಸಭಾಂಗಣದಲ್ಲಿ ಸಾವಯವ, ನೈಸರ್ಗಿಕ, ಪರಿಶುದ್ಧವಾದ ಹಾಗೂ ರಾಸಾಯನಿಕ ಮುಕ್ತ 2 ಸಾವಿರಕ್ಕೂ ಅಧಿಕ ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಸಾರ್ವಜನಿಕರ ಆಕರ್ಷಿಸುತ್ತಿದೆ.

ಕಾಡುಜೇನು, ಜೋನಿ ಬೆಲ್ಲ, ನೈಸರ್ಗಿಕ ಬೆಲ್ಲ, ನಾಟಿ ತುಪ್ಪ, ಅಗಸೆ ಬೀಜ, ಸೂರ್ಯಕಾಂತಿ ಬೀಜ, ಚಿಯಾ ಸೀಡ್, ಕಲೋಂಜಿ, ಕಾಲಜೀರಾ, ತುಳಸಿಬೀಜ, ಪಾಲಿಶ್ ರಹಿತ ಅಕ್ಕಿ-ಕಾಳುಗಳು, ರಾಗಿ, ಜೋಳ, ಸಾಮೆ, ಸಜ್ಜೆ, ನವಣೆ, ಹಾರಕ, ಬರಗು, ಊದಲು, ಕೊರಲು ಸಿರಿಧಾನ್ಯಗಳಿಂದ ತಯಾರಿಸಿದ ವಿವಿಧ ರೀತಿಯ ಉತ್ಪನ್ನಗಳು ಪ್ರದರ್ಶನ ಏರ್ಪಡಿಸಲಾಗಿದೆ. ಅಲ್ಲದೆ, ಪ್ರದರ್ಶನದಲ್ಲಿ ಗ್ರಾಮ ಧರ್ಮ ಸಂಸ್ಥೆಯು ನೈಸರ್ಗಿಕವಾಗಿ ತಯಾರಿಸಿದ ಸಾಂಬಾರು, ರಸಂ, ಚಟ್ನಿ, ವಾಂಗಿಬಾತ್ ಪುಡಿ, ರವೆ ಇಡ್ಲಿ ಹಿಟ್ಟು ಸೇರಿದಂತೆ ಹಲವು ಉತ್ಪನ್ನಗಳ ಪ್ರದರ್ಶನವಿದ್ದು, ಪಕ್ಕದಲ್ಲೆ ಇದ್ದ ಫಾರ್ ಯುವರ್ ವೆಲ್‌ನೆಸ್ ಮಳಿಗೆಯಲ್ಲಿ ಡಯಾಬಿಟಿಸ್‌ಗಾಗಿ ಬಿಲ್ವಸರ, ಕಫ, ಅಸ್ತಮಾಗೆ ವಾಸ ಸಂಜೀವಿನಿ ಹಾಗೂ ಇನ್ನಿತರೆ ಖಾಯಿಲೆಗಳಿಗೆ ಟಾನಿಕ್ ಮತ್ತು ಬಾಡಿ ಮಸಾಜ್ ಎಣ್ಣೆ, ಟೂತ್‌ಪೌಡರ್ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು.

ತ್ವರಿತ್ ತಯಾರ್ ಸಂಸ್ಥೆಯು ಮಿಶ್ರಣ ಮಾಡಿದ ರವೆ ದೋಸೆ, ರವೆ ಉಪ್ಪಿಟ್ಟು, ರಾಗಿ ದೋಸೆ, ರೊಟ್ಟಿ, ಅಕ್ಕಿ ದೋಸೆ, ರೊಟ್ಟಿ ಪುಡಿಗಳನ್ನು ಹಾಗೂ ಈರುಳ್ಳಿ ಸಂಡಿಗೆ, ಶಾವಿಗೆ ಪಾಯಸ, ಈರುಳ್ಳಿ ರೊಟ್ಟಿ ಮಿಕ್ಸ್, ಗೋದಿ ಗುಳುಪಾವಟೆ ಹಾಗೂ ಸಿರಿಧಾನ್ಯಗಳ ವಿವಿಧ ಪದಾರ್ಥಗಳನ್ನು ಕೊಂಡುಕೊಳ್ಳುವಂತೆ ಗ್ರಾಹಕರನ್ನು ಆಕರ್ಷಿಸುತ್ತಿದ್ದರು. ಅಲ್ಲದೆ, ನೈಸರ್ಗಿಕವಾಗಿ ತಯಾರು ಮಾಡಿದ ವಿವಿಧ ರಸಗಳನ್ನು ಪ್ರದರ್ಶನಕ್ಕಿಟ್ಟಿದ್ದು ವಿಶೇಷವಾಗಿತ್ತು.

ಭವಿಷ್ಯದ ಆಹಾರ ಸಿರಿಧಾನ್ಯ ಎಂಬ ಶೀರ್ಷಿಕೆ ಅಡಿಯಲ್ಲಿ ಗ್ರಾಮೀಣ ಕುಟುಂಬ ಸಂಸ್ಥೆ ಏರ್ಪಡಿಸಿದ್ದ ಗ್ರಾಮೀಣ ಕುಟುಂಬ ಉತ್ಸವವು ಇಷ್ಟೆಲ್ಲಾ ಕಂಡು ಬರುತ್ತಿದೆ. ಸಿರಿಧಾನ್ಯಗಳನ್ನು ಕೇಂದ್ರೀಕರಿಸಿಕೊಂಡು ಹಮ್ಮಿಕೊಂಡಿರುವ ಉತ್ಸವದಲ್ಲಿ ನವಣೆ ಕೆಜಿಗೆ 34(25 ಕೆಜಿ ಬ್ಯಾಗ್-850), ಸಾಮೆ ಕೆಜಿಗೆ 65(25 ಕೆಜಿ ಬ್ಯಾಗ್-1625), ಹಾರಕ ಕೆಜಿಗೆ 58(25 ಕೆಜಿ ಬ್ಯಾಗ್-1450), ಊದಲು ಕೆಜಿಗೆ 57(25 ಕೆಜಿ ಬ್ಯಾಗ್-1425), ಕೊರಲು ಕೆಜಿಗೆ 130(25 ಕೆಜಿ ಬ್ಯಾಗ್-3,250), ಬರಗು ಕೆಜಿಗೆ 57(25 ಕೆಜಿ ಬ್ಯಾಗ್-1425) ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.

ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಪರಿಸರ ಅನಾಹುತ ಹಾಗೂ ಆರೋಗ್ಯದ ಅನಾಹುತಗಳನ್ನು ನಾವೇ ಸೃಷ್ಟಿ ಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ, ಆಹಾರದಲ್ಲಿ ಸಮಾತೋಲನ ಕಾಪಾಡಿಕೊಳ್ಳಬೇಕು. ಸಂಪತ್ತು ಭರಿತವಾದ ಆಹಾರವನ್ನು ದೂರವಿಟ್ಟು, ವಿಷಭರಿತವಾದ ಆಹಾರವನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಜೀವನ ಶೈಲಿಯ ಕಾಯಿಲೆಗಳ ನಿಗ್ರಹಕ್ಕೆ ಸಿರಿಧಾನ್ಯಗಳು ಮದ್ದು. ಇರುವಷ್ಟು ದಿನ ಆರೋಗ್ಯಕರವಾಗಿ ಜೀವನ ನಡೆಸಲು ಹಾಗೂ ಶಕ್ತಿಯುತ ಜೀವನಕ್ಕಾಗಿ ಸಿರಿಧಾನ್ಯಗಳು ಪೂರಕ. ಹೀಗಾಗಿ, ನಮ್ಮ ಆಹಾರ ಪದ್ಧತಿಯಲ್ಲಿ ಸಮತೋಲವನ್ನು ಮರು ಸ್ಥಾಪಿಸಿಕೊಳ್ಳಬೇಕು. ಭವಿಷ್ಯದ ಹಾಗೂ ಪ್ರಜ್ಞಾವಂತ ಆಹಾರ ಪದ್ಧತಿಯನ್ನು ಜನರಿಗೆ ಪರಿಚಯ ಮಾಡಿಕೊಡಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಸಾಹಿತಿ ಜಿ.ಎನ್.ಮೋಹನ್, ಟ್ರೇಡ್ ಪ್ರೊಮೋಷನ್‌ನ ವ್ಯವಸ್ಥಾಪಕಿ ಅನುರಾಯ್, ತೋಟಗಾರಿಕೆ ಇಲಾಖೆಯ ಆಯುಕ್ತ ವೈ.ಎಸ್.ಪಾಟೀಲ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮೇಳದ ಅಂಗವಾಗಿ ಮರಗಳ ತಜ್ಞ ಡಾ.ಯಲ್ಲಪ್ಪರೆಡ್ಡಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಜಗದೀಶ್, ಪ್ರಗತಿಪರ ರೈತರಾದ ಬಿ.ಆರ್.ಜಯಂತ್ ನಾಥ್, ರೇಚಣ್ಣ, ಹೊನ್ನೂರು ಪ್ರಕಾಶ್ ಸೇರಿದಂತೆ 10 ಜನರಿಗೆ 2018 ನೆ ಸಾಲಿನ ಗ್ರಾಮೀಣ ಕುಟುಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.

‘ಹಿಂದಿನ ಕಾಲದಲ್ಲಿ ಸಾವಯವ ವಿಧಾನದಲ್ಲಿ ಪೋಷಕಾಂಶವುಳ್ಳ ಆಹಾರ ಪದ್ಧತಿ ಯನ್ನು ಅಳವಡಿಸಿಕೊಂಡಿದ್ದರು. ಅಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದರು. ಆದರೆ, ಹಸಿರು ಕ್ರಾಂತಿಯ ಪ್ರಭಾವದಿಂದಾಗಿ ಬರಡು ಆಹಾರ ಸೇವನೆ ಮಾಡುವುದನ್ನು ಆರಂಭ ಮಾಡಿದ್ದೇವೆ’

-ನಾಗೇಶ ಹೆಗಡೆ ಅಂಕಣಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News