ಪ್ರಣವ್ ಮುಖರ್ಜಿಯ ಹ(ಅ)ಗ್ಗದ ನಡಿಗೆ

Update: 2018-06-09 05:06 GMT

ತುರ್ತು ಪರಿಸ್ಥಿತಿಯ ವಿರುದ್ಧ ಜೆಪಿ ನೇತೃತ್ವದಲ್ಲಿ ನಡೆಯುತ್ತಿದ್ದ ಆಂದೋಲನವನ್ನು ಬಳಸಿಕೊಂಡು ಆರೆಸ್ಸೆಸ್ ಎನ್ನುವ ಜಿರಳೆ ಹೇಗೆ ತನ್ನ ಮೀಸೆಯನ್ನು ದೇಶದ ಮುಖ್ಯವಾಹಿನಿಯ ಒಳಗೆ ನುಗ್ಗಿಸಿತು ಎನ್ನುವುದು ಈಗ ಇತಿಹಾಸ. ಗಾಂಧೀಜಿಯ ಹತ್ಯೆ ಕಳಂಕದಿಂದ ದೇಶದಲ್ಲಿ ಆರೆಸ್ಸೆಸ್ ಅಸ್ಪಶ್ಯವಾಗಿತ್ತು. ಸ್ವಾತಂತ್ರ ಹೋರಾಟದಲ್ಲಿ ಯಾವುದೇ ಕೊಡುಗೆ ನೀಡದ, ಜೊತೆಗೆ ಗಾಂಧೀಜಿಯಂತಹ ಮಹಾತ್ಮನನ್ನು ಕೊಂದ ಆರೋಪ ಹೊತ್ತಿದ್ದ ಆರೆಸ್ಸೆಸ್ ಕೆಲ ಕಾಲ ನಿಷೇಧಕ್ಕೂ ಒಳಪಟ್ಟು, ಬಳಿಕ ಜನರ ನಡುವೆ ಗುರುತಿಸಿಕೊಳ್ಳಲು ತುರ್ತುಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿತು. ಹಿಂದುತ್ವವೆನ್ನುವ ಸರ್ವಾಧಿಕಾರಿ ತಳಹದಿಯ ಮೇಲೆ ಕಟ್ಟಿ ನಿಲ್ಲಿಸಲ್ಪಟ್ಟ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ನಾಯಕರು ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡುತ್ತಾರೆನ್ನುವುದೇ ಒಂದು ಅಣಕ. ಜಯಪ್ರಕಾಶ್ ನಾರಾಯಣ್‌ರಂತಹ ನಾಯಕರು ಒಂದಿಷ್ಟು ದೂರದೃಷ್ಟಿಯನ್ನು ಹೊಂದಿ ಆ ಆಂದೋಲನದಲ್ಲಿ ಆರೆಸ್ಸೆಸ್‌ನ ಜೊತೆಗೆ ಅಂತರ ಕಾಯ್ದುಕೊಳ್ಳುತ್ತಿದ್ದರೆ ಆರೆಸ್ಸೆಸ್ ಇಷ್ಟು ಬೇಗ ದೇಶದಲ್ಲಿ ಹರಡಿಕೊಳ್ಳುತ್ತಿರಲಿಲ್ಲ. ಜೆಪಿ ಚಳವಳಿಯ ಒಂದು ತಪ್ಪಿನ ಫಲವಾಗಿ, ಇಂದು ಆರೆಸ್ಸೆಸ್ ದೇಶಾದ್ಯಂತ ಬಂದಣಿಕೆಯಂತೆ ಹಬ್ಬಿಕೊಂಡಿದೆ. ಜೊತೆಗೆ ದೇಶದ ಆ ಬಳಿಕದ ವಿವಿಧ ನಾಯಕರು ಆರೆಸ್ಸೆಸ್ ಕುರಿತಂತೆ ತಳೆದ ಮೃದು ನಿಲುವಿಗೆ ದೇಶ ಇಂದು ಬೆಲೆ ತೆರುತ್ತಿದೆ. ಇದೀಗ ಪ್ರಣವ್ ಮುಖರ್ಜಿ ಎನ್ನುವ ಕಾಂಗ್ರೆಸ್‌ನ ಹಿರಿಯ ನಾಯಕ ಆರೆಸ್ಸೆಸ್‌ನ ಸಭೆಯಲ್ಲಿ ಭಾಗವಹಿಸಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಕುರಿತಂತೆ ಚರ್ಚೆ ನಡೆಯುತ್ತಿದೆ.

ಮುಖರ್ಜಿಯ ಆರೆಸ್ಸೆಸ್ ಭೇಟಿ ಕಾಂಗ್ರೆಸ್‌ನೊಳಗಿರುವ ಬ್ರಾಹ್ಮಣ ನಾಯಕರ ಮೃದು ಹಿಂದುತ್ವವನ್ನು ಎತ್ತಿ ಹಿಡಿದಿದೆ ಎಂದು ಹಲವರು ಟೀಕಿಸಿದರೆ, ಪ್ರಣವ್ ಮುಖರ್ಜಿಯವರು ಆರೆಸ್ಸೆಸ್ ಸಭೆಯಲ್ಲಿ ದೇಶದ ಬಹುತ್ವ, ಸಹಿಷ್ಣುತೆಯ ಕುರಿತಂತೆ ಮಾತನಾಡಿ, ಅವರಿಗೆ ಮುಜುಗರ ಉಂಟು ಮಾಡಿದ್ದಾರೆ ಎಂದೂ ವ್ಯಾಖ್ಯಾನಿಸುವವರಿದ್ದಾರೆ. ಬಾಬರಿ ಮಸೀದಿ ಬೀಳಿಸಲು ಹೇಗೆ ಕಾಂಗ್ರೆಸ್‌ನೊಳಗಿರುವ ನರಸಿಂಹ ರಾವ್‌ನಂತಹ ಬ್ರಾಹ್ಮಣರು ತಮ್ಮ ಕೊಡುಗೆಯನ್ನು ಪರೋಕ್ಷವಾಗಿ ಆರೆಸ್ಸೆಸ್‌ಗೆ ನೀಡಿದರು. ಅದರ ಮುಂದುವರಿದ ಭಾಗವಾಗಿ ಪ್ರಣವ್ ಮುಖರ್ಜಿ ಆರೆಸ್ಸೆಸ್ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವವರೂ ಇದ್ದಾರೆ.

ಪ್ರಣವ್ ಮುಖರ್ಜಿಯವರು ಆರೆಸ್ಸೆಸ್‌ಗೆ ಪ್ರಜಾಸತ್ತೆ ಮತ್ತು ಸಂವಿಧಾನದ ಆಶಯಗಳನ್ನು ಬೋಧಿಸಿದ್ದಾರೆ ಎಂದು ಕಾಂಗ್ರೆಸ್ ಸಮರ್ಥಿಸಿ ಮುಜುಗರದಿಂದ ಪಾರಾಗಲು ಒದ್ದಾಡುತ್ತಿದೆ. ಈ ಹೊತ್ತಿನಲ್ಲಿ ಮುಖರ್ಜಿಯವರ ಪುತ್ರಿ ಮಾತ್ರ ತನ್ನ ತಂದೆಯ ಕೃತ್ಯವನ್ನು ಸ್ಪಷ್ಟ ಮಾತುಗಳಲ್ಲಿ ಖಂಡಿಸಿದ್ದಾರೆ. ಪ್ರಣವ್ ಮುಖರ್ಜಿ ಹತ್ತು ಹಲವು ಭಿನ್ನಾಭಿಪ್ರಾಯಗಳ ಜೊತೆ ಇದ್ದೂ ಇಲ್ಲ ಎಂಬಂತೆ ಕಾಂಗ್ರೆಸ್‌ನೊಳಗೆ ಒಂದು ಅಂತರ ಇಟ್ಟುಕೊಂಡು ಬಂದವರು. ಆ ಪಕ್ಷದ ಮೂಲಕ ಸಕಲ ಅಧಿಕಾರಗಳನ್ನು ಅನುಭವಿಸಿದವರು. ತನ್ನನ್ನು ಪ್ರಧಾನಿಯಾಗಿಸದ ಕಾಂಗ್ರೆಸ್‌ನ ಕುರಿತಂತೆ ಒಳಗೊಳಗೆ ಕನಲುತ್ತಾ ಬಂದವರು. ಬಂಗಾಳಿ ಬ್ರಾಹ್ಮಣರಾಗಿರುವ ಮುಖರ್ಜಿ ಮಹಾ ಧಾರ್ಮಿಕ ವ್ಯಕ್ತಿಯೂ ಹೌದು. ರಾಷ್ಟ್ರಪತಿಯಾದ ಬಳಿಕವೂ ವರ್ಷಕ್ಕೆ ನಾಲ್ಕು ಬಾರಿ ತಿರುಪತಿಗೆ ದರ್ಶನ ನೀಡುತ್ತಿದ್ದವರು. ತಿರುಪತಿಯಲ್ಲಿ ಅಂಗಿ ಬಿಚ್ಚಿ ನಿಂತ ವಿವಿಧ ಭಂಗಿಗಳ ಮೂಲಕ ಪತ್ರಿಕೆಗಳಲ್ಲಿ ರಾರಾಜಿಸುತ್ತಾ ಬಂದವರು. ಒಬ್ಬ ಉನ್ನತ ಸ್ಥಾನದಲ್ಲಿರುವ ರಾಜಕೀಯ ವ್ಯಕ್ತಿ ಧಾರ್ಮಿಕನಾಗಿರಬಾರದು ಎಂದೇನೂ ಇಲ್ಲ. ಆದರೆ ಅದನ್ನು ಆಗಾಗ ಸಾರ್ವಜನಿಕ ಸ್ಥಳಗಳಲ್ಲಿ ಮುಜುಗರವಾಗುವ ರೀತಿಯಲ್ಲಿ ಪ್ರದರ್ಶಿಸುವುದರಿಂದ ದೇಶಕ್ಕೆ ತಪ್ಪು ಸಂದೇಶ ರವಾನೆಯಾಗಬಹುದು. ಅಂತಹ ಸಂದೇಶವನ್ನು ಅವರು ಉದ್ದೇಶಪೂರ್ವಕವಾಗಿ ಆಗಾಗ ನೀಡುತ್ತಿದ್ದರು. ಬಿಜೆಪಿಯೂ ಮುಖರ್ಜಿಯ ಕುರಿತಂತೆ ಹೆಚ್ಚು ಒಲವನ್ನು ಇಟ್ಟುಕೊಂಡು ಬಂದಿದೆ. ಇದೀಗ ಆರೆಸ್ಸೆಸ್‌ನ ಆಹ್ವಾನ ಬಂದಿರುವುದು, ಸ್ವತಃ ಮುಖರ್ಜಿಯವರೇ ತನಗೆ ಸಂದ ದೊಡ್ಡ ಗೌರವ ಎಂದು ಭಾವಿಸಿಕೊಂಡಿರುವಾಗ ಪರ ವಿರುದ್ಧ ಚರ್ಚೆಗೆ ಏನು ಅರ್ಥ ಉಳಿದಿದೆ?

   ಒಬ್ಬ ರಾಜಕೀಯ ನಾಯಕ ತನ್ನ ವಿರೋಧಿ ಸಿದ್ಧಾಂತವಿರುವ ಪಕ್ಷ, ಸಂಘಟನೆ ಹಮ್ಮಿಕೊಳ್ಳುವ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಬಾರದು ಎಂದಿಲ್ಲ. ಯಾಕೆಂದರೆ ಸೇರಿದ ಸಾರ್ವಜನಿಕರೆಲ್ಲರೂ ಆ ಸಂಘಟನೆಯ ಸದಸ್ಯರಾಗಿರಬೇಕಾಗಿಲ್ಲವಲ್ಲ? ಇಂತಹ ಸಂದರ್ಭದಲ್ಲಿ ತನ್ನ ಚಿಂತನೆ, ಸಿದ್ಧಾಂತವನ್ನು ಆ ವೇದಿಕೆಯ ಮೂಲಕ ಸಾರ್ವಜನಿಕರಿಗೆ ತಿಳಿಸುವ ಅವಕಾಶ ದೊರಕಿದಂತಾಗುತ್ತದೆ. ಆದರೆ ಆರೆಸ್ಸೆಸ್ ಎನ್ನುವ ಸಂಘಟನೆ ಪ್ರಜಾಸತ್ತೆಗೆ ವಿರೋಧವಾದ ಸಿದ್ಧಾಂತವನ್ನು ಹೊಂದಿದೆ. ಸಂವಿಧಾನವನ್ನು ಅದು ಪೂರ್ಣ ಪ್ರಮಾಣದಲ್ಲಿ ಒಪ್ಪಿಲ್ಲ ಮಾತ್ರವಲ್ಲ, ಅದರ ಸ್ಥಾಪಕ ಹೆಡಗೇವಾರ್ ಪ್ರಜಾಸತ್ತಾತ್ಮಕ ಜಾತ್ಯತೀತ ಭಾರತದ ಮೇಲೆ ನಂಬಿಕೆಯಿರಿಸಿದವರಲ್ಲ. ಈಗ ಇರುವ ರಾಷ್ಟ್ರಧ್ವಜವನ್ನು ಸ್ಪಷ್ಟ ಮಾತುಗಳಲ್ಲಿ ವಿರೋಧಿಸಿದವರು. ಈ ದೇಶ ‘ಹಿಂದೂ ದೇಶ’ ಆಗಬೇಕು ಎಂದು ಬಯಸಿದವರು. ಉಳಿದವರೆಲ್ಲ ದೇಶ ಬಿಟ್ಟು ಹೋಗಬೇಕು ಎನ್ನುವಂತಹ ಹೇಳಿಕೆಯನ್ನು ನೀಡಿದವರು.

ಮುಖ್ಯವಾಗಿ, ಮಹಾತ್ಮ ಗಾಂಧೀಜಿಯ ಹತ್ಯೆಯಲ್ಲಿ ಈ ಸಂಘಟನೆ ಆರೋಪಿ ಸ್ಥಾನದಲ್ಲಿ ನಿಂತಿದೆ. ದೇಶದಲ್ಲಿ ಸಂಭವಿಸಿದ ಹಲವು ಕೋಮುಗಲಭೆಗಳಲ್ಲಿ ಆರೆಸ್ಸೆಸ್ ಕೈವಾಡವಿದೆ. ಅಷ್ಟೇ ಏಕೆ? ದೇಶದಲ್ಲಿ ಇತ್ತೀಚೆಗೆ ನಡೆದ ಸ್ಫೋಟಗಳಿಗೆ ಸಂಬಂಧಿಸಿ ಆರೆಸ್ಸೆಸ್ ಮುಖ್ಯಸ್ಥ ಇಂದ್ರೇಶ್ ಕುಮಾರ್ ಹೆಸರು ಪ್ರಸ್ತಾಪವಾಗಿತ್ತು. ಇಂತಹ ಸಂಘಟನೆಯೊಂದು ತನ್ನ ಸಭೆಗೆ ನೀಡುವ ಆಹ್ವಾನವನ್ನು ಸ್ವೀಕರಿಸುವ ಮುನ್ನ ಮಾಜಿ ರಾಷ್ಟ್ರಪತಿಯಾಗಿರುವ ಮುಖರ್ಜಿಯವರಿಗೆ ಕೆಲವು ಹೊಣೆಗಾರಿಕೆಗಳಿದ್ದವು. ಇಷ್ಟಕ್ಕೂ ಆರೆಸ್ಸೆಸ್ ಆಹ್ವಾನಿಸಿದ ಸಭೆ ಒಂದು ಸಾರ್ವಜನಿಕ ಕಾರ್ಯಕ್ರಮವಾಗಿದ್ದರೆ ಬೇರೆಯಿತ್ತು. ಆದರೆ, ಅದು ಆರೆಸ್ಸೆಸ್‌ನ ಶಿಕ್ಷಾವರ್ಗಕ್ಕೆ ಸಂಬಂಧಪಟ್ಟ ಸಭೆಯಾಗಿತ್ತು. ಅಂದರೆ, ಗೋಳ್ವಾಲ್ಕರ್‌ರ ಚಿಂತನಗಂಗೆಯನ್ನು ಮೆದುಳಲ್ಲಿ ಈಗಾಗಲೇ ತುಂಬಿಕೊಂಡ ವರ್ಗ ಅದು. ಅವರೆಲ್ಲರಿಗೂ ಸಂವಿಧಾನ, ಪ್ರಜಾಸತ್ತೆ ಎಂದರೆ ಏನು ಎನ್ನುವುದು ಸ್ಪಷ್ಟವಾಗಿ ಗೊತ್ತಿದೆ. ಆ ಕಾರಣಕ್ಕಾಗಿಯೇ ಅದನ್ನು ಉರುಳಿಸಿ ಆ ಜಾಗದಲ್ಲಿ ಗೋಳ್ವಾಲ್ಕರ್ ಅವರ ಚಿಂತನೆಗಳನ್ನು ತುಂಬ ಬೇಕು ಎಂಬ ದೊಡ್ಡ ದುರುದ್ದೇಶದೊಂದಿಗೆ ಸೃಷ್ಟಿಯಾಗಿರುವ ಸಂಘಟನೆಯ ಕಾರ್ಯಕರ್ತರು ಅವರು. ಈ ದೇಶದ ಬಹುತ್ವವನ್ನು ನಾಶ ಮಾಡಿ, ಅಲ್ಲಿ ಹಿಂದುತ್ವವೆನ್ನುವ ಏಕಸಿದ್ಧಾಂತವನ್ನು ಜಾರಿಗೊಳಿಸುವುದೇ ಈ ಶಿಕ್ಷಾವರ್ಗದ ಅಂತಿಮ ಉದ್ದೇಶವಾಗಿದೆ. ಮುಖರ್ಜಿಯವರು ಅಲ್ಲಿ ಬಂದು ಏನು ಮಾತನಾಡುತ್ತಾರೆ ಎನ್ನುವುದು ಗೊತ್ತಿದ್ದೂ ಅವರನ್ನು ಆ ಸಂಘಟನೆ ಆಹ್ವಾನಿಸಿದೆ. ಇದೊಂದು ಸಂಚು ಎನ್ನುವುದನ್ನು ಮುಖರ್ಜಿಗೆ ಗೊತ್ತಿಲ್ಲದೇ ಇಲ್ಲ. ದುರದೃಷ್ಟವಶಾತ್, ಆ ಸಂಚಿನಲ್ಲಿ ಸ್ವತಃ ಮುಖರ್ಜಿಯೂ ಕೈಜೋಡಿಸಿದ್ದಾರೆ.

ಪ್ರಣವ್ ಮುಖರ್ಜಿ ಆ ಸಭೆಯಲ್ಲಿ ಭಾಗವಹಿಸಿ ಈ ದೇಶದ ಬಹುತ್ವ ಮತ್ತು ಸಹಿಷ್ಣುತೆಯ ಕುರಿತಂತೆ ಮಾತನಾಡಿದರು ಎಂದು ಕಾಂಗ್ರೆಸ್ ಹೇಳುತ್ತಿದೆ. ಮಾಧ್ಯಮಗಳೂ ಇದನ್ನೇ ಬಣ್ಣಿಸುತ್ತಿವೆ. ಆದರೆ ಇದೇ ಸಂದರ್ಭದಲ್ಲಿ ಅವರು ಹೆಡಗೇವಾರ್ ಅವರನ್ನು ‘ಈ ದೇಶದ ಹೆಮ್ಮೆಯ ಪುತ್ರ’ ಎಂದು ಬಣ್ಣಿಸಿದ್ದಾರೆ. ಹೆಡಗೇವಾರ್ ಅವರು ಈ ದೇಶದ ಜಾತ್ಯತೀತತೆಯ ಕುರಿತಂತೆ, ಸಂವಿಧಾನದ ಕುರಿತಂತೆ, ರಾಷ್ಟ್ರಧ್ವಜದ ಕುರಿತಂತೆ ಯಾವ ಅಭಿಪ್ರಾಯವನ್ನು ಹೊಂದಿದ್ದರು ಎನ್ನುವುದು ಪ್ರಣವ್ ಮುಖರ್ಜಿಗೆ ತಿಳಿಯದ್ದಲ್ಲ. ಇದೊಂದು ರೀತಿಯಲ್ಲಿ ಪ್ರಣವ್ ಮುಖರ್ಜಿಯವರ ಅಗ್ಗದ ಮತ್ತು ಹಗ್ಗದ ನಡಿಗೆ. ಒಂದು ಕೈಯಲ್ಲಿ ಹಿಂದುತ್ವ, ಮಗದೊಂದು ಕೈಯಲ್ಲಿ ಬಹುತ್ವವನ್ನು ಹಿಡಿದುಕೊಂಡು ಹೊರಟಿದ್ದಾರೆ. ಅಲ್ಲಿಗೂ ಇಲ್ಲಿಗೂ ಏಕಕಾಲದಲ್ಲಿ ಸಲ್ಲುವ ಪ್ರಯತ್ನ ಅವರದಾಗಿದೆ.

ಈ ದೇಶದ ಸ್ವಾತಂತ್ರ ಚಳವಳಿಯಲ್ಲಿ ಪಾತ್ರವಹಿಸದ, ಈ ದೇಶದ ಬಹುತ್ವವನ್ನು ಸಹಿಸದ, ದೇಶ ಒಂದು ನಿರ್ದಿಷ್ಟ ಧರ್ಮೀಯರಿಗಷ್ಟೇ ಮೀಸಲಾಗಿರಬೇಕು ಎಂದು ಬಯಸಿದ ಹೆಡಗೇವಾರ್‌ರನ್ನು ದೇಶದ ಹೆಮ್ಮೆಯ ಪುತ್ರ ಎಂದು ಕರೆಯಲು ಅವರಲ್ಲಿದ್ದ ಕಾರಣಗಳೇನು? ಸಹಿಷ್ಣುತೆ ಮತ್ತು ಹೆಡಗೇವಾರ್ ಜೊತೆ ಜೊತೆಯಾಗಿ ಸಾಗಲಾರದ ವಿಷಯಗಳು ಎನ್ನುವುದು ಗೊತ್ತಿದ್ದೂ ಅವರು ಈ ಮಾತುಗಳನ್ನಾಡಿದ್ದಾರೆ ಎಂದರೆ, ಅದರ ಅರ್ಥ ಆರೆಸ್ಸೆಸ್‌ನ ಸಂವಿಧಾನ ವಿರೋಧಿ ಸಂಚುಗಳಿಗೆ ಅವರೂ ಪರೋಕ್ಷ ಕೈಜೋಡಿಸಿದ್ದಾರೆ ಎಂದೇ ಅಲ್ಲವೆ? ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಮುಖರ್ಜಿ ಆರೆಸ್ಸೆಸ್ ಕುರಿತ ವಿಶ್ವಾಸಾರ್ಹತೆಯನ್ನು ದೇಶದಲ್ಲೆ ಹೆಚ್ಚಿಸಿದ್ದಾರೆ ಮಾತ್ರವಲ್ಲ, ಕಾಂಗ್ರೆಸ್‌ನ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಕೆಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News