ದಲಿತ ಚಳವಳಿಗಾರರಿಗೆ ನಕ್ಸಲ್ ಪಟ್ಟ ಕಟ್ಟುವ ಹುನ್ನಾರ: ಎ.ಕೆ.ಸುಬ್ಬಯ್ಯ

Update: 2018-06-09 15:05 GMT

ಬೆಂಗಳೂರು, ಜೂ.9: ದಲಿತ ಚಳವಳಿ ನಾಯಕರಾದ ಡಾ.ಪ್ರಕಾಶ್ ಅಂಬೇಡ್ಕರ್ ಹಾಗೂ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ನಕ್ಸಲ್ ಎಂಬ ಹಣೆಪಟ್ಟಿ ಕಟ್ಟಲು ಮುಂದಾಗಿರುವುದು ತೀವ್ರ ಖಂಡನೀಯ ಎಂದು ವಿಚಾರವಾದಿ ಎ.ಕೆ.ಸುಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಮಾ ಕೋರೆಗಾಂವ್ ವಿಜಯೋತ್ಸವದ ದಿನದ ಅಂಗವಾಗಿ ನಡೆದ ಕೋರೆಗಾಂವ್ ದಿವಸ್ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಕಾಶ್ ಅಂಬೇಡ್ಕರ್ ಹಾಗೂ ಜಿಗ್ನೇಶ್ ಮೇವಾನಿ ಮೇಲೆ ಎಫ್‌ಐಆರ್ ದಾಖಲಾಗಿದೆ. ಅದನ್ನು ಬಳಸಿಕೊಂಡು ಬಿಜೆಪಿಯು, ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆ ಎಂದು ಮಾವೋವಾದಿ ನಾಯಕರು ಬರೆದಿರುವ ಪತ್ರದಲ್ಲಿ ಈ ಇಬ್ಬರ ಹೆಸರೂ ಇದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ದಲಿತ ಚಳವಳಿಯನ್ನು ನಾಶ ಮಾಡಲು ಮುಂದಾಗಿದ್ದಾರೆ ಎಂದರು.

ದೇಶದಲ್ಲಿ ಜನರು ಆಯ್ಕೆ ಮಾಡಿದ ಜನಪ್ರತಿನಿಧಿಯ ಕೊಲೆಗೆ ಸಂಚು ರೂಪಿಸಲಾಗಿದೆ ಎನ್ನುವುದು ಅಕ್ಷ್ಯಮ್ಯ ಅಪರಾಧ. ಇಲ್ಲಿ ಯಾರನ್ನು ಯಾರೂ ಕೊಲ್ಲಲು ಅವಕಾಶವಿಲ್ಲ. ಅದನ್ನು ನಾವು ವಿರೋಧ ಮಾಡುತ್ತೇವೆ. ಆದರೆ, ಮಾವೋವಾದಿಗಳು ಪ್ರಧಾನಿ ಹತ್ಯೆಗೆ ಸಂಚು ರೂಪಿಸಿದ್ದಾರೆಯೇ ಎಂಬುದರ ಬಗ್ಗೆ ವಿಶ್ವಾಸವಿಲ್ಲ. ಕೇವಲ ಪ್ರಚಾರಕ್ಕಾಗಿ ಇದನ್ನು ಸೃಷ್ಟಿಸಲಾಗಿದೆ ಎಂಬ ಅನುಮಾನ ಕಾಡುತ್ತಿದ್ದು, ನಿಷ್ಪಕ್ಷವಾದ ತನಿಖೆ ಮಾಡಬೇಕು. ತಪ್ಪು ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಭೀಮಾ ಕೋರೆಗಾಂವ್‌ನ ಪ್ರಕರಣದಲ್ಲಿ ಅಲ್ಲಿನ ಬಲಾಢ್ಯ ಸಮುದಾಯದವಾದ ಮರಾಠ ಕ್ಷತ್ರಿಯ ಸಮುದಾಯದ ಮೇಲೆ ಎಫ್‌ಐಆರ್ ದಾಖಲಾಗಬೇಕಿದೆ. ಕೋರೆಗಾಂವ್ ದಿವಸ್ ಆಚರಣೆ ಸಂದರ್ಭದಲ್ಲಿ ಅಮಾಯಕ ಯುವಕರನ್ನು ದಲಿತ ಸಮುದಾಯದ ವಿರುದ್ಧ ಎತ್ತಿಕಟ್ಟಿ ಪ್ರಚೋದಿಸುವ ಕೆಲಸ ಮಾಡಿದ್ದರು. ಶಾಂತಿಯುತವಾಗಿ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ದಲಿತರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದರು. ಪ್ರಚೋದಿಸುವ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಸಾಕ್ಷಾಧಾರಗಳಿವೆ. ಆದರೂ, ಅವರ ಮೇಲೆ ಕ್ರಮ ಕೈಗೊಳ್ಳದೆ ಪ್ರಕಾಶ್ ಅಂಬೇಡ್ಕರ್ ಮತ್ತು ಜಿಗ್ನೇಶ್ ಮೇವಾನಿ ಮೇಲೆ ಕೇಸ್ ದಾಖಲಿಸಿದ್ದರು ಎಂದು ತಿಳಿಸಿದರು.

ಮುಂದಿನ ವರ್ಷ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆ ಮೋದಿಗೆ ನುಂಗಲಾರದ ತುತ್ತಾಗಿದೆ. ಅಲ್ಲದೆ, ಜಿಗ್ನೇಶ್ ಮೇವಾನಿ ಮತ್ತು ಪ್ರಕಾಶ್ ಅಂಬೇಡ್ಕರ್ ದೇಶದಾದ್ಯಂತ ಮೋದಿ, ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ದಲಿತರನ್ನು ಜಾಗೃತಿಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮೋದಿ ಸರಕಾರದ ನಾಲ್ಕು ವರ್ಷಗಳ ಅಧಿಕಾರ ಅವಧಿಯನ್ನು ಪ್ರಶ್ನೆ ಮಾಡುತ್ತಿದ್ದು, ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳು ಎಷ್ಟು ಈಡೇರಿವೆ ಎಂದು ನೇರವಾಗಿ ಪ್ರಶ್ನಿಸುತ್ತಿದ್ದಾರೆ. ಹೀಗಾಗಿ, ಅವರ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೋಮುಸೌಹಾರ್ದ ವೇದಿಕೆಯ ತ್ರಿಮೂರ್ತಿ, ದಲಿತ ಮುಖಂಡರಾದ ಎನ್.ವೆಂಕಟೇಶ್, ಕೃಷ್ಣಾರೆಡ್ಡಿ ಉಪಸ್ಥಿತರಿದ್ದರು.

ಬಿಜೆಪಿ ಮತ್ತು ಸಂಘಪರಿವಾರ ದಲಿತ ನಾಯಕರಾದ ಜಿಗ್ನೇಶ್ ಮೇವಾನಿ ಮತ್ತು ಪ್ರಕಾಶ್ ಅಂಬೇಡ್ಕರ್ ಮೇಲೆ ನಡೆಸಲಾಗುತ್ತಿರುವ ಸುಳ್ಳು ಅಪಪ್ರಚಾರವನ್ನು ನಿಲ್ಲಿಸಬೇಕು. ಅವರ ಮೇಲೆ ದಾಖಲಾಗಿರುವ ಆಧಾರ ರಹಿತ ಎಫ್‌ಐಆರ್ ಹಿಂಪಡೆಯಬೇಕು. ದೇಶದಾದ್ಯಂತ ದಲಿತ, ದಮನಿತರ ಮೇಲೆ ದಾಳಿ ನಡೆಸುತ್ತಿರುವ ಫ್ಯಾಶಿಸ್ಟರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಸಕ ಜಿಗ್ನೇಶ್ ಮೇವಾನಿಗೆ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಎಫ್ ಭದ್ರತೆ ಕಲ್ಪಿಸಬೇಕು.
-ಎ.ಕೆ.ಸುಬ್ಬಯ್ಯ, ಹಿರಿಯ ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News