ರೈತರ ಬಗ್ಗೆ ಅಪ್ಪ-ಮಕ್ಕಳಿಗೆ ಕಾಳಜಿ ಇದ್ದಿದ್ದರೆ ಕಾಂಗ್ರೆಸ್‌ಗೆ ಸಾಲಮನ್ನಾ ಷರತ್ತು ಹಾಕಬೇಕಿತ್ತು: ಯಡಿಯೂರಪ್ಪ

Update: 2018-06-09 13:03 GMT

ಬೆಂಗಳೂರು, ಜೂ.9: ಅಪ್ಪ-ಮಕ್ಕಳಿಗೆ ನಿಜವಾಗಲೂ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ, ರೈತರ ಸಾಲಮನ್ನಾವಾದರೆ ಮಾತ್ರ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್‌ಗೆ ಷರತ್ತು ಹಾಕಬೇಕಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದರು.

ಶನಿವಾರ ನಗರದ ಮಲ್ಲೇಶ್ವರಂನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರೈತ ಮೋರ್ಚಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಲಮನ್ನಾ ಮಾಡುವ ಷರತ್ತನ್ನು ಕಾಂಗ್ರೆಸ್ ಮುಂದಿಡಬೇಕಿತ್ತು. ಅದರ ಬದಲು ಅಧಿಕಾರ ಉಳಿಸಿಕೊಳ್ಳಲು ಬೇಕಾದ ಷರತ್ತು ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಸಾಲ ಮನ್ನಾಕ್ಕಾಗಿ 15 ದಿವಸ ಸಮಯ ಕೇಳಿದ್ದಾರೆ. ಇನ್ನು 1 ತಿಂಗಳ ಕಾಲಾವಕಾಶ ನೀಡುತ್ತೇವೆ. ಬಜೆಟ್ ಅಧಿವೇಶನದವರೆಗೂ ನೋಡುತ್ತೇವೆ. ಸಾಲ ಮನ್ನಾ ಆಗದಿದ್ದರೆ ಹೋರಾಟ ಆರಂಭಿಸುತ್ತೇವೆ ಎಂದ ಅವರು, ಸಣ್ಣ-ಅತಿಸಣ್ಣ ರೈತರ 50 ಸಾವಿರ ರೂ. ಸಾಲ ಹಿಂದಿನ ಕಾಂಗ್ರೆಸ್ ಸರಕಾರವೇ ಮನ್ನಾ ಮಾಡಿದೆ. ಹಾಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ರೈತರ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳ 53 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಬೇಕೆಂದರು.

ನಾನು ರಾಜ್ಯದ ಜನರ ಮುಲಾಜಿನಲ್ಲಿ ಇಲ್ಲ ಎಂದ ಕುಮಾರಸ್ವಾಮಿ ರಾಜ್ಯದ ಜನರ ಕ್ಷಮೆ ಕೇಳಬೇಕು. ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡುವವರೆಗೆ ಒಂದು ತಿಂಗಳು ಕಾಯೋಣ. ಅದಾದ ಬಳಿಕವೂ ಸಾಲಮನ್ನಾ ಮಾಡದೇ ಇದ್ದರೆ ಕುಮಾರಸ್ವಾಮಿ ಅಧಿಕಾರ ಬಿಟ್ಟು ತೊಲಗುವ ರೀತಿಯಲ್ಲಿ ಹೋರಾಟ ಹಮ್ಮಿಕೊಳ್ಳೋಣ ಎಂದು ತಿಳಿಸಿದರು.

ಹಾಲಿನ ದರಕ್ಕೆ ನೀಡುವ ಪ್ರೋತ್ಸಾಹ ಧನ ಕಡಿತ ಮಾಡಿದ್ದಾರೆ. ಫೆಬ್ರವರಿಯಿಂದ ಇಲ್ಲಿಯವರಗೆ ರೈತರಿಗೆ ವಿತರಣೆಯಾಗಿಲ್ಲ, ನದಿ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂಬುದು ಕುಮಾರಸ್ವಾಮಿ ಅವರ ನಡವಳಿಕೆಯಾಗಿದೆ ಎಂದು ಯಡಿಯೂರಪ್ಪ ವ್ಯಂಗ್ಯವಾಡಿದರು.

ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಲಕ್ಷ್ಮಣ ಸವದಿ ಮಾತನಾಡಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ರೈತರ ಶಾಪ ಇದೆ. ವಚನ ಭ್ರಷ್ಟನೆಂಬ ಹಣೆಪಟ್ಟಿ ಇದೆ. ಈ ಶಾಪ ವಿಮೋಚನೆ ಆಗಬೇಕಾದರೆ ಕುಮಾರಸ್ವಾಮಿ ಯಾವುದೇ ಷರತ್ತುಗಳನ್ನು ಹಾಕದೆ ರೈತರ ಎಲ್ಲ ಬಗೆಯ ಸಾಲಮನ್ನಾ ಮಾಡಬೇಕು. ಕಬ್ಬು ಬೆಳೆಗಾರರಿಗೂ ಭಾರಿ ಪ್ರಮಾಣದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿದರು.

‘ಚುನಾವಣೆಗೂ ಮುನ್ನಾ ರೈತರ ಸಾಲಮನ್ನಾ ಬಗ್ಗೆ ಪದೇ ಪದೇ ಮಾತನಾಡಿದರು. ಆದರೆ, ಇದೀಗ ಈ ಮಾತುಗಳು ಕೇಳಿಬರುತ್ತಿಲ್ಲ. ಅಲ್ಲದೆ, ನದಿ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂಬುದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಡವಳಿಕೆ’
-ಬಿ.ಎಸ್.ಯಡಿಯೂರಪ್ಪ,ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News