​ಕಾಂಗ್ರೆಸ್, ಜೆಡಿಎಸ್ ಅತೃಪ್ತರಿಗೆ ಯಡಿಯೂರಪ್ಪ ಗಾಳ

Update: 2018-06-10 04:45 GMT

ಬೆಂಗಳೂರು, ಜೂ10: ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಅತೃಪ್ತ ಶಾಸಕರು ಬಿಜೆಪಿ ಸೇರಲು ಬಯಸಿದರೆ ಅವರಿಗೆ ಬಿಜೆಪಿ ಬಾಗಿಲು ತೆರೆದಿದೆ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅತೃಪ್ತರ ಓಲೈಕೆಗೆ ಮುಂದಾಗಿದ್ದಾರೆ.

ಸಚಿವ ಸ್ಥಾನದಿಂದ ವಂಚಿತರಾದ ಉಭಯ ಪಕ್ಷಗಳ ಶಾಸಕರು ಬೀದಿಗಿಳಿದು ಹೋರಾಟ ಆರಂಭಿಸಿರುವುದು ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ತಲೆನೋವಾಗಿರುವ ಮಧ್ಯೆಯೇ ಹೊಸ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ವಿಚಿತ್ರ ತಿರುವಿಗೆ ಕಾರಣವಾಗಿದೆ.

ಮಾಜಿ ಸಚಿವ ಹಾಗೂ ಭಿನ್ನಮತೀಯ ಶಾಸಕ ಎಂ.ಪಿ.ಪಾಟೀಲ್ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿ ಬರಿಗೈನಲ್ಲಿ ವಾಪಸ್ಸಾಗಿದ್ದಾರೆ. ಮುಂದಿನ ಸಂಪುಟ ವಿಸ್ತರಣೆ ವೇಳೆ ಸಚಿವ ಪದವಿ ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ ಎನ್ನಲಾಗಿದ್ದು, ಇತರ ಆಕಾಂಕ್ಷಿಗಳಿಗೂ ಕಾಯುವಂತೆ ಸೂಚಿಸಿದೆ.

ಇತ್ತ ಜೆಡಿಎಸ್ ಪಾಳಯದಲ್ಲೂ ಅಸಮಾಧಾನ ಭುಗಿಲೆದ್ದಿದ್ದು, ಉನ್ನತ ಶಿಕ್ಷಣ ಖಾತೆ ಪಡೆದಿರುವ ಜಿ.ಟಿ.ದೇವೇಗೌಡ ಹಾಗೂ ಸಣ್ಣ ನೀರಾವರಿ ಖಾತೆ ಪಡೆದಿರುವ ಪುಟ್ಟರಾಜು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಬ್ಬರೂ ಸಾರಿಗೆ ಖಾತೆ ಮೇಲೆ ಕಣ್ಣಿಟ್ಟಿದ್ದರು. ಈ ಖಾತೆ ದೇವೇಗೌಡರ ಸಂಬಂಧಿ ಡಿ.ಸಿ.ತಮ್ಮಣ್ಣ ಪಾಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News