ಜಯನಗರ ಕ್ಷೇತ್ರಕ್ಕೆ ಸೋಮವಾರ ಮತದಾನ

Update: 2018-06-10 12:20 GMT

ಬೆಂಗಳೂರು, ಜೂ.10: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಹಾಗೂ ವಿಪಕ್ಷ ಬಿಜೆಪಿ ಮಧ್ಯೆ ತೀವ್ರ ಪ್ರತಿಷ್ಠೆ ಸೃಷ್ಟಿಸಿರುವ ಜಯನಗರ ಕ್ಷೇತ್ರಕ್ಕೆ ನಾಳೆ(ಜೂ.11) ಬೆಳಗ್ಗೆ 7ರಿಂದ ಸಂಜೆ 6ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದೆ.

ಬಿಜೆಪಿ ಅಭ್ಯರ್ಥಿ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಜಯನಗರ ಕ್ಷೇತ್ರದಿಲ್ಲಿ ಬಿಜೆಪಿಯ ಬಿ.ಎನ್.ಪ್ರಹ್ಲಾದ್‌ ಬಾಬು, ಕಾಂಗ್ರೆಸಿನ ಸೌಮ್ಯರೆಡ್ಡಿ, ಪಕ್ಷೇತರ ಸದಸ್ಯ ರವಿಕೃಷ್ಣಾರೆಡ್ಡಿ ಸೇರಿದಂತೆ 19 ಮಂದಿ ಅಭ್ಯರ್ಥಿಗಳ ಹಣೆಬರಹವನ್ನು ನಾಳೆ ಮತದಾರ ಬರೆಯಲಿದ್ದಾನೆ.

ಸೂಕ್ಷ್ಮ-ಅತಿಸೂಕ್ಷ್ಮ ಸೇರಿದಂತೆ ಕ್ಷೇತ್ರದಲ್ಲಿ 216 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 1,400 ಮತಗಟ್ಟೆ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. 50 ಮತಗಟ್ಟೆಗಳಿಗೆ ವೆಬ್‌ಕಾಸ್ಟಿಂಗ್ ಸೌಲಭ್ಯ, 15 ಕಡೆ ವಿಡಿಯೋಗ್ರಫಿ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳ ಮೇಲ್ವಿಚಾರಣೆಗಾಗಿ 29 ವಿಭಾಗೀಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಕ್ಷೇತ್ರದಲ್ಲಿ 1ಲಕ್ಷಕ್ಕೂ ಅಧಿಕ ಮಹಿಳೆಯರು, 1ಲಕ್ಷಕ್ಕೂ ಅಧಿಕ ಪುರುಷರು ಸೇರಿ ಒಟ್ಟು 2,03,184 ಮಂದಿ ಮತದಾರರಿದ್ದು, ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ 5 ಕಡೆಗಳಲ್ಲಿ ‘ಪಿಂಕ್’ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮೈತ್ರಿ ಸರಕಾರ ರಚನೆ ಬಳಿಕ ಜೆಡಿಎಸ್ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದು, ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಕಣದಿಂದ ಹಿಂದೆ ಸರಿದಿದ್ದಾರೆ.

ಈ ಮಧ್ಯೆ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಕಸರತ್ತು ನಡೆಸಿದ್ದು, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ಎಲ್ಲರ ಚಿತ್ತ ನಾಳೆ ನಡೆಯಲಿರುವ ಮತದಾನ ದತ್ತ ನೆಟ್ಟಿದೆ.

ಈಗಾಗಲೇ ಮತಗಟ್ಟೆ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಜೂ.13ಕ್ಕೆ ಮತ ಎಣಿಕೆ: ಜಯನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಜೂ.13ಕ್ಕೆ ನಡೆಯಲಿದ್ದು, ಜಯನಗರ 4ನೆ ‘ಟಿ’ ಬ್ಲಾಕ್‌ನಲ್ಲಿರುವ ಎಸ್‌ಎಸ್‌ಎಂ ಆರ್‌ವಿ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಅಂದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಬಹಿರಂಗಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News