21ನೆ ಶತಮಾನದ ಕನ್ನಡ ಸಾಹಿತ್ಯ ಹುಲುಸಾಗಿದೆ: ಹಿರಿಯ ಸಂಶೋಧಕ ಷ.ಶೆಟ್ಟರ್

Update: 2018-06-10 12:59 GMT

ಬೆಂಗಳೂರು, ಜೂ. 10: ಕಳೆದ ಶತಮಾನಗಳಿಗೆ ಹೋಲಿಸಿದರೆ 21ನೆ ಶತಮಾನದಲ್ಲಿ ಕನ್ನಡ ಸಾಹಿತ್ಯ ಹುಲುಸಾಗಿ ಬೆಳೆಯುತ್ತಿದೆ. ಇದರಲ್ಲಿ ಯಾವುದೇ ಅನುಮಾನ ಬೇಡವೆಂದು ಹಿರಿಯ ಸಂಶೋಧಕ ಷ.ಶೆಟ್ಟರ್ ಅಭಿಪ್ರಾಯಿಸಿದರು.

ರವಿವಾರ ಛಂದ ಪುಸ್ತಕ ಪ್ರಕಾಶನವು ನಗರದ ವಾಡಿಯಾ ಸಂಭಾಗಣದಲ್ಲಿ ಕತೆಗಾರ ಸ್ವಾಮಿ ಪೊನ್ನಾಚಿರವರ ‘ಧೂಪದ ಮಕ್ಕಳು’ ಕತಾ ಸಂಕಲನಕ್ಕೆ ಛಂದ ಪುಸ್ತಕ ಬಹುಮಾನ ಪ್ರದಾನ ಹಾಗೂ ಲೇಖಕರಾದ ವಿಕ್ರಮ ಹತ್ವಾರರವರ ‘ನೀ ಮಾಯೆಯೊಳಗೋ...’ ಹಾಗೂ ರಾಜ್ಯಶ್ರೀ ಕುಳಮರ್ವರವರ ‘ಬಂಡೂಲ’ ಅನುವಾದ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕನ್ನಡ ಪುಸ್ತಕಗಳನ್ನು ಓದುವವರು, ಬರೆಯುವವರ ಸಂಖ್ಯೆ ಕಡಿಮೆ ಆಗುತ್ತಿದೆ ಎನ್ನುವವರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಕನ್ನಡ ಪುಸ್ತಕಗಳ ಬಿಡುಗಡೆ ಆಗುತ್ತಿರುವ ಸಂಖ್ಯೆ ಹಾಗೂ ವಸ್ತುವಿಷಯಗಳ ವೈವಿಧ್ಯತೆಯನ್ನು ಗಮನಿಸಿದರೆ, 21ನೆ ಶತಮಾನದಲ್ಲಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳು ಮತ್ತಷ್ಟು ಸೃಜನಾತ್ಮಕವಾಗಿ ಬೆಳೆಯುತ್ತಿದೆ. ಹೀಗಾಗಿ ಕನ್ನಡ ಸಾಹಿತ್ಯದ ಕುರಿತು ಯಾವುದೆ ಆತಂಕ ಪಡುವ ಅಗತ್ಯವಿಲ್ಲವೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹಾಗೆ ನೋಡಿದರೆ ಕನ್ನಡ ಸಾಹಿತ್ಯದಲ್ಲಿ 19ನೆ ಶತಮಾನ ಅನ್ವೇಷನಾ ಕಾಲಘಟ್ಟವಾಗಿತ್ತು. ಅದರ ಮುಂದುವರೆದ ಭಾಗವಾಗಿ 20ನೆ ಶತಮಾನದಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣಗೊಂಡಿತು. ಇದರ ಫಲವಾಗಿ 21ನೆ ಶತಮಾನದಲ್ಲಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳು ಹುಲುಸಾಗಿ ಬೆಳೆಯುತ್ತಿದೆ ಎಂದು ಷ.ಶೆಟ್ಟರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಾತಂತ್ರ ಪೂರ್ವ ಹಾಗೂ ಸ್ವಾತಂತ್ರ ನಂತರದ ದಿನಗಳ ಎರಡು ಕಾಲ ಘಟ್ಟಗಳನ್ನು ಕಂಡಿರುವ ನಮ್ಮ ತಲೆಮಾರು ಭಾರತದ ವೈವಿಧ್ಯದತೆಯ ಶ್ರಿಮಂತಿಕೆಗೆ ಸಾಕ್ಷಿಯಾಗಿದ್ದೇವೆ. ಅದು ಕೇವಲ ಸಾಹಿತ್ಯ ಕ್ಷೇತ್ರ ಮಾತ್ರವಲ್ಲ. ರಾಜಕೀಯ ಕ್ಷೇತ್ರದಲ್ಲೂ ವೈವಿಧ್ಯತೆಯಿಂದ ಕೂಡಿದ ವ್ಯಕ್ತಿಗಳನ್ನು ಕಂಡಿದ್ದೇವೆ. ಯಾರನ್ನೂ ತಿರಸ್ಕರಿಸದೆ ಎಲ್ಲರೊಂದಿಗೂ ಆಶಾಭಾವನೆಯನ್ನು ತಾಳುವ ಕಾಲಘಟ್ಟವಾಗಿತ್ತೆಂದು ಅವರು ಸ್ಮರಿಸಿದರು.

ಇವತ್ತಿನ ದಿನದಲ್ಲಿ ಸಣ್ಣ ಕತನಾ ಲೋಕ ವೈವಿಧ್ಯತೆಗಳಿಂದ ಕೂಡಿ, ಬಹುವಿಸ್ತಾರವಾಗಿ ವ್ಯಾಪಿಸಿಕೊಂಡಿದೆ. ಒಂದು ಸಣ್ಣ ವಸ್ತುವಿನ ಕುರಿತು ಕತೆಯನ್ನು ಸೃಷ್ಟಿಸುವ ಜಾಣ್ಮೆ ಈಗಿನ ಯುವ ಸಮುದಾಯಕ್ಕೆ ಸಿದ್ಧಿಸಿರುವುದು ಮೆಚ್ಚುಗೆಯ ಸಂಗತಿಯಾಗಿದೆ. ಯುವ ತಲೆಮಾರು ಕೇವಲ ಸಣ್ಣ ಕತೆಗಳೇ ಅಲ್ಲದೆ, ಕಾದಂಬರಿ, ಲೇಖನಗಳು, ಭಾಷಂತರಗಳನ್ನು ವೈವಿಧ್ಯತೆಗಳಿಂದ ಬರೆಯುತ್ತಿದ್ದಾರೆ ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದರು.

ದೇಶದ ಇತರೆ ಭಾಷೆಗಳ ಸಾಹಿತ್ಯ ಸೇರಿದಂತೆ ವಿಶ್ವದ ಜಗತ್ತನ್ನು ಕನ್ನಡ ಜನರಿಗೆ ಪರಿಚಯಿಸಬೇಕಾದರೆ ಅನುವಾದ ಕ್ಷೇತ್ರ ಬಹುಳ ಮುಖ್ಯವಾದದ್ದು. ಅನುವಾದ ಸುಲಭವಾಗಿ ಧಕ್ಕುವಂತಹದಲ್ಲ. ಆದಾಗ್ಯು ಕನ್ನಡದ ಸಾಕಷ್ಟು ಅನುವಾದಕರು ಉತ್ಕೃಷ್ಟ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುತ್ತಿರುವುದು ಒಳ್ಳೆಯ ಬೆಳವಣಿಗೆಯೆಂದು ಅವರು ಅಭಿಪ್ರಾಯಿಸಿದರು.

ಹಳೆಗನ್ನಡವನ್ನು ಯುವ ತಲೆಮಾರಿಗೆ ಸರಳ ಭಾಷೆಯಲ್ಲಿ ಪರಿಚಯಿಸುವಂತಹ ಕೆಲಸವಾಗಬೇಕಿದೆ. ಹಾಗೆಯೆ ವಿಜ್ಞಾನ-ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಮಾಹಿತಿಯನ್ನು ಕನ್ನಡ ಭಾಷೆಗೆ ಭಾಷಾಂತರಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಈ ವೇಳೆ ಹಿರಿಯ ನಾಟಕಕಾರ ಎಸ್.ಸುರೇಂದ್ರನಾಥ್ ಹಾಗೂ ಛಂದ ಪ್ರಕಾಶನದ ವಸುದೇಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News