ಕೆಪಿಸಿಸಿ ಅಧ್ಯಕ್ಷ-ಡಿಸಿಎಂ ಹುದ್ದೆಯನ್ನು ಕೇಳಿಲ್ಲ: ಎಂ.ಬಿ.ಪಾಟೀಲ್

Update: 2018-06-10 14:11 GMT

ಬೆಂಗಳೂರು, ಜೂ.10: ಸಮ್ಮಿಶ್ರ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಬೇಡಿಕೆ ಇಟ್ಟಿದ್ದೇನೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳು ಆಧಾರ ರಹಿತ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಣೆ ನೀಡಿದ್ದಾರೆ.

ರವಿವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಎಲ್ಲೂ ಹೋಗುತ್ತಿಲ್ಲ. ಬಿಜೆಪಿಯಿಂದ ನನಗೆ ಯಾವುದೆ ಆಹ್ವಾನವೂ ಬಂದಿಲ್ಲ. ನಾನು ಕಾಂಗ್ರೆಸ್‌ನಲ್ಲೇ ಇದ್ದು, ಒಬ್ಬ ಸಾಮಾನ್ಯ ಶಾಸಕನಾಗಿ ಮುಂದುವರೆಯುತ್ತೇನೆ ಎಂದರು.

ನನಗೆ ವೈಯಕ್ತಿಕವಾಗಿ ಅನ್ಯಾಯವಾಗಿರುವುದು ನಿಜ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರ ಆಪ್ತ ಕಾರ್ಯದರ್ಶಿ ಅಹ್ಮದ್‌ ಪಟೇಲ್ ಆಹ್ವಾನದ ಮೇರೆಗೆ ನಾನು ಹೊಸದಿಲ್ಲಿಗೆ ತೆರಳಿದ್ದೆ ಎಂದು ಅವರು ಹೇಳಿದರು.

ರಾಹುಲ್‌ಗಾಂಧಿ ಜೊತೆ ನಡೆದ ಚರ್ಚೆ ವೇಳೆ ನಾನು ಅವರ ಬಳಿ ಯಾವ ಹುದ್ದೆಯನ್ನೂ ಕೇಳಿಲ್ಲ. ಪಕ್ಷಕ್ಕಾಗಿ ನಾನು ಮಾಡಿರುವ ಸೇವೆ, ಜಲಸಂಪನ್ಮೂಲ ಸಚಿವನಾಗಿ ರಾಜ್ಯದ ನೀರಾವರಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಿದ್ದೇನೆ. ನನ್ನ ಭಾವನೆಗಳು ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಾಮಾನಗಳ ಬಗ್ಗೆಯೂ ಅವರ ಗಮನ ಸೆಳೆದಿದ್ದೇನೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ಈ ಹಿಂದೆ ರಾಜ್ಯ ಸರಕಾರ ಕಳುಹಿಸಿದ್ದ ಶಿಫಾರಸ್ಸನ್ನು ಕೇಂದ್ರ ಸರಕಾರ ವಾಪಸ್ ಕಳುಹಿಸಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ಜಾಗತಿಕ ಲಿಂಗಾಯತ ಮಹಾಸಭಾ ಪ್ರತ್ಯೇಕ ಧರ್ಮದ ನಿರ್ವಹಣೆಯನ್ನು ಮಾಡುತ್ತಿದೆ. ಈ ವಿಚಾರಗಳನ್ನು ಜಾಮದಾರ್ ನೋಡಿಕೊಳ್ಳಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News