ಆರೋಗಕ್ಕಾಗಿ ಸಿರಿಧಾನ್ಯ ಬಳಸಲು ಆಹಾರ ತಜ್ಞ ಡಾ.ಖಾದರ್ ಕರೆ

Update: 2018-06-10 14:49 GMT

ಬೆಂಗಳೂರು, ಜೂ. 10: ಆರೋಗ್ಯಕರ ಜೀವನ ನಡೆಸಲು ಸಿರಿಧಾನ್ಯಗಳ ಆಹಾರವನ್ನು ಬಳಸಬೇಕು ಎಂದು ಆಹಾರ ತಜ್ಞ ಡಾ.ಖಾದರ್ ಇಂದಿಲ್ಲಿ ಸಲಹೆ ನೀಡಿದ್ದಾರೆ.

ರವಿವಾರ ನಗರದ ಲಾಲ್‌ಬಾಗ್‌ನಲ್ಲಿರುವ ಡಾ.ಮರೀಗೌಡ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಗ್ರಾಮೀಣ ಕುಟುಂಬ ಸಂಸ್ಥೆ ಆಯೋಜಿಸಿದ್ದ, ಗ್ರಾಮೀಣ ಕುಟುಂಬ ಉತ್ಸವ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒತ್ತಡದ ಜೀವನ ಕ್ರಮದಿಂದಾಗಿ ಸುಲಭ ಆಹಾರ ಸೇವಿಸಿ ಜನರು ನಾನಾ ರೀತಿಯ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಹೊರಬರಲು ಸಿರಿಧಾನ್ಯಗಳ ಆಹಾರವನ್ನು ಸೇವಿಸಬೇಕಿದೆ ಎಂದರು.

ಸಿರಿಧಾನ್ಯಗಳ ಬಳಕೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ಸತ್ಯ ತಿಳಿದಿರುವ ಯಾವ ವೈದ್ಯರೂ ಆಹಾರದ ಕುರಿತಾದ ಮಾಹಿತಿ ನೀಡದೆ, ಔಷಧಿ ಸೇವನೆಯ ಪ್ರಮಾಣ ಹೆಚ್ಚು ಮಾಡಲು ಮುಂದಾಗುತ್ತಾರೆ. ಆದರೆ, ಸಿರಿಧಾನ್ಯಗನ್ನು ಸೇವಿಸುವುದರಿಂದ ದೇಹದ ಎಲ್ಲ ಅಂಗಾಂಗಗಳನ್ನು ಸುರಕ್ಷಿತವಾಗಿರುತ್ತವೆ ಎಂದು ಹೇಳಿದರು.

ವಿಜ್ಞಾನದ ವಿವಿಧ ಆಯಾಮಗಳು ಮಾನವ ಕುಲಕ್ಕೆ ಭಯಾನಕ ರೂಪ ತಂದಿದ್ದು, ವಿಜ್ಞಾನವನ್ನು ಸರಕನ್ನಾಗಿಸಿ ಮಾರಾಟ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಲಾಗಿದೆ. ಅಲ್ಲದೇ, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದಾಗಿ ಮಾನವ ಸಂಕುಲ 40 ವರ್ಷ ಹಿಂದುಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಣ್ಣುಗಳ ಸೇವನೆ ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಊಟದ ಬದಲಿಗೆ ಹಣ್ಣುಗಳನ್ನು ಸೇವಿಸುತ್ತಾರೆ. ದೇಹದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಒಳ್ಳೆಯದಲ್ಲ. ಬದಲಾಗಿ ಸಿರಿಧಾನ್ಯದ ಊಟದ ಜೊತೆಗೆ ಕಾಲಮಾನಕ್ಕನುಗುಣವಾಗಿ ಹಣ್ಣಗಳನ್ನು ಸೇವಿಸಬೇಕು.

ಕೆಲವು ಇಂಗ್ಲೀಷ್ ವೈದ್ಯರು ಹಾಲಿನಲ್ಲಿ ಮಾತ್ರ ಕ್ಯಾಲ್ಸಿಯಂ ಇದೆ. ಹೀಗಾಗಿ, ಹಾಲನ್ನು ಹೇರಳವಾಗಿ ಸೇವಿಸಿ ಎಂದು ಹೇಳುತ್ತಾರೆ. ಹೀಗಾಗಿ, ಜನರಲ್ಲಿಯೂ ಇದೇ ತಪ್ಪು ಕಲ್ಪನೆ ಇದೆ. ಹಾಲು, ಕಾಫಿ, ಚಹಾ, ಸಕ್ಕರೆಯ ಸಂಪೂರ್ಣವಾಗಿ ನಿಲ್ಲಿಸಿ, ಹಾಲಿಗೆ ಪರ್ಯಾಯವಾಗಿ ರಾಗಿಮುದ್ದೆ, ಎಳ್ಳು, ಸೀತಾಫಲ, ತೆಂಗಿನ ಹಾಲು ಸೇವಿಸಬಹುದು ಎಂದು ಸಲಹೆ ನೀಡಿದರು.

ಪಂಚರತ್ನ ಸಿರಿಧಾನ್ಯಗಳಾದ ಆರ್ಕಾ, ಸಾಮೆ, ಊದಲು, ಕೊರ್ಲೆ ಹಾಗೂ ನವಣೆ ಅತ್ಯಂತ ಆರೋಗ್ಯಕರ. ಇವುಗಳನ್ನು ದಿನನಿತ್ಯ ಬಳಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಸಿರಿಧಾನ್ಯ ಸೇವನೆಯೊಂದಿಗೆ ಕೆಲವು ಪಥ್ಯವನ್ನು ಪಾಲಿಸಿದರೆ, ಕ್ಯಾನ್ಸರ್, ಥೈರಾಯ್ಡಾ, ಎಚ್‌ಐವಿ, ಮಧುಮೇಹ, ಗ್ಯಾಂಗ್ರಿನ್‌ನಂಥ ರೋಗಗಳು ಬಾರದಂತೆ ತಡೆಗಟ್ಟಬಹುದು ಎಂದು ತಿಳಿಸಿದರು.

ಚರ್ಮರೋಗ ತಜ್ಞೆ ಡಾ.ಆರತಿ ಮಾತನಾಡಿ, ಸಿರಿಧಾನ್ಯಗಳ ಕುರಿತು ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಮಾಹಿತಿಯಿಲ್ಲ, ಆದರೆ ರಾಷ್ಟ್ರೀಯ ಪೋಷಣಶಾಸ್ತ್ರ ಸಂಸ್ಥೆಯಲ್ಲಿ ನಡೆದ ಸಂಶೋಧನೆಯಲ್ಲಿ ಸಿರಿಧಾನ್ಯ ಕ್ಯಾನ್ಸರ್ ತಡೆಗಟ್ಟುತ್ತದೆ ಎಂದು ಸಾಬೀತಾಗಿದೆ. ಹೆಚ್ಚಿನ ನಾರಿನ ಅಂಶ ಹೊಂದಿರುವುದರಿಂದ ದೇಹದ ಕೊಬ್ಬಿಾಂಶ ಕಡಿಮೆ ಯಾಗುತ್ತದೆ ಎಂದರು.

ಗ್ರಾಮೀಣ ಕುಟುಂಬ ಸಂಸ್ಥೆಯ ಸಂಸ್ಥಾಪಕ ಎಂ.ಎಚ್.ಶ್ರೀಧರಮೂರ್ತಿ ಮಾತನಾಡಿ, ರಾಜ್ಯದಲ್ಲಿ ಶೇ. 40ರಷ್ಟು ಸಿರಿಧಾನ್ಯ ಬೆಳೆಯುತ್ತಿದ್ದು, ತಮಿಳುನಾಡು ಮತ್ತು ಮಹಾರಾಷ್ಟ್ರಕ್ಕೆ ರವಾನೆಯಾಗುತ್ತಿದೆ. ಸಿರಿಧಾನ್ಯ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಮೇಳಗಳು ಸಹಕಾರಿಯಾಗುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಐಸಿರಿ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು ಹಾಗೂ ಅಭಿನವ ಪ್ರಕಾಶನದ ಪ್ರಕಾಶಕ ನ. ರವಿಕುಮಾರ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News