ಬಸವಣ್ಣರ ಆಶಯ ಇಂದಿಗೂ ಜೀವಂತ: ಸಾಹಿತಿ ಡಾ.ಈಶ್ವರ ಮಂಟೂರ

Update: 2018-06-10 14:52 GMT

ಬೆಂಗಳೂರು, ಜೂ.10: ನಮ್ಮ ನಾಡಿನ ಮಣ್ಣಿನಲ್ಲಿ ಶರಣರ ಸಂಸ್ಕೃತಿ ಬೆರೆತು ಹೋಗಿರುವುದರಿಂದ ಬಸವಣ್ಣನವರ ಆಶಯಗಳು ಇಂದಿಗೂ ಜೀವಂತವಾಗಿವೆ ಎಂದು ಸಾಹಿತಿ ಡಾ.ಈಶ್ವರ ಮಂಟೂರ ಅಭಿಪ್ರಾಯಪಟ್ಟರು.

ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಿಮಾನ ಕಾರ್ಖಾನೆ ಬಸವ ಸೇವಾ ಸಮಿತಿ ಆಯೋಜಿಸಿದ್ದ, ಬಸವ ಜಯಂತಿಯಲ್ಲಿ ಮಾತನಾಡಿದ ಅವರು, ವೈಚಾರಿಕ ತತ್ವಗಳನ್ನು ಬೋಧಿಸಿ ಸಮ ಸಮಾಜ ನಿರ್ಮಾಣ ಮಾಡಿ, ಮೌಢ್ಯಗಳನ್ನು ಅಳಿಸಿ ಹಾಕಲು ಬಸವಣ್ಣ ಶ್ರಮಿಸಿದ್ದರು. ಅಂತರಂಗದಲ್ಲಿನ ದೇವರನ್ನು ಅಂಗಡಿಗೆ ಕೊಟ್ಟು ಜನಿವಾರ ತ್ಯಜಿಸಿ ಮಹಿಳಾ ಸಮಾನತೆಗೆ ಸಾಮಾಜಿಕ ಕ್ರಾಂತಿ ನಡೆಸಿದ ಬಸವಣ್ಣ ಎಲ್ಲರಿಗೂ ಮಾದರಿ ಎಂದರು.

ಬಸವಣ್ಣ 12ನೆ ಶತಮಾನದಲ್ಲೇ ಅನುಭವ ಮಂಟಪ ನಿರ್ಮಿಸಿ ಪ್ರಜಾಪ್ರಭುತ್ವದ ಪರಿಕಲ್ಪನೆ ತಂದಿದ್ದರು. ಅಲ್ಲದೇ, ಸಮಾಜದಲ್ಲಿನ ವರ್ಗ ಸಂಘರ್ಷ, ಜಾತಿ, ಮತ, ಧರ್ಮ, ಮೇಲೆ- ಕೀಳು, ಬಡವ ಎಂಬ ಭೇದಗಳನ್ನು ತೊಡೆದು ಹಾಕಲು ಪ್ರಯತ್ನಿಸಿದ್ದರು. ಸತ್ಯ- ಶುದ್ಧಿಯ ಕಾಯಕ, ಭಕ್ತಿಯ ದಾಸೋಹ, ನಿತ್ಯ ಲಿಂಗಾಚರಣೆ ಮೂಲಕ ಹೊಸ ಕ್ರಾಂತಿ ಹುಟ್ಟು ಹಾಕಿದ ಮಹಾಪುರುಷ ಎಂದು ಅವರು ತಿಳಿಸಿದರು.

ಪೋಷಕರು ತಮ್ಮ ಮಕ್ಕಳಿಗೆ ಅಂಬೇಡ್ಕರ್‌ನ ಸಮಾನತೆಯ ಚಿಂತನೆ, ಅಬ್ದುಲ್ ಕಲಾಂ ಅವರ ಜ್ಞಾನ ಮತ್ತು ಬಸವಣ್ಣನ ತತ್ವಗಳು ಅರಿತುಕೊಳ್ಳುವಂತಹ ಮೌಲ್ಯಯುತ ಶಿಕ್ಷಣ ನೀಡಿ ಎಂದು ಸಲಹೆ ನೀಡಿದರು. ಈ ವೇಳೆ ಮೈಸೂರಿನ ನಿಲಮ್ಮ ಅವರಿಗೆ ’ಬಸವ ಸೇವಾರತ್ನ’ ಪ್ರಶಸ್ತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಎಚ್.ಬಿ. ರಾಜಶೇಖರ್, ಆರ್‌ಡಬ್ಲ್ಯೂ ಆರ್‌ಡಿಸಿ ಮಹಾ ವ್ಯವಸ್ಥಾಪಕ ಡಿ.ಬಿ. ಚಲವಾಡೆ, ಬಾಲ್ಕಿ ಮಠದ ಡಾ.ಬಸವಲಿಂಗ ಪಟ್ಟದ್ದೇವರು ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News