2020ರೊಳಗೆ ಭಾರತ-ಚೀನಾ ನಡುವೆ 100 ಶತಕೋಟಿ ಡಾಲರ್ ವ್ಯಾಪಾರದ ಗುರಿ: ಮೋದಿಗೆ ಕ್ಸಿ ಜಿನ್‌ಪಿಂಗ್ ಕರೆ

Update: 2018-06-10 16:43 GMT

  ಕ್ವಿಂಗ್‌ಡಾವೊ,ಜೂ.10: ಭಾರತ ಹಾಗೂ ಚೀನಾವು 2020ರೊಳಗೆ 100 ಶತಕೋಟಿ ಡಾಲರ್‌ಗಳ ದ್ವಿಪಕ್ಷೀಯ ವ್ಯಾಪಾರ ಗುರಿಯಿರಿಸಿಕೊಳ್ಳಬೇಕೆಂದು ಚೀನಾದ ಅಧ್ಯಕ್ಷ ಕ್ಸಿಜಿನ್‌ಪಿಂಗ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ. ಅಗಾಧವಾದ ವಾಣಿಜ್ಯ ಕೊರತೆಯಿರುವ ಹಿನ್ನೆಲೆಯಲ್ಲಿ ಭಾರತವು ಚೀನಾಕ್ಕೆೆ ಬಸುಮತಿಯೇತರ ಅಕ್ಕಿಯನ್ನು ಹಾಗೂ ಸಕ್ಕರೆಯನ್ನು ರಫ್ತು ಮಾಡಲು ಅವಕಾಶ ನೀಡುವ ಒಪ್ಪಂದಕ್ಕೆ ಶನಿವಾರ ಉಭಯದೇಶಗಳ ಸಹಿಹಾಕಿದ್ದವು.

 ಶಾಂಘೈ ಶೃಂಗಸಭೆಯ ನೇಪಥ್ಯದಲ್ಲಿ ಮೋದಿ ಹಾಗೂ ಕ್ಸಿಜಿನ್‌ಪಿಂಗ್ ಶನಿವಾರ ಮಾತುಕತೆ ನಡೆಸಿದ್ದು, ದ್ವಿಪಕ್ಷೀಯ ಹಾಗೂ ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದ್ದರು.

 ಮೋದಿ-ಕ್ಸಿ ಮಾತುಕತೆಯ ಬಳಿಕ, ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಕ್ವಿಂಗ್‌ಡಾವೊದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ, ಭಾರತ ಹಾಗೂ ಚೀನಾವು 2020ರೊಳಗೆ 100 ಶತಕೋಟಿ ಡಾಲರ್‌ಗಳ ನೂತನ ದ್ವಿಪಕ್ಷೀಯ ವಾಣಿಜ್ಯವನ್ನು ನಡೆಸುವ ಗುರಿಯಿರಿಸಿಕೊಳ್ಳಬೇಕೆಂದು ಕ್ಸಿಜಿನ್‌ಪಿಂಗ್, ಮೋದಿಯವರಿಗೆ ಸಲಹೆ ನೀಡಿದ್ದಾರೆಂದು ತಿಳಿಸಿದರು.

 ಕಳೆದ ವರ್ಷ ಭಾರತ-ಚೀನಾ ದ್ವಿಪಕ್ಷೀಯ ವ್ಯಾಪಾರವು 2017ರಲ್ಲಿ 84.44 ಶತಕೋಟಿ ಡಾಲರ್‌ಗೆ ತಲುಪಿರುವುದಾಗಿ ಚೀನಾದ ಕಸ್ಟಮ್ಸ್ ಮಹಾಡಳಿತವು ಮಾರ್ಚ್‌ನಲ್ಲಿ ಪ್ರಕಟಿಸಿತ್ತು. ಇದಕ್ಕೂ ಮೊದಲು ಎರಡೂ ದೇಶಗಳು 2015ರೊಳಗೆ 100 ಶತಕೋಟಿ ಡಾಲರ್ ವ್ಯಾಪಾರ ವಹಿವಾಟು ನಡೆಸುವ ಗುರಿಯಿಟ್ಟುಕೊಂಡಿದ್ದವು.

ಚೀನಾ ಸರಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಚೀನಾವು ಮುಂಬೈನಲ್ಲಿ ತನ್ನ ಶಾಖೆಯನ್ನು ತೆರೆಯುವುದಕ್ಕೆ ಭಾರತ ಅನುಮತಿ ನೀಡಿರುವುದಾಗಿ ಗೋಖಲೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News