ಆರೆಸ್ಸೆಸ್ ಹಿನ್ನೆಲೆಯ ವ್ಯಕ್ತಿಗಳನ್ನು ನೇಮಿಸಲು ಕೈಗೊಂಡ ಕ್ರಮ ಎಂದ ಕಾಂಗ್ರೆಸ್

Update: 2018-06-10 17:02 GMT

ಹೊಸದಿಲ್ಲಿ, ಜೂ.10: ಆರ್ಥಿಕ ವ್ಯವಹಾರ, ನಾಗರಿಕ ವಾಯುಯಾನ ಅಥವಾ ವಾಣಿಜ್ಯ ಮುಂತಾದ 10 ಕ್ಷೇತ್ರಗಳಲ್ಲಿ 15 ವರ್ಷದ ಕಾರ್ಯಾನುಭವ ಹೊಂದಿರುವ ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ನೇರವಾಗಿ ಕೇಂದ್ರ ಸರಕಾರದ ಜಂಟಿ ಕಾರ್ಯದರ್ಶಿ ಹುದ್ದೆಗೆ ನೇಮಕಗೊಳ್ಳುವ ಅವಕಾಶವನ್ನು ಕೇಂದ್ರ ಸರಕಾರ ಘೋಷಿಸಿದ್ದು, "ಇದು ಆರೆಸ್ಸೆಸ್ ಕಾರ್ಯಕರ್ತರಿಗೆ ಅವಕಾಶಕ್ಕಾಗಿ ತೆಗೆದುಕೊಂಡ ಕ್ರಮ" ಎಂದು ಕಾಂಗ್ರೆಸ್ ಟೀಕಿಸಿದೆ.

ಸರಕಾರದ ಘೋಷಣೆಗೆ ವಿವಿಧ ರಾಜಕೀಯ ಪಕ್ಷಗಳಿಂದ ಹಾಗೂ ಮಾಧ್ಯಮಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಆರೆಸ್ಸೆಸ್ ಸಿದ್ಧಾಂತದ ಹಿನ್ನೆಲೆಯ ವ್ಯಕ್ತಿಗಳಿಗೆ ಅವಕಾಶ ಮಾಡಿಕೊಡಲು ಸರಕಾರ ರೂಪಿಸಿದ ಯೋಜನೆ ಇದಾಗಿದೆ. ಇಂತಹ ಪ್ರಮುಖ ಹುದ್ದೆಗಳಿಗೆ ಆರೆಸ್ಸೆಸ್ ಹಿನ್ನೆಲೆಯ ವ್ಯಕ್ತಿಗಳನ್ನು ನೇಮಿಸಿ ಅವರು ಸರಕಾರದ ನಿರ್ಧಾರದ ಮೇಲೆ ನೇರವಾಗಿ ಪ್ರಭಾವ ಬೀರುವ ಯೋಜನೆ ಇದಾಗಿದೆ" ಎಂದು ಕಾಂಗ್ರೆಸ್‌ ಮುಖಂಡ ಪಿ.ಎಲ್.ಪುನಿಯಾ ಟೀಕಿಸಿದ್ದಾರೆ.

"ಈ ಮನುವಾದಿ ಸರಕಾರ ಯುಪಿಎಸ್‌ಸಿ ವ್ಯವಸ್ಥೆಯನ್ನು ಬದಿಗೆ ಸರಿಸಿ, ಯಾವುದೇ ಪರೀಕ್ಷೆ ನಡೆಸದೆ ತನಗಿಷ್ಟ ಬಂದವರನ್ನು ಜಂಟಿ ಕಾರ್ಯದರ್ಶಿಗಳಂತಹ ಪ್ರಮುಖ ಹುದ್ದೆಗೆ ಆಯ್ಕೆ ಮಾಡಿಕೊಳ್ಳುವುದು ಸರಿಯೇ?. ಇದು ಸಂವಿಧಾನದ ಮತ್ತು ಮೀಸಲಾತಿ ನಿಯಮದ ಉಲ್ಲಂಘನೆಯಾಗಿದೆ. ನಾಳೆ ಚುನಾವಣೆ ನಡೆಸದೆ ಪ್ರಧಾನಿಯನ್ನು ಮತ್ತು ಸಚಿವ ಸಂಪುಟವನ್ನೂ ಅವರು ನೇಮಿಸಬಹುದು. ಈ ಸರಕಾರ ಸಂವಿಧಾನವನ್ನು ಒಂದು ತಮಾಷೆಯ ವಿಷಯವನ್ನಾಗಿಸಿದೆ" ಎಂದು ಬಿಹಾರದ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.

"ಇದೊಂದು ದೊಡ್ಡ ಒಪ್ಪಂದವಾಗಿದೆ. ಈ ಬಗ್ಗೆ ನಾನು ನಿರೀಕ್ಷಿಸಿದ್ದೆ ಮತ್ತು ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಜಂಟಿ ಕಾರ್ಯದರ್ಶಿ ಹುದ್ದೆಯ ಅವಕಾಶ ಇದೀಗ ಎಲ್ಲರಿಗೂ ದೊರಕುವಂತಾಗಿದೆ" ಎಂದು ಒಡಿಶಾದ ರಾಜಕೀಯ ಮುಖಂಡ ಜಯ್ ಪಾಂಡಾ ತಿಳಿಸಿದ್ದಾರೆ. ಜಯ್ ಪಾಂಡಾ ಇತ್ತೀಚೆಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಪಕ್ಷವನ್ನು ತ್ಯಜಿಸಿದ್ದಾರೆ.

"ಈ ನಿರ್ಧಾರವನ್ನು ಗಮನಿಸಿದಾಗ ಅನುಮಾನ ಮೂಡುತ್ತದೆ. ಅಲ್ಲದೆ ಅಧಿಕಾರಿಶಾಹಿ ವರ್ಗವು ನೇರ ನೇಮಕವನ್ನು ಒಪ್ಪಲಾರದು. ಇಡೀ ಐಎಎಸ್ ವ್ಯವಸ್ಥೆಯನ್ನೇ ಪಕ್ಕಕ್ಕೆ ಇರಿಸುವುದು ಸುಲಭದ ಮಾತಲ್ಲ. ಆದರೆ ಈ ವ್ಯವಸ್ಥೆಗೆ ಹೆಚ್ಚಿನ ಪಾರದರ್ಶಕತೆ ತಂದು, ದಕ್ಷತೆಯನ್ನು ಹೆಚ್ಚಿಸುವ ಅಗತ್ಯವಿದೆ" ಎಂದು ಮತ್ತೊಬ್ಬ ರಾಜಕೀಯ ಮುಖಂಡರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News