ರಾಹುಲ್ ಆಯೋಜಿಸಿದ ಇಫ್ತಾರ್ ಕೂಟಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಆಹ್ವಾನ

Update: 2018-06-12 04:04 GMT

ಹೊಸದಿಲ್ಲಿ, ಜೂ. 12: ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಬುಧವಾರ ಆಯೋಜಿಸಿದ ಇಫ್ತಾರ್ ಕೂಟದಲ್ಲಿ ಸಮಾನ ಮನಸ್ಕ ವಿರೋಧ ಪಕ್ಷಗಳ ಮುಖಂಡರು ಭಾಗವಹಿಸುವ ನಿರೀಕ್ಷೆ ಇದೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಕೂಡಾ ಕೂಟಕ್ಕೆ ಆಹ್ವಾನಿಸಲಾಗಿದೆ.

ಅತಿಥಿಗಳ ಪಟ್ಟಯಿಂದ ಮುಖರ್ಜಿಯವರ ಹೆಸರು ಕೈಬಿಡಲು ಕಾಂಗ್ರೆಸ್ ನಿರ್ಧರಿಸಿದೆ ಎಂಬ ಟಿವಿ ವರದಿಗಳ ಬೆನ್ನಲ್ಲೇ ಪಕ್ಷದ ನಿರ್ಧಾರ ಹೊರಬಿದ್ದಿದೆ. ಪ್ರಣಬ್ ಮುಖರ್ಜಿ ಅವರು ಇತ್ತೀಚೆಗೆ ಆರೆಸ್ಸೆಸ್ ಕೇಂದ್ರ ಕಚೇರಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕಾಂಗ್ರೆಸ್ ಪಕ್ಷಕ್ಕೆ ಇರುಸು ಮುರಿಸಿಗೆ ಕಾರಣವಾಗಿತ್ತು.

ಮುಖರ್ಜಿಯವರನ್ನು ಆಹ್ವಾನಿಸಿಲ್ಲ ಎಂಬ ವರದಿಗಳನ್ನು ಪಕ್ಷದ ಮೂಲಗಳು ಆರಂಭದಲ್ಲಿ ಅಲ್ಲಗಳೆದಿರಲಿಲ್ಲ. ಅವರು ಮಾಜಿ ರಾಷ್ಟ್ರಪತಿ ಎಂಬ ಕಾರಣಕ್ಕೆ ಅವರ ಹೆಸರು ಕೈಬಿಟ್ಟಿರಬಹುದು ಎಂದು ಕೆಲವರು ಹೇಳಿಕೆ ನೀಡಿದ್ದರು. ಇದೇ ಕಾರಣದಿಂದ ಮಾಜಿ ರಾಷ್ಟ್ರಪತಿ ಹಮೀದ್ ಅನ್ಸಾರಿಯವರಿಗೂ ಆಹ್ವಾನ ನೀಡಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. "ಬುಧವಾರದ ಇಫ್ತಾರ್‌ಗೆ ಆಹ್ವಾನಿತರ ಪಟ್ಟಿಯ ಬಗ್ಗೆ ಸ್ವಲ್ಪ ತಾಳಿ. ನಾವು ಅದನ್ನು ಬಹಿರಂಗಪಡಿಸುತ್ತೇವೆ" ಎಂದು ಕೆಲ ಮುಖಂಡರು ಸ್ಪಷ್ಟನೆ ನೀಡಿದ್ದರು.

ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆಯುವ ಕೂಟದಲ್ಲಿ ಮುಖರ್ಜಿ ಭಾಗವಹಿಸುತ್ತಾರೆ ಎಂದು ಅವರ ಕಚೇರಿಯ ಮೂಲಗಳು ಸ್ಪಷ್ಟಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News