ಕೆಪಿಎಸ್‌ಸಿ ಅಕ್ರಮ ನೇಮಕಾತಿ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Update: 2018-06-12 15:28 GMT

ಬೆಂಗಳೂರು, ಜೂ.12: ಕರ್ನಾಟಕ ಲೋಕಸೇವಾ ಆಯೊಗದ (ಕೆಪಿಎಸ್‌ಸಿ) 2011ನೆ ಸಾಲಿನ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ನಡೆಸಿರುವ ಮುಖ್ಯ ಪರೀಕ್ಷೆಗಳಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಹೀಗಾಗಿ ಮುಖ್ಯ ಪರೀಕ್ಷೆಯ ಮೌಲ್ಯಮಾಪನದ ಆಧಾರದ ಮೇಲೆ ಅಭ್ಯರ್ಥಿಗಳ ಸಂದರ್ಶನಕ್ಕೆ ಅವಕಾಶ ನೀಡುವಂತೆ ಹೈಕೋರ್ಟ್‌ಗೆ ಕೆಪಿಎಸ್‌ಸಿ ಮನವಿ ಮಾಡಿದೆ.

ಕೆಪಿಎಸ್‌ಸಿ ನೇಮಕಾತಿಗಾಗಿ ನಡೆಸಲಾಗಿರುವ ಮುಖ್ಯ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದ ಅನುಸಾರ ಹೈಕೋರ್ಟ್ ಪ್ರಕರಣದ ವಿಚಾರಣೆಗೆ ಮುಂದಾಗಿದೆ. ಈ ಸಂಬಂಧ ಕೆಲ ಅವಕಾಶ ವಂಚಿತ ಅಭ್ಯರ್ಥಿಗಳು ಹಾಗೂ ಆಯ್ಕೆಯಾದ ಅಭ್ಯರ್ಥಿಗಳು ಸಲ್ಲಿಸಿರುವ ಮಧ್ಯಂತರ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠದ ಮುಂದೆ ಕೆಪಿಎಸ್‌ಸಿ ಪರ ಹಿರಿಯ ವಕೀಲ ಪಿ.ಎಸ್.ರಾಜಗೋಪಾಲ್ ಮಂಗಳವಾರ ವಾದ ಮಂಡಿಸಿದರು.

ಕೆಪಿಎಸ್‌ಸಿ ಸಂದರ್ಶನದಲ್ಲಿ ಅವ್ಯವಹಾರ ನಡೆದಿದೆ ಎಂದು ಮಧ್ಯಂತರ ವರದಿಯಲ್ಲಿ ಸಿಐಡಿ ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಆದರೆ ಈ ಆರೋಪಗಳನ್ನು ಅಂತಿಮ ವರದಿಯಲ್ಲಿ ಕೈಬಿಡಲಾಗಿದೆ. ಮುಖ್ಯ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿರುವ ಬಗ್ಗೆ ಸಿಐಡಿ ವರದಿಯಲ್ಲಿ ವಿವರಿಸಲಾಗಿಲ್ಲ. ಹೀಗಿರುವಾಗ ಸಂಪೂರ್ಣ ಪರೀಕ್ಷೆಗಳನ್ನು ರದ್ದುಪಡಿಸಿ ಹೊಸದಾಗಿ ಪರೀಕ್ಷೆ ನಡೆಸಲು ಅವಕಾಶವಿಲ್ಲ. ಈಗಾಗಲೇ ಕೆಪಿಎಸ್‌ಸಿ ನಡೆಸಿರುವ ಮೌಲ್ಯಮಾಪನವನ್ನು ಅಂಗೀಕರಿಸಿ ಸಂದರ್ಶನಕ್ಕೆ ಅನುಮತಿ ನೀಡುವುದು ನ್ಯಾಯಾಲಯದ ಮುಂದಿರುವ ಆಯ್ಕೆಯಾಗಿದೆ ಎಂದು ರಾಜ್‌ಗೋಪಾಲ್ ತಿಳಿಸಿದರು.

ಆಯ್ಕೆಯಾದ ಅಭ್ಯರ್ಥಿಗಳ ಪರ ವಕೀಲರು ವಾದಿಸಿ, 2011ನೇ ಸಾಲಿನಲ್ಲಿ ಒಟ್ಟು 362 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಸಿಐಡಿ ಮಧ್ಯಂತರ ವರದಿಯಲ್ಲಿ ಸಂದರ್ಶನಕ್ಕೆ ಆಯ್ಕೆಯಾಗಿದ್ದ 1,085 ಅಭ್ಯರ್ಥಿಗಳ ಪೈಕಿ 143 ಅಭ್ಯರ್ಥಿಗಳ ವಿರುದ್ಧ ಶಂಕೆ ವ್ಯಕ್ತವಾಗಿದೆ. ಈ 143 ಜನರ ಪೈಕಿ ಕೆಲವರು ಮಾತ್ರ ಆಯ್ಕೆಯಾಗಿರಬಹುದು. ಹಾಗೆಂದ ಮಾತ್ರಕ್ಕೆ ಸಂಪೂರ್ಣ ನೇಮಕಾತಿಯನ್ನೇ ರದ್ದುಪಡಿಸುವುದು ಸರಿಯಲ್ಲ ಎಂದರು.

ಅವಕಾಶ ವಂಚಿತ ಅಭ್ಯರ್ಥಿಗಳ ಪರ ವಕೀಲರು ವಾದಿಸಿ, ಮುಖ್ಯ ಪರೀಕ್ಷೆಗಳು ಹಾಗೂ ಸಂದರ್ಶನದಲ್ಲಿ ಅಕ್ರಮ ನಡೆದಿದ್ದು, ಅಂಕಗಳ ಎಣಿಕೆಯಲ್ಲಿ ಲೋಪವಾಗಿದೆ. ಮೌಲ್ಯಮಾಪಕರು, ಅಭ್ಯರ್ಥಿಗಳು ಮತ್ತು ಕೆಪಿಎಸ್‌ಸಿ ಸದಸ್ಯರು ಶಾಮೀಲಾಗಿ ಅಕ್ರಮವೆಸಗಿದ್ದಾರೆ. ನಿರ್ದಿಷ್ಟ ವಿಷಯಗಳನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡವರಿಗೆ ಹೆಚ್ಚಿನ ಅಂಕಗಳನ್ನು ನೀಡಲಾಗಿದೆ. ಇಂಗ್ಲಿಷ್ ಮಾಧ್ಯಮದ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಕನ್ನಡ ಮಾಧ್ಯಮದ ಪ್ರೊಫೆಸರ್‌ಗಳಿಂದ ಮಾಡಿಸಲಾಗಿದೆ. ಮುಖ್ಯ ಪರೀಕ್ಷೆಗೂ ಮುನ್ನವೇ ಆಯೋಗದ ಸದಸ್ಯರು ಹಾಗೂ ಅಭ್ಯರ್ಥಿಗಳ ನಡುವೆ ಟೆಲಿಫೋನ್ ಸಂಭಾಷಣೆಗಳು ನಡೆದಿದ್ದು, ಇಂಥ ಅನೇಕ ಅಕ್ರಮಗಳ ಬಗ್ಗೆ ಸಿಐಡಿ ಮಧ್ಯಂತರ ವರದಿಯಲ್ಲಿ ವಿವರಿಸಲಾಗಿದೆ ಎಂದರು.

ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಮಧ್ಯಂತರ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News