ಕಾಶ್ಮೀರ ಸಮಸ್ಯೆ : ದ್ವಂದ್ವ ನೀತಿ ಬೇಡ

Update: 2018-06-13 07:12 GMT

ರಮಝಾನ್ ತಿಂಗಳ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಉಗ್ರಗಾಮಿಗಳ ವಿರುದ್ಧ ಕೇಂದ್ರ ಸರಕಾರ ಕದನ ವಿರಾಮ ಘೋಷಿಸಿದೆ. ಕಾಶ್ಮೀರದ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಹುರಿಯತ್ ಕಾನ್ಫರೆನ್ಸ್ ಸಮ್ಮತಿಸಿದಲ್ಲಿ ಕೇಂದ್ರ ಸರಕಾರ ಮಾತುಕತೆಗೆ ಸಿದ್ಧವಿರುವುದಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು. ಸರಕಾರ ಏಕಪಕ್ಷೀಯ ಕದನ ವಿರಾಮ ಘೋಷಿಸಿದ ಬಳಿಕ ಪರಿಸ್ಥಿತಿ ಕೊಂಚ ತಿಳಿಯಾಗಿದೆ ಎನ್ನಲಾಗುತ್ತಿದೆ. ಆದರೆ, ಬಿಜೆಪಿ ನಾಯಕರ ಇತ್ತೀಚಿನ ಪ್ರಚೋದನಾಕಾರಿ ಹೇಳಿಕೆಗಳು ಇತ್ಯರ್ಥದ ಭರವಸೆಗೆ ಆತಂಕವನ್ನುಂಟು ಮಾಡಿದೆ. ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ಮಾಡುವವರನ್ನು ಗುಂಡಿಕ್ಕಿ ಕೊಲ್ಲಬೇಕೆಂದು ಬಿಜೆಪಿ ರಾಜ್ಯಸಭಾ ಸದಸ್ಯ ಡಿ.ಪಿ.ವತ್ಸಾ ಅವರ ಹೇಳಿಕೆ ಪ್ರಚೋದನಾಕಾರಿಯಾಗಿದೆ. ಇಂತಹ ಹೇಳಿಕೆಗಳಿಂದ ಕಾಶ್ಮೀರ ಸಮಸ್ಯೆ ಇನ್ನಷ್ಟು ಕಗ್ಗಂಟಾಗುವ ಸಂಭವವಿದೆ.

ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವರು ನೀಡಿದ ಹೇಳಿಕೆ ಪ್ರಕಾರ, 1990ರಿಂದ 2011ರ ವರೆಗೆ ಕಾಶ್ಮೀರದಲ್ಲಿ 39,918 ಜನರು ಘರ್ಷಣೆಯಲ್ಲಿ ಸಾವಿಗೀಡಾಗಿದ್ದಾರೆ. ಅಲ್ಲಿನ ಪ್ರತ್ಯೇಕತಾವಾದಿ ನಾಯಕರ ಪ್ರಕಾರ ಈ ಅಂಕೆಸಂಖ್ಯೆಗಳು ಎರಡು ಪಟ್ಟು ಹೆಚ್ಚಾಗಿವೆ. ಈ ಕಾಲಾವಧಿಯಲ್ಲಿ ಉಗ್ರಗಾಮಿಗಳ ದಾಳಿಯಲ್ಲಿ 13,226 ನಾಗರಿಕರು ಹಾಗೂ 5,369 ಭದ್ರತಾ ಸಿಬ್ಬಂದಿ ಕೊಲ್ಲಲ್ಪಟ್ಟಿದ್ದಾರೆ ಎಂದು ಸಂಸತ್ತಿನಲ್ಲಿ ಸರಕಾರ ಬಹಿರಂಗಪಡಿಸಿದೆ. ಈ ಅವಧಿಯಲ್ಲಿ ಕೇಂದ್ರದಲ್ಲಿ ಮತ್ತು ಕಾಶ್ಮೀರದಲ್ಲಿ ಸರಕಾರಗಳು ಬದಲಾಗಿವೆ. ಆದರೆ, ಕಾಶ್ಮೀರದಲ್ಲಿ ಹಿಂಸಾಚಾರ ಅವ್ಯಾಹತವಾಗಿ ಮುಂದುವರಿದಿದೆ. ಅಮಾಯಕರು ಸಾಯುತ್ತಲೇ ಇದ್ದಾರೆ. ಕಾಶ್ಮೀರದಲ್ಲಿ ಕದನ ವಿರಾಮ ಘೋಷಿಸಿದ ಬಳಿಕ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶ್ರೀನಗರಕ್ಕೆ ಜೂನ್ 8ರಂದು ಭೇಟಿ ನೀಡಿ ಭದ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಕಲ್ಲು ತೂರಾಟದ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿರುವ ಅಪ್ರಾಪ್ತ ವಯಸ್ಸಿನವರ ಮೇಲಿನ ಮೊಕದ್ದಮೆಗಳನ್ನು ಹಿಂದೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಆ ನಂತರ 530 ಬಾಲಕರ ಮೇಲೆ ಹಾಕಲಾಗಿದ್ದ ಮೊಕದ್ದಮೆಗಳನ್ನು ಹಿಂದೆಗೆದುಕೊಳ್ಳಲಾಗಿದೆ.

ಹೀಗೆ ಕೇಂದ್ರ ಗೃಹ ಸಚಿವರು ಪರಿಸ್ಥಿತಿಯನ್ನು ಸುಧಾರಿಸಲು ಯತ್ನಿಸುತ್ತಿದ್ದರೆ, ಅವರ ಪಕ್ಷದ ಸಂಸದರು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದೇನಿದ್ದರೂ ಕಾಶ್ಮೀರ ಸಮಸ್ಯೆಗೆ ಮಾತುಕತೆಯೊಂದೇ ಪರಿಹಾರವಾಗಿದೆ. ಹುರಿಯತ್ ಜಂಟಿ ಪ್ರತಿರೋಧ ಸಮಿತಿ ಕೂಡಾ ಮಾತುಕತೆಗೆ ಸಿದ್ಧವಿರುವುದಾಗಿ ಸ್ಪಷ್ಟಪಡಿಸಿದೆೆ. ಆದರೆ, ಮಾತುಕತೆಯ ಕುರಿತ ಗೊಂದಲಗಳನ್ನು ಕೇಂದ್ರ ಸರಕಾರ ನಿವಾರಿಸಬೇಕೆಂದು ಅದು ಒತ್ತಾಯಿಸಿದೆ. ಕದನ ವಿರಾಮ ಘೋಷಣೆ ಮಾಡಿದ ಬಳಿಕ ಮೊದಲ ಮೂರು ವಾರಗಳಲ್ಲಿ ಉಗ್ರಗಾಮಿಗಳಿಂದ ಅತಿರೇಕದ ಕೆಲ ಕೃತ್ಯಗಳು ನಡೆದರೂ, ಈಗ ಪರಿಸ್ಥಿತಿ ಕೊಂಚ ಸುಧಾರಿಸಿದಂತೆ ಕಾಣುತ್ತಿದೆ. ಆದರೆ, ಬಿಜೆಪಿ ಸೇರಿದಂತೆ ಸಂಘಪರಿವಾರದ ನಾಯಕರ ಇತ್ತೀಚಿನ ಹೇಳಿಕೆಗಳಿಂದ ಪರಿಸ್ಥಿತಿ ಮತ್ತೆ ಹದಗೆಡುವ ಆತಂಕ ಉಂಟಾಗಿದೆ.

ಹುರಿಯತ್ ಬಣಗಳ ಜೊತೆಗೆ ಮಾತುಕತೆಗೆ ಮುನ್ನ ಕೇಂದ್ರ ಸರಕಾರ ಕಾಶ್ಮೀರ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ. ಕಾಶ್ಮೀರ ಜನರಲ್ಲಿ ಉಂಟಾಗಿರುವ ಆತಂಕದ ಭಾವನೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ. ನಾಲ್ಕು ವರ್ಷಗಳ ಹಿಂದೆ ಕೇಂದ್ರದಲ್ಲಿ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಆನಂತರ ಭದ್ರತೆಯ ಹೆಸರಿನಲ್ಲಿ ಕೈಗೊಂಡ ಕೆಲ ಅತಿರೇಕದ ಕ್ರಮಗಳಿಂದ ಕಾಶ್ಮೀರದ ಜನರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಕಲ್ಲು ತೂರಾಟ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸೇನಾ ಪಡೆಗಳ ದಮನ ನೀತಿಯಿಂದ ಕಾಶ್ಮೀರಿ ಯುವಕರು ಪ್ರತ್ಯೇಕತಾವಾದದತ್ತ ಆಕರ್ಷಿತವಾಗುವಂತಹ ವಾತಾವರಣ ನಿರ್ಮಾಣವಾಗಿದೆ. ಈ ಯುವಕರ ಮನಸ್ಸನ್ನು ಗೆಲ್ಲುವ ಕ್ರಮವನ್ನು ಕೇಂದ್ರ ಸರಕಾರ ಕೈಗೊಳ್ಳಬೇಕಾಗಿದೆ. ಕಾಶ್ಮೀರ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೊದಲ ಹೆಜ್ಜೆಯಾಗಿ ಇನ್ನು ಮುಂದೆ ಪೈಶಾಚಿಕ ದಮನ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರಕಾರ ಪ್ರಕಟಿಸಬೇಕು. ಹತಾಶೆಯಿಂದ ಕಲ್ಲು ತೂರಾಟ ಮಾಡುವ ಮಹಿಳೆಯರು, ಮಕ್ಕಳು ಮತ್ತು ಯುವಜನರ ವಿರುದ್ಧ ಪೆಲೆಟ್ ಗನ್ ಬಳಸುವುದಿಲ್ಲ ಎಂದು ಸರಕಾರ ಸ್ಪಷ್ಟವಾಗಿ ಘೋಷಿಸಬೇಕು.

ಅಲ್ಲಿಯ ಪ್ರತ್ಯೇಕತಾವಾದಿ ನಾಯಕ ಶಬೀರ್ ಶಾ ಅಂತಹವರನ್ನು ಬಿಡುಗಡೆ ಮಾಡಿ ಮಾತುಕತೆಗೆ ಪೂರಕ ವಾತಾವರಣ ರಚಿಸಬೇಕು. ಭದ್ರತಾ ಪಡೆಗಳಿಂದ ನಾಗರಿಕರ ಮೇಲೆ ಅತಿರೇಕಗಳು ಉಂಟಾಗಿದ್ದರೆ ಅವುಗಳ ಬಗ್ಗೆ ತನಿಖೆ ನಡೆಸುವುದಾಗಿ ಹೇಳಬೇಕು. ಕಾಶ್ಮೀರ ಪ್ರಶ್ನೆಯಲ್ಲಿ ಕೇಂದ್ರ ಗೃಹ ಸಚಿವರು ಒಂದು ರೀತಿ ಹೇಳಿಕೆ ನೀಡುತ್ತಿದ್ದರೆ, ಆಳುವ ಬಿಜೆಪಿಯ ಸಂಸದರು ಇನ್ನೊಂದು ರೀತಿ ಹೇಳಿಕೆ ನೀಡುತ್ತಾರೆ. ಈ ದ್ವಂದ್ವ ನೀತಿ ಮಾತುಕತೆಗೆ ಅಡ್ಡಿಯಾಗಿದೆ. ಆದ್ದರಿಂದ ಕೇಂದ್ರ ಸರಕಾರ ಆಡಳಿತ ಪಕ್ಷದ ಸಂಸದರ ಬಾಯಿಗೆ ಕಡಿವಾಣ ಹಾಕಬೇಕು. ಕಾಶ್ಮೀರ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸುವ ತನ್ನ ಮುಂಚಿನ ನಿಲುವಿಗೆ ಬದ್ಧವಾಗಿ ಉಳಿಯಬೇಕು. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬೇಹುಗಾರಿಕೆ ದಳದ ಮುಖ್ಯಸ್ಥ ದಿನೇಶ್ವರ್ ಶರ್ಮಾ ಅವರನ್ನು ಸಂಧಾನಕಾರರನ್ನಾಗಿ ಕಳೆದ ವರ್ಷ ನೇಮಕ ಮಾಡಿತ್ತು.

‘‘ಜನರ ಭಾವನೆಗಳಿಗೆ ಸ್ಪಂದಿಸಿ ಹಿಂಸೆಯನ್ನು ತಗ್ಗಿಸದ ಹೊರತು ಯಾವುದೇ ರಾಜಕೀಯ ಮಾತುಕತೆ ಮತ್ತು ಯಾವುದೇ ರಾಜಕೀಯ ಪರಿಹಾರ ಸಾಧ್ಯವಿಲ್ಲ’’ ಎಂದು ದಿನೇಶ್ವರ್ ಶರ್ಮಾ ಹೇಳಿದ್ದಾರೆ. ಕಾಶ್ಮೀರದ ಕುರಿತಂತೆ ಕೇಂದ್ರ ಸರಕಾರ ಅನುಸರಿಸಿಕೊಂಡು ಬರುತ್ತಿರುವ ಪ್ರಮಾದಭರಿತ ನೀತಿಯನ್ನು ಶರ್ಮಾ ಅವರ ಈ ಹೇಳಿಕೆ ಪ್ರತಿಬಿಂಬಿಸುತ್ತದೆ. ನೂರಾರು ಯುವ ಜನರು ಹತಾಶರಾಗಿ ಉಗ್ರವಾದದತ್ತ ವಾಲುತ್ತಿರುವ ಸನ್ನಿವೇಶದಲ್ಲಿ ಹಿಂಸೆಯನ್ನು ಕಡಿಮೆ ಮಾಡುವ ಬದಲು ಭದ್ರತಾಪಡೆಗಳು ದಮನ ಕಾರ್ಯಾಚರಣೆ ನಡೆಸುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೊಸ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇತ್ತೀಚೆಗೆ ಶ್ರೀನಗರಕ್ಕೆ ತೆರಳಿದಾಗ ಕದನ ವಿರಾಮವನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಭರವಸೆ ನೀಡಬೇಕಾಗಿತ್ತು. ಪ್ರತ್ಯೇಕತಾವಾದಿ ನಾಯಕರ ಜೊತೆ ಮಾತುಕತೆ ನಡೆಸುವ ಕಾಶ್ಮೀರಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ಕಾಶ್ಮೀರ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಬಹುದು. ಈ ನಿಟ್ಟಿನಲ್ಲಿ ಪಾಕಿಸ್ತಾನದ ಜೊತೆಗೆ ಕೂಡಾ ಮಾತುಕತೆ ನಡೆಸುವ ಬಗ್ಗೆ ರಾಜನಾಥ್ ಸಿಂಗ್ ನೀಡಿದ ಹೇಳಿಕೆ ಸೂಕ್ತವಾಗಿದೆ. ಪಾಕಿಸ್ತಾನ ಮತ್ತು ಭಾರತ ದೇಶಗಳ ಭದ್ರತಾ ಸಲಹೆಗಾರರು ಭೇಟಿಯಾಗಿ ಮಾತುಕತೆ ನಡೆಸಲು ಸಾಧ್ಯವಾಗುವುದಾದರೆ ಅದಕ್ಕೆ ಪೂರಕವಾಗಿ ಸ್ಪಂದಿಸಬೇಕು. ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ನಕಾರಾತ್ಮಕ ನಿಲುವಿನಿಂದ ಕಾಶ್ಮೀರ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯವಿಲ್ಲ. ಕೇಂದ್ರ ಸರಕಾರ ರಮಝಾನ್ ತಿಂಗಳಲ್ಲಿ ಘೋಷಿಸಿದ ಕದನ ವಿರಾಮ ಸೂಕ್ತವಾಗಿದೆ. ಇದೇ ಸಕಾರಾತ್ಮಕ ನಿಲುವನ್ನು ಮುಂದುವರಿಸಿದರೆ, ಅಲ್ಲಿನ ಜನರಲ್ಲಿ ಬೇರುಬಿಟ್ಟಿರುವ ಪರಕೀಯ ಭಾವನೆ ನಿವಾರಿಸಿದರೆ ಈ ಸಮಸ್ಯೆ ಬಗೆಹರಿಯಬಹುದಾದ ವಾತಾವರಣ ನಿರ್ಮಾಣ ಆಗಬಹದು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಗಂಭೀರವಾದ ಚಿಂತನೆಯನ್ನು ನಡೆಸಬೇಕಾಗಿದೆ. ಆಳುವ ಪಕ್ಷದಲ್ಲಿ ಈ ಬಗ್ಗೆ ಉಂಟಾಗಿರುವ ಗೊಂದಲಗಳನ್ನು ನಿವಾರಿಸದಿದ್ದರೆ ಕಾಶ್ಮೀರ ಸಮಸ್ಯೆಗೆ ಪರಿಹಾರ ಸುಲಭವಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News