ಬೆಂಗಳೂರು: ಪರಿಸರ ಉಳಿವಿಗಾಗಿ ಗಿಡ ನೆಡುವ ಕಾರ್ಯಕ್ರಮ

Update: 2018-06-13 16:43 GMT

ಬೆಂಗಳೂರು, ಜೂ.13: ಗಿಡಗಳನ್ನು ನೆಡುವ ಅಂಕಿ ಅಂಶ ಮುಖ್ಯವಲ್ಲ. ಬದಲಾಗಿ ಅವುಗಳ ಪೋಷಣೆಯಲ್ಲಿ ಎಷ್ಟರಮಟ್ಟಿಗೆ ತೊಡಗಿಸಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ ಎಂದು ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

ಬುಧವಾರ ನಗರದ ಅರಮನೆ ಮೈದಾನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಬಿ.ಪ್ಯಾಕ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ’ಪರಿಸರ ಉಳಿವಿಗಾಗಿ ಗಿಡ ನೆಡುವ ಕಾರ್ಯಕ್ರಮ’ದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕೆಲವರು ಸಸಿಗಳನ್ನು ನೆಟ್ಟರೆ ತಮ್ಮ ಕರ್ತವ್ಯ ಎಂದುಕೊಳ್ಳುತ್ತಾರೆಯೇ ಹೊರತು, ಅವುಗಳ ಪೋಷಣೆಗೆ ಮುಂದಾಗುವುದಿಲ್ಲ. ಗಿಡ ನೆಡುವುದರ ಜೊತೆಗೆ , ಅವುಗಳ ಪೋಷಣೆಗೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.

ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಬೆಂಗಳೂರಿನ ವಾರ್ಡ್‌ಗಳು 15 ಕಿ.ಮೀ.ವ್ಯಾಪ್ತಿ ಮೀರಬಾರದು. ಹೆಚ್ಚು ಗಿಡಮರಗಳನ್ನು ಬೆಳೆಸಬೇಕು ಎಂಬ ನಿಯಮ ಜಾರಿ ಮಾಡಲಾಗಿತ್ತು. ಆದರೆ, ಆ ಯೋಜನೆ ಅಪೂರ್ಣಗೊಂಡಿತ್ತು. ಈಗ ಅದೇ ಮಾದರಿಯಲ್ಲಿ ಸಸಿ ನೆಡುವ ಯೋಜನೆ ರೂಪಿಸಿದ್ದು, 5 ಲಕ್ಷ ಗಿಡ ನೆಟ್ಟು ಸಂರಕ್ಷಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸುಮಾರು ಐದೂವರೆ ಲಕ್ಷ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿದ್ದು, ಕಳೆದ 10ವರ್ಷಗಳಿಂದ ಪರಿಸರ ಸಂರಕ್ಷಣೆ ಸೇರಿದಂತೆ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ವಿದ್ಯಾರ್ಥಿಗಳ ಮೂಲಕ ಅರಿವು ಮೂಡಿಸುವುದರಿಂದ ಸಾರ್ವಜನಿಕರ ಜೊತೆಗೆ ಅವರು ಸಹ ಪರಿಸರ, ಜಲ ಸಂರಕ್ಷಣೆಯ ಮಹತ್ವ ಅರಿಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಗಿಡ ನೆಟ್ಟು ಸಂರಕ್ಷಿಸುವ ಕಾರ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿದೆ ಎಂದರು.

ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಬೆಂಗಳೂರು ಸುತ್ತಮುತ್ತ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಮಾಡಲು ನಿರ್ಧರಿಸಲಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಬಿ.ಪ್ಯಾಕ್ ಸಂಸ್ಥೆ ಸಹಯೋಗದ ಬೆಂಬಲಕ್ಕೆ ಅರಣ್ಯ ಇಲಾಖೆ ಮತ್ತು ರಾಜ್ಯ ಸರಕಾರ ಕೈಜೋಡಿಸಿರುವುದು ಸಕಾರಾತ್ಮಕ ಬೆಳವಣಿಗೆ ಎಂದು ಶ್ಲಾಘಿಸಿದರು.

ಜಿಲ್ಲಾ ಕೇಂದ್ರ ಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗಿಡನೆಡುವ ಕಾರ್ಯಗಳು ನಡೆಯುತ್ತಿದ್ದು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಹಕಾರದಿಂದ ಲಕ್ಷಾಂತರ ಗಿಡಗಳನ್ನು ಬೆಳೆಸುತ್ತಿದ್ದಾರೆ. ಚಿತ್ರದುರ್ಗ ಮತ್ತು ಕಡಿಮೆ ಮಳೆಯಾಗುವ ಜಿಲ್ಲೆಗಳಲ್ಲಿ ನೀರಿನ ಸಂರಕ್ಷಣೆ ಮತ್ತು ಗಿಡನೆಡುವ ಕಾರ್ಯ ನಡೆಯುತ್ತಿದೆ ಎಂದು ಸಿಂಧ್ಯಾ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಬಿಪ್ಯಾಕ್ ಸಂಸ್ಥೆಯ ರೇವತಿ ಅಶೋಕ್, ಸ್ಕೌಟ್ಸ್ ಅಂಡ್ ಗೈಡ್ಸ್‌ನ ರೋವರ್ಸ್‌ ಅಂಡ್ ರೇಂಜರ್ಸ್‌ ಹಾಗೂ ಸ್ವಯಂಸೇವಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News