ಭಾರತ ಮತ್ತು ಪಾಕಿಸ್ತಾನಗಳಿಂದ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ

Update: 2018-06-14 12:40 GMT

ಹೊಸದಿಲ್ಲಿ,ಜೂ.14: 2016ರಿಂದೀಚಿಗೆ ಭಾರತ ಮತ್ತು ಪಾಕಿಸ್ತಾನಗಳ ಭದ್ರತಾ ಪಡೆಗಳು ಕಾಶ್ಮೀರದ ಉಭಯ ಭಾಗಗಳಲ್ಲಿ ಅತಿಯಾದ ಬಲವನ್ನು ಬಳಸಿ ನಾಗರಿಕರ ಸಾವುನೋವುಗಳಿಗೆ ಕಾರಣವಾಗಿವೆ ಎಂದು ಗುರುವಾರ ಆರೋಪಿಸಿರುವ ವಿಶ್ವಸಂಸ್ಥೆಯು,ಮಾನವ ಹಕ್ಕುಗಳ ಉಲ್ಲಂಘನೆಗಳ ಆರೋಪದಲ್ಲಿ ಅಂತಾರಾಷ್ಟ್ರೀಯ ತನಿಖೆಗೆ ಕರೆ ನೀಡಿದೆ.

 ಶಾಂತಿಯುತ ಮಾನವ ಹಕ್ಕುಗಳ ಕಾರ್ಯಕರ್ತರಿಗೆ ಕಿರುಕುಳ ನೀಡಲು ಮತ್ತು ಭಿನ್ನಾಭಿಪ್ರಾಯಗಳನ್ನು ಮಟ್ಟಹಾಕಲು ತನ್ನ ಭಯೋತ್ಪಾದನೆ ನಿಗ್ರಹ ಕಾನೂನಿನ ದುರುಪಯೋಗವನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯು ಕಾಶ್ಮೀರ ಪ್ರದೇಶದಲ್ಲಿ ಮಾನವ ಹಕ್ಕುಗಳ ಕುರಿತ ತನ್ನ ಪ್ರಪ್ರಥಮ ವರದಿಯಲ್ಲಿ ಪಾಕಿಸ್ತಾನವನ್ನು ಆಗ್ರಹಿಸಿದೆ.

ವರದಿಯು ಜುಲೈ 2016ರಿಂದ ಎಪ್ರಿಲ್ 2018ರವರೆಗಿನ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆದಿದೆಯೆನ್ನಲಾದ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಮುಖ್ಯವಾಗಿ ಬಿಂಬಿಸಿದೆ. ಈ ಅವಧಿಯಲ್ಲಿ ಸಶಸ್ತ್ರ ಪಡೆಗಳಿಂದ 145 ನಾಗರಿಕರು ಮತ್ತು ಶಸ್ತ್ರಸಜ್ಜಿತ ಗುಂಪುಗಳಿಂದ 20 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಅಂದಾಜಿಸಿದ್ದಾರೆ ಎಂದೂ ವರದಿಯು ತಿಳಿಸಿದೆ.

ಕಾಶ್ಮೀರದಲ್ಲಿ 2016ರಲ್ಲಿ ಆರಂಭಗೊಂಡ ಪ್ರತಿಭಟನಾ ಪ್ರದರ್ಶನಗಳನ್ನು ಮಟ್ಟಹಾಕಲು ಭಾರತೀಯ ಭದ್ರತಾ ಪಡೆಗಳು ಅತಿಯಾದ ಬಲವನ್ನು ಬಳಸಿದ್ದು ಕಾನೂನುಬಾಹಿರ ಹತ್ಯೆಗಳಿಗೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರು ಗಾಯಗೊಳ್ಳಲು ಕಾರಣವಾಗಿದೆ ಎಂದು ವರದಿಯು ಬೆಟ್ಟುಮಾಡಿದೆ.

  ಗರಿಷ್ಠ ಸಂಯಮವನ್ನು ಹೊಂದಿರುವಂತೆ ಕರೆ ನೀಡಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಾಯಭಾರಿ ಝೈದ್ ರಾ ಅದ್ ಅಲ್-ಹುಸೇನ್ ಅವರು ಹೇಳಿಕೆಯೊಂದರಲ್ಲಿ,1990ರ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಪಡೆಗಳ ವಿರುದ್ಧ ಕಾನೂನು ಕ್ರಮಗಳ ಕೊರತೆಯನ್ನು ಖಂಡಿಸಿದ್ದಾರೆ. ಈ ಕಾಯ್ದೆಯು ಸಶಸ್ತ್ರ ಪಡೆಗಳಿಗೆ ಅವು ಎಸಗುವ ಅತಿರೇಕಗಳಿಂದ ಸಂಪೂರ್ಣ ವಿನಾಯಿತಿಯನ್ನು ನೀಡಿದೆ ಎಂದು ಅವರು ಬಣ್ಣಿಸಿದ್ದಾರೆ.

ಎಲ್ಲ ಉಲ್ಲಂಘನೆಗಳ ಕುರಿತು ತನಿಖೆಗಾಗಿ ವಿಚಾರಣಾ ಆಯೋಗವೊಂದನ್ನು ರಚಿಸುವಂತೆ ಸೋಮವಾರದಿಂದ ಜಿನೆವಾದಲ್ಲಿ ತನ್ನ ಮೂರು ವಾರಗಳ ಬೈಠಕ್ ಆರಂಭಿಸಲಿರುವ ಮಾನವ ಹಕ್ಕುಗಳ ಮಂಡಳಿಗೆ ಕರೆ ನೀಡಿರುವ ಅವರು,ಕಾಶ್ಮೀರ ಕಣಿವೆ ಮತ್ತು ಜಮ್ಮು ಪ್ರದೇಶದಲ್ಲಿ ಇವೆಯೆನ್ನಲಾಗಿರುವ ಸಾಮೂಹಿಕ ಸಮಾಧಿ ಸ್ಥಳಗಳ ಕುರಿತು ತನಿಖೆ ನಡೆಯಬೇಕು ಎಂದು ಹೇಳಿದ್ದಾರೆ.

ವಿಚಾರಣಾ ಆಯೋಗವು ವಿಶ್ವಸಂಸ್ಥೆಯ ಅತ್ಯುನ್ನತ ಮಟ್ಟದ ತನಿಖೆಗಳ ಲ್ಲೊಂದಾಗಿದ್ದು,ಸಾಮಾನ್ಯವಾಗಿ ಸಿರಿಯಾದಲ್ಲಿನ ಸಂಘರ್ಷದಂತಹ ಸಂದರ್ಭಗಳಿಗೆ ಮೀಸಲಾಗಿದೆ.

 2016 ಜುಲೈನಲ್ಲಿ ಭಾರತೀಯ ಭದ್ರತಾ ಪಡೆಗಳಿಂದ ಹಿಝ್ಬುಲ್ ಮುಜಾಹಿದೀನ್ ಭಯೋತ್ಪಾದಕ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಹಿಂಸಾಚಾರಗಳು ಹೆಚ್ಚಿದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಯ ಮುಖ್ಯಸ್ಥರು ಉಭಯ ಸರಕಾರಗಳ ಪ್ರತಿನಿಧಿಗಳನ್ನು ಭೇಟಿಯಾಗಿದ್ದರು ಎಂದು ವರದಿಯು ತಿಳಿಸಿದೆ.

ಪಾಕ್ ಆಕ್ರಮಿತ ಕಾಶ್ಮೀರ ಕುರಿತಂತೆ ವರದಿಯು ಹಲವಾರು ಮಾನವ ಹಕ್ಕು ಉಲ್ಲಂಘನೆಗಳನ್ನು ಗುರುತಿಸಿದ್ದು,ಅವು ವಿಭಿನ್ನ ಪ್ರಮಾಣದ್ದಾಗಿವೆ ಎಂದಿದೆ. ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ನಿರ್ಬಂಧಗಳಿಂದಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಸ್ಥಿತಿಯ ಕುರಿತು ಮಾಹಿತಿಯನ್ನು ಪಡೆಯುವುದು ಕಷ್ಟವಾಗಿದೆ ಎಂದು ಅದು ತಿಳಿಸಿದೆ.

ವಿಶ್ವಸಂಸ್ಥೆ ವರದಿಗೆ ಭಾರತದ ತಿರಸ್ಕಾರ

  ವಿಶ್ವಸಂಸ್ಥೆಯ ವರದಿಯು ದಾರಿ ತಪ್ಪಿಸುವ,ವಿವಾದಾತ್ಮಕ ಮತ್ತು ಪ್ರಚೋದಿತ ಹೇಳಿಕೆಯಾಗಿದೆ ಎಂದು ಬಣ್ಣಿಸಿರುವ ಭಾರತವು ಅದನ್ನು ತಿರಸ್ಕರಿಸಿದೆ. ಈ ವರದಿಯು ಸ್ಪಷ್ಟವಾಗಿ ಪೂರ್ವಗ್ರಹ ಪೀಡಿತವಾಗಿದೆ ಮತ್ತು ಸುಳ್ಳು ನಿರೂಪಣೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗುರುವಾರ ತನ್ನ ಹೇಳಿಕೆಯಲ್ಲಿ ಖಂಡಿಸಿದೆ.

ವಿಶ್ವಸಂಸ್ಥೆಯ ವರದಿಯು ಭಾರತದ ಸಾರ್ವಭೌಮತೆಯನ್ನು ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸಿದೆ ಎಂದೂ ಅದು ಆರೋಪಿಸಿದೆ.

ಪಾಕಿಸ್ತಾನವು ಉಗ್ರರಿಗೆ ತರಬೇತಿ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ ಮತ್ತು ಅವರು ತನ್ನ ಗಡಿಯೊಳಗೆ ನುಸುಳಲು ನೆರವಾಗುತ್ತಿದೆ ಎಂದು ಭಾರತವು ಹಿಂದಿನಿಂದಲೂ ಆರೋಪಿಸುತ್ತಿದ್ದು,ಪಾಕ್ ಸರಕಾರವು ಇದನ್ನು ನಿರಾಕರಿಸುತ್ತಲೇ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News