ಕಾರ್ಮಿಕರ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗೆ ಆಗ್ರಹ: ಆ.14 ರಂದು ಅಹೋರಾತ್ರಿ ಸಾಮೂಹಿಕ ಸತ್ಯಾಗ್ರಹ

Update: 2018-06-14 14:29 GMT

ಬೆಂಗಳೂರು, ಜೂ.14: ದೇಶದ ಐಕ್ಯತೆ, ಸ್ವಾತಂತ್ರ ಹಾಗೂ ಕಾರ್ಮಿಕ ಹಕ್ಕುಗಳ ಉಳಿವಿಗಾಗಿ, ಕಾರ್ಮಿಕರ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ, ಕನಿಷ್ಠ ವೇತನ, ಸಾಮಾಜಿಕ ಕಲ್ಯಾಣ ಯೋಜನೆಗಳ ಉಳಿವಿಗಾಗಿ ಆ.14 ರಂದು ದೇಶದಾದ್ಯಂತ ಅಹೋರಾತ್ರಿ ಸಾಮೂಹಿಕ ಸತ್ಯಾಗ್ರಹ ನಡೆಸಲು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ನೇತೃತ್ವದ ಬಿಜೆಪಿ ಸರಕಾರ ಕಾರ್ಮಿಕ ಹಕ್ಕುಗಳನ್ನು ದಮನ ಮಾಡಲು ಮುಂದಾಗಿದೆ. ಕಾರ್ಮಿಕರಿಗೆ ಸಂವಿಧಾನಬದ್ಧವಾಗಿ ನೀಡಬೇಕಾದ ಸೌಲಭ್ಯಗಳಿಂದ ವಂಚಿಸಲಾಗುತ್ತಿದೆ. ಸ್ವಲ್ಪಮಟ್ಟಿಗೆ ಕಾರ್ಮಿಕರಿಗೆ ರಕ್ಷಣೆ ನೀಡುತ್ತಿದ್ದ ಕಾನೂನುಗಳನ್ನು ಉಳ್ಳವರ ಹಿತ ಕಾಪಾಡುವ ಸಲುವಾಗಿ ಸಂಪೂರ್ಣವಾಗಿ ಬದಲಾವಣೆ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.

ಕಾರ್ಮಿಕರ ಪರವಾಗಿದ್ದ ಹಾಗೂ ಅವರ ರಕ್ಷಣೆಗಾಗಿ ಇದ್ದಸುಮಾರು 44 ಕಾರ್ಮಿಕ ಕಾನೂನುಗಳನ್ನು ವಿಂಗಡನೆ ಮಾಡಿ ಕೇವಲ 4 ಕಾರ್ಮಿಕ ಸಂಹಿತೆಗಳನ್ನಾಗಿ ಮಾರ್ಪಾಡು ಮಾಡಲು ಕೇಂದ್ರ ಸರಕಾರ ತೀರ್ಮಾನ ಮಾಡಿದೆ. ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ 15 ಕಾರ್ಮಿಕ ಕಾನೂನುಗಳಾದ ಪ್ರಾವಿಡೆಂಟ್ ಫಂಡ್ ಆಕ್ಟ್, ಇಎಸ್‌ಐ, ಹೆರಿಗೆ, ಕಾರ್ಮಿಕರ ಪರಿಹಾರ ಕಾಯ್ದೆಗಳು, ಅಸಂಘಟಿತ ಕ್ಷೇತ್ರದ ಸಾಮಾಜಿಕ ಭದ್ರತೆ ಕಾಯ್ದೆ, ಕಟ್ಟಡ ಕಾರ್ಮಿಕರ ಕಲ್ಯಾಣ ಸೆಸ್ ಕಾಯ್ದೆ, ಬೀಡಿ ಕಾರ್ಮಿಕರ ಕಲ್ಯಾಣ ಸೆಸ್ ಕಾಯ್ದೆಗಳನ್ನು ವಿಲೀನಗೊಳಿಸಿ ಸಾಮಾಜಿಕ ಭದ್ರತೆ ಕಾಯ್ದೆ ತರಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.

ನಿಗದಿತ ಅವಧಿಗೆ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವ ಅವಕಾಶ ನೀಡುವ ಎಫ್‌ಟಿ ಪದ್ಧತಿಯನ್ನು ಜಾರಿ ಮಾಡಲು ಮಾಲಕರಿಗೆ ಅವಕಾಶ ಕೊಡುವ ತಿದ್ಧುಪಡಿಯನ್ನು ಕೇಂದ್ರದ ಹಣಕಾಸು ಮಸೂದೆ ಭಾಗವಾಗಿ ಜಾರಿಗೆ ತರಲಾಗಿದೆ. ಇದರಿಂದ ಖಾಯಂ ನೌಕರಿ ಎಂಬುದು ದೇಶದ ಯುವಜನರಿಗೆ ಕನಸಾಗಿಯೇ ಉಳಿಯಲಿದೆ. ಅಲ್ಲದೆ, ನೀಮ್ ಹಾಗೂ ನೆಟಾಪ್ ಯೋಜನೆಗಳ ಅಡಿಯಲ್ಲಿ ಕನಿಷ್ಠ ವೇತನಕ್ಕೂ ಕಡಿಮೆ ವೇತನದಲ್ಲಿ ಬಹುಸಂಖ್ಯೆಯ ಕಾರ್ಮಿಕರನ್ನು ದುಡಿಸಿಕೊಳ್ಳುವ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದರು.

ಉತ್ಪಾದನೆ ಮತ್ತು ಸೇವಾ ವಲಯಗಳಲ್ಲಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಬದಲಿಗೆ ಇರುವ ಉದ್ಯೋಗಾವಕಾಶಗಳನ್ನು ಗುತ್ತಿಗೆ, ಹೊರಗುತ್ತಿಗೆ, ಸಾಂದರ್ಭಿಕ ಕೆಲಸಗಾರರು ಎಂದು ಮಾರ್ಪಡಿಸಿ, ಖಾಯಂ ಉದ್ಯೋಗಗಳನ್ನು ನಾಶ ಮಾಡಲಾಗುತ್ತಿದೆ. ಕಾರ್ಮಿಕರು ಅಭದ್ರತೆಯಲ್ಲಿ ನರಳುವಂತಾಗಿದೆ. ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತಿಲ್ಲವಾದರೂ, ದಿನನಿತ್ಯ ತೈಲ ಬೆಲೆಯನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಬೇಡಿಕೆಗಳು: ಎಲ್ಲ ಕಾರ್ಮಿಕರಿಗೂ ಮಾಸಿಕ ಕನಿಷ್ಠ ವೇತನ 18 ಸಾವಿರ ನಿಗದಿ ಮಾಡಬೇಕು. ಗುತ್ತಿಗೆ ಹಾಗೂ ಖಾಯಂಯೇತರ ಕಾರ್ಮಿಕರ ಖಾಯಂಮಾತಿಗೆ ಶಾಸನ ಮಾಡಬೇಕು. ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಸಾರ್ವಜನಿಕ ಉದ್ದಿಮೆ ರಕ್ಷಣೆ ಮಾಡಬೇಕು. ನೂತನ ಪಿಂಚಣಿ ಬದಲಿಗೆ ಖಾತ್ರಿ ಪಿಂಚಣಿ ಜಾರಿಗೆ ತರಬೇಕು. ನಿರುದ್ಯೋಗ ನಿವಾರಣೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು. ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News