ಸತ್ಯ ಬಹಿರಂಗಕ್ಕಾಗಿ ಪುಸ್ತಕ ವಿವಾದ: ರೇಹಮ್

Update: 2018-06-16 18:47 GMT

ಲಂಡನ್, ಜೂ. 16: ಇನ್ನಷ್ಟೇ ಬಿಡುಗಡೆಯಾಗಬೇಕಿರುವ ತನ್ನ ಆತ್ಮಚರಿತ್ರೆ ವಿವಾದಕ್ಕೊಳಗಾಗಿರುವುದು ಅದು ಸೋರಿಕೆಯಾಗಿರುವುದಕ್ಕಲ್ಲ, ಸತ್ಯವನ್ನು ಬಹಿರಂಗಪಡಿಸಿರುವುದಕ್ಕಾಗಿ ಎಂದು ಪಾಕಿಸ್ತಾನದ ಪ್ರತಿಪಕ್ಷ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್‌ರ ಮಾಜಿ ಪತ್ನಿ ರೇಹಮ್ ಖಾನ್ ಹೇಳಿದ್ದಾರೆ.

‘‘ನನ್ನ ಪುಸ್ತಕ ಟೀಕೆಗೊಳಗಾಗಿರುವುದು ಅದು ಸೋರಿಕೆಯಾಗಿರುವುದಕ್ಕಲ್ಲ, ಅದು ಒಳಗೊಂಡಿರುವ ಸತ್ಯಕ್ಕಾಗಿ. ನಾನು ಪುಸ್ತಕ ಬರೆದರೂ, ಬರೆಯದಿದ್ದರೂ ಪ್ರತಿಯೊಬ್ಬರಿಗೂ ವಾಸ್ತವಾಂಶಗಳು ಗೊತ್ತಿದೆ’’ ಎಂದು ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿರುವ ರೇಹಮ್ ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದರು.

ಖ್ಯಾತನಾಮರೊಂದಿಗಿನ ರೇಹಮ್‌ರ ಒಡನಾಟಗಳು ಮತ್ತು ಇಮ್ರಾನ್ ಜೊತೆಗಿನ ಅವರ ಮದುವೆಯ ಕುರಿತ ವಿವರಗಳು ಪುಸ್ತಕದಲ್ಲಿವೆ ಎನ್ನಲಾಗಿದೆ.

‘‘ನನ್ನ ಪುಸ್ತಕದ ಬಗ್ಗೆ ಯಾರೂ ಕಳವಳಗೊಳ್ಳಬೇಕಾಗಿಲ್ಲ. ಅದು ನನ್ನ ಬದುಕಿನ ಕುರಿತ ಪುಸ್ತಕ. ನನ್ನ ಹೋರಾಟಗಳು ಹಾಗೂ ನಾನು ಅವುಗಳನ್ನು ಹೇಗೆ ಎದುರಿಸಿದೆ ಎನ್ನುವುದರ ವಿವರಗಳು ಅದರಲ್ಲಿವೆ’’ ಎಂದು ರೇಹಮ್ ಹೇಳಿದರು.

ನನಗೆ ಕೊಲೆ ಬೆದರಿಕೆಯಿದೆ

ಆತ್ಮಚರಿತ್ರೆ ಬಿಡುಗಡೆ ಮಾಡುತ್ತಿರುವುದಕ್ಕಾಗಿ ತನಗೆ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ರೇಹಮ್ ಖಾನ್ ಹೇಳಿದರು.

‘‘ಪುಸ್ತಕ ಬಿಡುಗಡೆ ಮಾಡುತ್ತಿರುವುದಕ್ಕಾಗಿ ನನಗೆ ಕೊಲೆ ಬೆದರಿಕೆಗಳು ಬರುತ್ತಿವೆ. ಇದೇ ಕಾರಣಕ್ಕಾಗಿ ನನ್ನನ್ನು ಅವಮಾನಕ್ಕೆ ಗುರಿಪಡಿಸಲಾಗುವುದು ಎಂಬ ಬೆದರಿಕೆಯೂ ಬಂದಿದೆ. ಇದು ಬೇಸರದ ಸಂಗತಿಯಾಗಿದೆ. ಆದರೆ ನಾನು ಆಶಾವಾದಿ. ಇಂಥ ವಿಷಯಗಳು ನನ್ನನ್ನು ಕುಗ್ಗಿಸುವುದಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News