ನೀರು ಶುದ್ಧೀಕರಿಸುವ ಸ್ಪಂಜ್: ಭಾರತ ಸಂಜಾತೆಯ ಹೊಸ ಸಂಶೋಧನೆ

Update: 2018-06-17 04:30 GMT

ಟೊರಾಂಟೊ, ಜೂ.17: ನಿಮ್ಮ ಹಜಾರದ ಸೋಫಾದಲ್ಲಿರುವ ಸ್ಪಂಜ್ ನೀರು ಮಾಲಿನ್ಯ ತಡೆಯಲು ಸಾಧ್ಯವೇ? ಹೌದು ಎನ್ನುತ್ತಾರೆ ಟೊರಾಂಟೊ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ನಡೆಸುತ್ತಿರುವ ಭಾರತೀಯ ಮೂಲದ ಸಂಶೋಧನಾ ವಿದ್ಯಾರ್ಥಿ ಪಾವನಿ ಚೆರುಕುಪಲ್ಲಿ.

ಜಲ ಮಾಲಿನ್ಯವನ್ನು ತಡೆಗಟ್ಟಲು ಇದನ್ನು ಪರಿಣಾಮಕಾರಿಯಾಗಿ ಬಳಸಬಹುದು ಎನ್ನುವುದು ಇವರ ಸಂಶೋಧನೆ. ಹೈದಬಾರಾದ್‌ನಲ್ಲಿ ಮುಸಿ ನದಿಯ ನೀರು ಮಲಿನವಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟುವ ಮಾರ್ಗೋಪಾಯಗಳ ಬಗ್ಗೆ ಸಂಶೋಧನೆ ನಡೆಸಿದ ಪಾವನಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ವಿಶ್ವವಿದ್ಯಾನಿಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಅಧ್ಯಯನ ನಡೆಸುತ್ತಿರುವ ಇವರು, "ಸ್ಪಂಜ್ ಆಧರಿತ ನೀರು ತಂತ್ರಜ್ಞಾನವನ್ನು ನಾನು ಅಭಿವೃದ್ಧಿಪಡಿಸಿದ್ದೇನೆ. ಇದು ತೈಲ ಕ್ಷೇತ್ರದ ತ್ಯಾಜ್ಯ ನೀರನ್ನು ಸಾಮಾನ್ಯ ಸ್ಪಂಜ್ ಬಳಸಿಕೊಂಡು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ" ಎಂದು ಅವರು ಹೇಳಿದ್ದಾರೆ.

"ಈ ನೀರಿನಲ್ಲಿ ಪ್ರಬಲ ಜೈವಿಕ ಮಾಲಿನ್ಯ ಇತ್ತು. ನಿಮಗೆ ತಿಳಿದಿರುವಂತೆ ಗಂಗಾ, ಯಮುನಾ ಹಾಗೂ ಮುಸಿ ನದಿಗಳು ಇಂಥ ಮಾಲಿನ್ಯಕ್ಕೀಡಾಗಿದ್ದು, ಭಾರತೀಯ ನದಿಗಳ ಶುದ್ಧೀಕರಣಕ್ಕೆ ಈ ತಂತ್ರಜ್ಞಾನವನ್ನು ಬಳಸಬಹುದಾಗಿದೆ" ಎಂದು ಅವರು ವಿವರಿಸಿದ್ದಾರೆ.

ಮಾಲಿನ್ಯಕಾರಕ ಅಂಶಗಳನ್ನು ಹೀರಿಕೊಳ್ಳಲು ಸ್ಪಂಜ್ ಬಳಸುವ ವಿಧಾನ 1800ರಿಂದಲೂ ಚಾಲ್ತಿಯಲ್ಲಿದೆ. ಬಹಳಷ್ಟು ಮಂದಿ ತಮ್ಮ ಅಡುಗೆಮನೆ ಕೌಂಟರ್ ಸ್ವಚ್ಛಗೊಳಿಸಲು ಬಳಸುತ್ತಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ಅತ್ಯಂತ ಸರಳ ಪರಿಕಲ್ಪನೆಯನ್ನು ಚೆರುಕುಪಲ್ಲಿ ಅಭಿವೃದ್ಧಿಪಡಿಸಿದ್ದಾರೆ. ದೊಡ್ಡ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಇದು ಹೊಸ ತಾಂತ್ರಿಕ ಕೌಶಲಗಳನ್ನು ಅಳವಡಿಸಿಕೊಂಡಿದೆ. ಇದು ಫಿಲ್ಟರ್ ಆಗಿ ಕೆಲಸ ಮಾಡುತ್ತದೆ ಎನ್ನುವುದು ಅವರ ವಿವರಣೆ. "ಸ್ಪಂಜ್ ಮೂಲಕ ನೀರು ಹರಿಸಿದಾಗ ತೈಲಕಣಗಳು ಸಿಕ್ಕಿಹಾಕಿಕೊಂಡು ಸ್ವಚ್ಛ ನೀರು ಹೊರಬರುತ್ತದೆ" ಎಂದು ಅವರು ಹೇಳುತ್ತಾರೆ.

ಈ ಪರಿಕಲ್ಪನೆಯನ್ನು ಪ್ರಯೋಗಾಲಯದಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದಕ್ಕಾಗಿ ಪಾಲಿಯುರೇಥಿನ್ ಸ್ಪಂಜ್ ಬಳಸುವ ಪ್ರಯತ್ನ ನಡೆದಿದೆ. ಇದು ನೀರಿನ ಮಾಲಿನ್ಯಕಾರಕ ಕಣಗಳನ್ನು ಆಕರ್ಷಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News