ನಿರ್ಲಕ್ಷ್ಯ ಆರೋಪ: ಆಸ್ಪತ್ರೆಗೆ 10 ಲಕ್ಷ ರೂಪಾಯಿ ದಂಡ

Update: 2018-06-17 04:58 GMT

ಚೆನ್ನೈ, ಜೂ.17: ನಿರ್ಜೀವ ಶಿಶು ಹುಟ್ಟಲು ಕಾರಣವಾದ ಮತ್ತು ಸೂಕ್ತ ವೈದ್ಯಕೀಯ ಕಾಳಜಿ ವಹಿಸದೇ ತಾಯಿಯ ಸಾವಿಗೂ ಕಾರಣವಾದ ಆರೋಪದಲ್ಲಿ ಇಲ್ಲಿನ ಚೆಟ್‌ಪೇಟ್‌ನ ಖಾಸಗಿ ನರ್ಸಿಂಗ್‌ಹೋಮ್ ಒಂದಕ್ಕೆ ಹತ್ತು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

2010ರ ಆಗಸ್ಟ್ 9ರಂದು ರಾಜೇಶ್ ಕುಮಾರ್ ಎಂಬವರ ಪತ್ನಿ ತುಳಸಿ ಎಂಬುವವರನ್ನು ಜೋಸೆಫ್ ನರ್ಸಿಂಗ್‌ ಹೋಂಗೆ ದಾಖಲಿಸಲಾಗಿತ್ತು. ಸಂಜೆ 6:27ರಿಂದ ರಾತ್ರಿ 12:15ರವರೆಗೂ ಫೆಟಲ್ ಹಾರ್ಟ್ ರೇಟ್ (ಎಫ್‌ಎಚ್‌ಆರ್) ಮಾಮೂಲಿ ಇತ್ತು. ಆಗಸ್ಟ್ 11ರಂದು ಸಾಮಾನ್ಯ ಹೆರಿಗೆಯಾಗಿದೆ ಎಂದು ದಾಖಲಾಗಿದೆ. ಆದರೆ ಮಗು ಹುಟ್ಟುವ ಮುನ್ನವೇ ಸತ್ತಿದ್ದು, ಆಮ್ಲಜನಕ ಕೊರತೆ ಇದಕ್ಕೆ ಕಾರಣ ಎಂದು ವೈದ್ಯಕೀಯ ದಾಖಲೆಯಲ್ಲಿ ನಮೂದಾಗಿತ್ತು.

ಹೆರಿಗೆಗೆ ಮುನ್ನ ಎಫ್‌ಎಚ್‌ಆರ್ ಕುಸಿದ ಹಿನ್ನೆಲೆಯಲ್ಲಿ ಸಿಸೇರಿಯನ್ ನಡೆಸಿ ಮಗುವನ್ನು ರಕ್ಷಿಸಬಹುದಿತ್ತು. ಪ್ರತಿ 15 ನಿಮಿಷಗಳಿಗೊಮ್ಮೆ ಎಫ್‌ಎಚ್‌ಆರ್ ದಾಖಲಿಸದಿರುವುದು ಆಸ್ಪತ್ರೆಯ ನಿರ್ಲಕ್ಷ್ಯ ಎಂದು ನಿರ್ಧರಿಸಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ ಅಧ್ಯಕ್ಷ ಕೆ.ಜಯಬಾಲನ್ ತೀರ್ಪು ನೀಡಿದ್ದಾರೆ.

10 ಲಕ್ಷ ರೂಪಾಯಿ ಪರಿಹಾರ ಹಾಗೂ 6.06 ಲಕ್ಷ ರೂಪಾಯಿ ವೈದ್ಯಕೀಯ ವೆಚ್ಚವನ್ನು ಪಾವತಿಸುವಂತೆ ಆಸ್ಪತ್ರೆಗೆ ಸೂಚಿಸಲಾಗಿದೆ. ಅಂತೆಯೇ ಹೆರಿಗೆ ನಂತರ ಹ್ಯಾಮರೇಜ್ ತಡೆಯಲು ಸೂಕ್ತ ತಪಾಸಣೆ ಮಾಡದ ಕಾರಣ ಪತ್ನಿ ಕೂಡಾ ಜೀವ ಕಳೆದುಕೊಳ್ಳಬೇಕಾಯಿತು ಎಂದು ಅರ್ಜಿದಾರರು ವಾದಿಸಿದ್ದರು. ಹೆರಿಗೆ ನಂತರದ ಹ್ಯಾಮರೇಜ್ ಎಂದರೆ, ಮಗು ಹುಟ್ಟಿದ ಬಳಿಕ ರಕ್ತಸ್ರಾವವಾಗುವುದು. ಈ ಪ್ರಕರಣದಲ್ಲಿ ತಾಯಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News