ವೆನೆಝುವೆಲಾದ ನೈಟ್‌ಕ್ಲಬ್‌ನಲ್ಲಿ ನೂಕುನುಗ್ಗಲಿಗೆ 17 ಜೀವಗಳು ಬಲಿ

Update: 2018-06-17 07:48 GMT

ಕಾರಾಕಸ್,ಜೂ.17: ವೆನೆಝುವೆಲಾದ ರಾಜಧಾನಿ ಕಾರಾಕಸ್‌ನ ನೈಟ್‌ಕ್ಲಬ್‌ವೊಂದರಲ್ಲಿ ಶನಿವಾರ ರಾತ್ರಿ ಮಿಡ್ಲ್ ಸ್ಕೂಲ್‌ವೊಂದರ ಗ್ರಾಜ್ಯುಯೇಷನ್ ಪಾರ್ಟಿಯಲ್ಲಿ ಎರಡು ಗುಂಪುಗಳು ಹೊಡೆದಾಡಿಕೊಂಡ ಸಂದರ್ಭ ಅಶ್ರುವಾಯು ಗ್ರೆನೇಡ್ ಸ್ಫೋಟಿಸಿದ ಬಳಿಕ ಉಂಟಾದ ನೂಕುನುಗ್ಗಲಿನಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

 ಎಲ್ ಪ್ಯಾರಾಸಿಯೊ ಪ್ರದೇಶದಲ್ಲಿನ ‘ಲಾಸ್ ಕೊಟೊರಸ್’ ಕ್ಲಬ್‌ನಲ್ಲಿ ನಡೆದ ದುರಂತದಲ್ಲಿ ಎಂಟು ಅಪ್ರಾಪ್ತ ವಯಸ್ಕರು ಮೃತಪಟ್ಟಿದ್ದು,ಐವರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವ ನೆಸ್ಟರ್ ರೆವೆರಲ್ ಅವರು ಘಟನೆಯ ಬೆನ್ನಲ್ಲೇ ನೀಡಿದ್ದ ಹೇಳಿಕೆಯಲ್ಲಿ ತಿಳಿಸಿದ್ದರು. ಅಶ್ರುವಾಯು ಬಾಂಬ್‌ನ್ನು ಸ್ಫೋಟಿಸಿದ್ದರೆನ್ನಲಾದ ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ಎಂಟು ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸಮೀಪದಲ್ಲಿಯ ಆಸ್ಪತ್ರೆಯಲ್ಲಿ ತಮ್ಮ ಪ್ರೀತಿಪಾತ್ರರ ಶವಗಳನ್ನು ಕಂಡು ದುಃಖತಪ್ತ ಕುಟುಂಬ ಸದಸ್ಯರು ರೋದಿಸುತ್ತಿದ್ದ ದೃಶ್ಯ ಹೃದಯವಿದ್ರಾವಕವಾಗಿತ್ತು. ಕ್ಲಬ್‌ನ ಹೊರಗೆ ಫುಟ್‌ಪಾತ್‌ನಲ್ಲಿ ನೂರಾರು ಶೂಗಳು ಅನಾಥವಾಗಿ ಬಿದ್ದಿದ್ದವು.

ಹೊಡೆದಾಟ ಸಂಭವಿಸಿದಾಗ 500ಕ್ಕೂ ಅಧಿಕ ಜನರು ನೈಟ್‌ಕ್ಲಬ್‌ನಲ್ಲಿದ್ದರು. ಬಾತ್‌ರೂಮಿನಲ್ಲಿ ಅಶ್ರುವಾಯು ಬಾಂಬ್‌ನ್ನು ಸಿಡಿಸಲಾಗಿತ್ತು ಮತ್ತು ಜನರು ಜೀವವುಳಿಸಿಕೊಳ್ಳಲು ಏಕಕಾಲದಲ್ಲಿ ಮುಚ್ಚಿದ್ದ ಬಾಗಿಲುಗಳತ್ತ ಧಾವಿಸಿದ್ದು ನೂಕುನುಗ್ಗಲಿಗೆ ಕಾರಣವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದಕ್ಕೆ ಮತ್ತು ಅಶ್ರುವಾಯು ಬಾಂಬ್ ಒಳಗೆ ತರುವುದನ್ನು ತಡೆಯದಿದ್ದಕ್ಕಾಗಿ ಕ್ಲಬ್‌ನ ಮಾಲಿಕನನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News