ಹಲವು ಭಾರತೀಯ ಪಾಸ್‌ಪೋರ್ಟ್ ಬಳಕೆ: ನೀರವ್ ಮೋದಿ ವಿರುದ್ಧ ಹೊಸ ಎಫ್‌ಐಆರ್ ದಾಖಲು

Update: 2018-06-17 14:08 GMT

ಹೊಸದಿಲ್ಲಿ, ಜೂ. 17: ಪಂಜಾಬ್ ನ್ಯಾಶನಲ್ ಹಗರಣದ ಕುರಿತು ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಗಳು ತಲೆಮರೆಸಿಕೊಂಡಿರುವ ವಜ್ರೋದ್ಯಮಿ ನೀರವ್ ಮೋದಿಯ ವಶದಲ್ಲಿ ಕನಿಷ್ಠ 6 ಭಾರತೀಯ ಪಾಸ್‌ಪೋರ್ಟ್ ಇರುವುದನ್ನು ಪತ್ತೆ ಹಚ್ಚಿದ್ದಾರೆ ಹಾಗೂ ಈ ಅಪರಾಧಕ್ಕಾಗಿ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಿದೆ. ಭಾರತೀಯ ತನಿಖಾ ಸಂಸ್ಥೆ ಅಧಿಕಾರಿಗಳು ಮೋದಿ ಅವರನ್ನು ಬೆಲ್ಜಿಯಂನಲ್ಲಿ ಪತ್ತೆ ಮಾಡಿದ್ದಾರೆ.

ಪಾಸ್‌ಪೋರ್ಟ್ ರದ್ದುಗೊಳಿಸಿದ ಹೊರತಾಗಿಯೂ ಆಗಾಗ ಪ್ರಯಾಣಿಸುತ್ತಿರುವ ಹಿನ್ನೆಲೆಯಲ್ಲಿ ನೀರವ್ ಮೋದಿ ವಶದಲ್ಲಿ 6 ಪಾಸ್‌ಪೋರ್ಟ್‌ಗಳು ಇರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇದರಲ್ಲಿ ಎರಡು ಪಾಸ್‌ಪೋರ್ಟ್ ಕಳೆದ ಕೆಲವು ಸಮಯದಿಂದ ಸಕ್ರಿಯವಾಗಿವೆ. ಉಳಿದ ನಾಲ್ಕು ಪಾಸ್‌ಪೋರ್ಟ್‌ಗಳನ್ನು ಸಕ್ರಿಯವಾಗಿಲ್ಲ ಎಂಬುದನ್ನು ತನಿಖಾ ಸಂಸ್ಥೆ ಅಧಿಕಾರಿಗಳು ಕಂಡುಕೊಂಡಿದ್ದಾರೆ. ಎರಡು ಸಕ್ರಿಯ ಪಾಸ್‌ಪೋರ್ಟ್‌ಗಳಲ್ಲಿ ಒಂದರರಲ್ಲಿ ಅವರ ಪೂರ್ಣ ಹೆಸರಿದೆ. ಇನ್ನೊಂದರಲ್ಲಿ ಮೊದಲ ಹೆಸರು ಮಾತ್ರ ಇದೆ. ಅದರೊಂದಿಗೆ ಇಂಗ್ಲೆಂಡ್‌ನ 40 ತಿಂಗಳ ವಿಸಾ ನೀಡಲಾಗಿದೆ. ಇದರಿಂದ ಈ ವರ್ಷದ ಆರಂಭದಲ್ಲಿ ಪಾಸ್‌ಪೋರ್ಟ್‌ಗಳನ್ನು ಸರಕಾರ ರದ್ದು ಮಾಡಿದ ಹೊರತಾಗಿಯೂ ಅವರು ವಿವಿಧ ರಾಷ್ಟ್ರಗಳಿಗೆ ಪ್ರಯಾಣಿಸಲು ಸಾಧ್ಯವಾಗಿರಬಹುದು ಎಂದು ಮೂಲಗಳು ತಿಳಿಸಿವೆ. ಮೋದಿ ಅವರ ಎರಡು ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಿರುವ ಬಗ್ಗೆ ಸರಕಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಇಂಟರ್‌ಪೋಲ್‌ಗೆ ಮಾಹಿತಿ ನೀಡಿತ್ತು. ಆದರೆ, ಏಕರೂಪದ ಅಂತಾರಾಷ್ಟ್ರೀಯ ಕಾರ್ಯವಿಧಾನದ ಗೈರಿನಿಂದ ವಿವಿಧ ದೇಶಗಳಲ್ಲಿ ಈ ಪಾಸ್‌ಪೋಟ್ ಬಳಸಿ ಪ್ರಯಾಣವನ್ನು ಕಾನೂನಾತ್ಮಕವಾಗಿ ತಡೆಯಲು ಸಾಧ್ಯವಾಗಿಲ್ಲ. ಆದುದರಿಂದ ಈ ದೇಶಭ್ರಷ್ಟ ವಜ್ರೋದ್ಯಮಿ ಈ ಪಾಸ್‌ಪೋರ್ಟ್ ಬಳಸಿ ವಿಮಾನ ನಿಲ್ದಾಣಗಳ ಹಾಗೂ ಬಂದರುಗಳ ಮೂಲಕ ಪ್ರಯಾಣಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News