ಸ್ವಾಮೀಜಿಗಳು ಸ್ವಾರ್ಥಕ್ಕಾಗಿ ಬೀದಿಗಿಳಿಯುತ್ತಿದ್ದಾರೆ: ಪ್ರೊ.ಜಿ.ಕೆ.ಗೋವಿಂದರಾವ್

Update: 2018-06-17 14:12 GMT

ಬೆಂಗಳೂರು, ಜೂ.17: ಸ್ವಾಮೀಜಿಗಳು ಜಾತಿ ಪದ್ಧತಿ, ಕೋಮುವಾದ, ಜೀತ ಪದ್ಧತಿ ಸೇರಿ ಮತ್ತಿತರ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ನಿರಂತರವಾಗಿ ಶ್ರಮಿಸಬೇಕು. ಆದರೆ, ಈ ಕೆಲ ಸ್ವಾಮೀಜಿಗಳು ತಮ್ಮ ಸ್ವಾರ್ಥಕ್ಕಾಗಿ ನಮ್ಮ ಜಾತಿಯ ಮುಖಂಡನಿಗೆ ಯಾಕೆ ಮಂತ್ರಿಸ್ಥಾನವನ್ನು ನೀಡಿಲ್ಲ ಎನ್ನುವ ಮೂಲಕ ಸ್ವಾರ್ಥ ಮನೋಭಾವನೆಯ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ ಎಂದು ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದರಾವ್ ಆಪಾದಿಸಿದ್ದಾರೆ.

ರವಿವಾರ ನಯನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಅಂಗವಾಗಿ ಜಾತಿವಾದಿ ಕೋಮುವಾದಿ ಶಕ್ತಿ ವಿರೋಧಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜಕಾರಣ, ಶಿಕ್ಷಣ ಕ್ಷೇತ್ರ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಸ್ವಾರ್ಥತೆ ಹೆಚ್ಚಾಗುತ್ತಿದೆ. ಅದೇ ರೀತಿಯಾಗಿ ಅನಿಷ್ಟ ಪದ್ಧತಿಗಳನ್ನು ವಿರೋಧಿಸಬೇಕಾದ ಸ್ವಾಮೀಜಿಗಳೆ ಇಂದು ತಮ್ಮ ಸ್ವಾರ್ಥಕ್ಕಾಗಿ ತಮ್ಮ ಜಾತಿ ಮುಖಂಡನಿಗೆ ಮಂತ್ರಿಗಿರಿ ಪದವಿಯನ್ನು ಕೊಡಿಸಲು ಹೋರಾಟ ನಡೆಸುತ್ತಿದ್ದಾರೆ ಎಂದು ಆಪಾದಿಸಿದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅಂತಹ ವ್ಯಕ್ತಿಗಳು ಹಾಗೂ ಆರೆಸ್ಸೆಸ್ಸ್ ಮುಖಂಡರು ಈ ದೇಶವನ್ನು ಹಿಂದುತ್ವ ರಾಷ್ಟ್ರವನ್ನಾಗಿಸುವ ಮೂಲ ಉದ್ದೇಶವನ್ನಿಟ್ಟುಕೊಂಡಿದ್ದು, ನಾವು ಇದೇ ರೀತಿಯಾಗಿ ಉದಾಸೀನತೆ ತೋರಿಸಿದರೆ ಮೋದಿ, ಅನಂತ್ ಕುಮಾರ್ ಹೆಗಡೆ ಅಂತಹವರು ಇನ್ನಷ್ಟು ಜನರು ಹುಟ್ಟುವ ಮೂಲಕ ಭಾರತೀಯ ಸಂವಿಧಾನಕ್ಕೆ ಧಕ್ಕೆ ತರುತ್ತಾರೆ, ಅದರ ಜೊತೆಗೆ ಹಿಂದುತ್ವದ ಬೇರುಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾರೆ ಎಂದು ಹೇಳಿದರು.

ಬಿಜೆಪಿ ಹಾಗೂ ಆರೆಸ್ಸೆಸ್ ಮುಖಂಡರಿಗೆ ಮುಸ್ಲಿಮರು, ಕ್ರಿಶ್ಚಿಯನ್ನರು, ಎಸ್ಸಿ, ಎಸ್ಟಿಗಳೆ ಟಾರ್ಗೆಟ್ ಆಗಿದ್ದು, ಇವರೆಲ್ಲರನ್ನೂ ಹೆದರಿಸಿ, ಬೆದರಿಸಿ ತಮ್ಮ ಅಜೆಂಡಾವನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಇದೆಲ್ಲಕ್ಕೆ ಕಡಿವಾಣ ಹಾಕಲು ನಮ್ಮ ಹೋರಾಟಗಳು ಮತ್ತಷ್ಟು ಗಟ್ಟಿಗೊಳ್ಳಬೇಕೆಂದು ಸಲಹೆ ನೀಡಿದರು.

ಬೆಂಗಳೂರು ವಿವಿ ಪ್ರಾಧ್ಯಾಪಕ, ಸಾಹಿತಿ ನಟರಾಜ ಹುಳಿಯಾರ್ ಮಾತನಾಡಿ, ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು ದಲಿತರಿಗೆ ಸರಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳು ಸಿಗುವ ಬಗ್ಗೆ ಧ್ವನಿ ಎತ್ತುವುದಿಲ್ಲ. ಆದರೆ, ದಲಿತ ಎಂಬ ಪದವನ್ನು ಯಾಕೆ ಬಳಸುತ್ತೀರಿ ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಪ್ರಶ್ನಿಸುವ ಮೂಲಕ ಮೀಸಲಾತಿಯನ್ನು ಹೋಗಲಾಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ನುಡಿದರು.

ಖಾಸಗಿ ವಲಯದಲ್ಲಿ ಸಾಕಷ್ಟು ಭ್ರಷ್ಟಾಚಾರ ಇದೆ. ಹೀಗಾಗಿಯೆ ಆ ಖಾಸಗಿ ವಲಯದ ಕಂಪೆನಿಗಳು ಸಾಲದಲ್ಲಿ ಸಿಲುಕಿಕೊಂಡರೆ ಅವುಗಳನ್ನು ರಕ್ಷಿಸಲು ಕೇಂದ್ರ ಸರಕಾರ ಬರುತ್ತದೆ. ಆದರೂ ಖಾಸಗಿ ವಲಯದಲ್ಲಿ ಇರುವವರನ್ನು ಕಾರ್ಯಾಂಗದ ಕ್ಷೇತ್ರಕ್ಕೆ ಕರೆದುಕೊಂಡು ಬರುತ್ತೇವೆ ಎನ್ನುವುದು ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದರು.

ಸಮಾಜವಾದಿ ಚಿಂತಕ ರುದ್ರಪ್ಪ ಹನಗವಾಡಿ ಮಾತನಾಡಿ, ಶಿಕ್ಷಣ ಕ್ಷೇತ್ರ ಸೇರಿ ಮತ್ತಿತರ ಕ್ಷೇತ್ರಗಳಲ್ಲಿ ದಲಿತರಿಗೆ ವ್ಯಾಪಕ ಅನ್ಯಾಯವಾಗುತ್ತಿದ್ದು, ಈ ಅನ್ಯಾಯವನ್ನು ತಡೆಗಟ್ಟಲು ದಲಿತ ಸಂಘಟನೆಗಳು ವ್ಯಾಪಕ ಹೋರಾಟಗಳನ್ನು ನಡೆಸಬೇಕಾಗಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕರಾದಸಂಸ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ಪ್ರಗತಿಪರ ಚಿಂತಕಿ ಅಖಿಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News