ಇಂದಿನ ರಾಜಕೀಯ ಬಿಕ್ಕಟ್ಟು ಇತಿಹಾಸದ ದುರಂತ: ದೊರೆಸ್ವಾಮಿ

Update: 2018-06-17 14:55 GMT

ಬೆಂಗಳೂರು, ಜೂ.17: ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯಿಂದ ಉಂಟಾದ ರಾಜಕೀಯ ಬಿಕ್ಕಟ್ಟು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ದುರಂತವಾಗಿದೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ವಾಭಿಮಾನಿ ಕರ್ನಾಟಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ‘ಪ್ರಸ್ತುತ ರಾಕೀಯ ಬಿಕ್ಕಟ್ಟು ಮತ್ತು ಸಾರ್ವಜನಿಕ ಜವಾಬ್ದಾರಿ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಅಧಿಕಾರಕ್ಕಾಗಿ ರಾಜಕೀಯ ಪಕ್ಷಗಳು ಮಾಡಿದ ಅನೈತಿಕ ರಾಜಕೀಯ ಜನರಲ್ಲಿ ರಾಜಕೀಯ ಎಂದರೆ ಹೊಲಸು ಎಂಬ ಭಾವನೆ ಮೂಡಿಸಿದೆ ಎಂದು ಹೇಳಿದರು.

ಹೊಲಸು ರಾಜಕೀಯದ ನಡುವೆ ಅಧಿಕಾರಕ್ಕೆ ಬಂದಿರುವ ಸಮ್ಮಿಶ್ರ ಸರಕಾರ ಜನರಿಗೆ ನೈತಿಕವಾಗಿ ಸರಿಯಲ್ಲ ಅನಿಸುತ್ತಿದ್ದರೂ ಸಂವಿಧಾನ ಬದ್ಧವಾಗಿ ಸರಿಯಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಅದನ್ನು ಒಪ್ಪಿ ನಡೆಯಬೇಕು ಎಂದ ಅವರು, ರಾಜ್ಯ ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ನಾಟಕ ಅಸಹ್ಯ ಮೂಡಿಸುವಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಪೂರ್ಣ ಬಹುಮತ ಪಡೆಯದೇ 2 ಪಕ್ಷಗಳು ಅಧಿಕಾರಕ್ಕೆ ಬಂದಿದ್ದು, ಈ ಸಮ್ಮಿಶ್ರ ಸರಕಾರದಲ್ಲಿ ಶಾಸಕರು ಸಚಿವ ಸ್ಥಾನಕ್ಕೆ ಒತ್ತಾಯ ಮಾಡಲು ಅನರ್ಹರು. ಆದರೆ, ಇಂದು ಅನೇಕ ಶಾಸಕರು ತಮ್ಮ ವಂಶಪಾರಂಪರ್ಯ ಆಸ್ತಿ ಎಂಬಂತೆ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದು ಕುಳಿತಿರುವುದು ನಾಚಿಕೆಗೇಡಿನ ವಿಚಾರ. ಮುಂದಿನ ದಿನಗಳಲ್ಲೂ ಇದೇ ಪರಿಸ್ಥಿತಿ ಮುಂದುವರೆದರೇ ಸರಕಾರ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.

ಮೋದಿ ಹಾಗೂ ಅಮಿತ್ ಶಾ ಎಲ್ಲಾ ರಾಜ್ಯಗಳ ಚುನಾವಣೆಗಳಲ್ಲಿ ಮುಂದಾಳತ್ವ ವಹಿಸಿ ಪ್ರಾದೇಶಿಕ ಅಥವಾ ಸ್ಥಳೀಯ ಬಿಜೆಪಿ ನಾಯಕರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಅಲದೆ, ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರು ಅಧಿಕಾರದಲ್ಲಿ ಮಧ್ಯ ಪ್ರವೇಶಿಸಿ ಅವರಿಗೆ ಸಂಪೂರ್ಣ ಅಧಿಕಾರ ನೀಡದೆ ಕೇಂದ್ರ ಸರಕಾರ ಎಂದರೆ ಮೋದಿ ಎಂಬ ಚಿತ್ರಣ ಮೂಡುವಂತೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ವಾಧಿಕಾರಿ ಆಡಳಿತ ನಡೆಸಲು ಪ್ರಧಾನಿ ಮೋದಿ ತಯಾರಿ ನಡೆಸುತ್ತಿದ್ದಾರೆ ಎಂದರು.

ಚಿಂತಕ ಪ್ರೊ. ಜಿ.ಕೆ. ಗೋವಿಂದರಾವ್ ಮಾತನಾಡಿ, ರಾಜ್ಯ ಸಮ್ಮಿಶ್ರ ಸರಕಾರವು ಜನ ನಮಗೆ ಸಂಪೂರ್ಣ ಬಹುಮತ ನೀಡಿಲ್ಲ ಎಂಬ ಅಂಶವನ್ನು ಅರಿತು ವಿನಯದಿಂದ ಆಡಳಿತ ನಡೆಸಬೇಕು. ಜವಾಬ್ದಾರಿಯುತ ಆಡಳಿತ ಮಾಡಬೇಕು ಎಂಬ ವಿವೇಕ ಬೆಳೆಸಿಕೊಳ್ಳಬೇಕು. ಇನ್ನು ರಾಜಕಾರಣಿಗಳು ಖಾದಿ, ಜೋತಿಷ್ಯ ಹಾಗೂ ವಾಸ್ತುವನ್ನು ಧಿಕ್ಕರಿಸದ ಹೊರತು ಪ್ರಜಾಪ್ರಭುತ್ವದಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಚಿಂತಕ ಎ.ಕೆ.ಸುಬ್ಬಯ್ಯ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಕೈಗಾರಿಕಾ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಸ್ವಾಭಿಮಾನಿ ಕರ್ನಾಟಕ ವೇದಿಕೆ ಅಧ್ಯಕ್ಷ ದ್ವಾರನಕುಂಟೆ ಪಾತಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೋಮುಕಿಚ್ಚಿನಿಂದ ಬಳಲುತ್ತಿದ್ದ ಭಾರತ ದೇಶವನ್ನು ಅದರಿಂದ ಪಾರು ಮಾಡಿದವರು ಪಂಡಿತ್ ಜವಹಾರ್‌ಲಾಲ್ ನೆಹರು. ಆದರೆ, ಅವರ ಸಿದ್ಧಾಂತ ಇಂದಿನ ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲ. ಕಾಂಗ್ರೆಸ್‌ಗೆ ಅದರದ್ದೇ ಆದ ಒಂದು ಪ್ರತ್ಯೇಕ ಸಿದ್ಧಾಂತ ಇದೆ. ಗೌರಿ ಹತ್ಯೆ ಕುರಿತು ಎಷ್ಟು ಮಂದಿ ಕಾಂಗ್ರೆಸ್ ನಾಯಕರು ಧ್ವನಿ ಎತ್ತಿದ್ದಾರೆ.
-ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News