ಬೆಂಗಳೂರು : ಮಹಿಳಾ ಪೊಲೀಸ್ ಪೇದೆ ಎದೆಹಾಲುಣಿಸಿ ಬದುಕಿಸಿದ್ದ ಮಗು ಸಾವು

Update: 2018-06-17 15:26 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.17: ಎಲೆಕ್ಟ್ರಾನಿಕ್‌ಸಿಟಿ ಠಾಣೆಯ ಮಹಿಳಾ ಪೊಲೀಸ್ ಪೇದೆಯೊಬ್ಬರು ಎದೆ ಹಾಲುಣಿಸಿ ರಕ್ಷಿಸಿದ್ದ ಅನಾಥ ಗಂಡು ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.

ಜಯನಗರದ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ. ತಲೆಗೆ ಪೆಟ್ಟು ಹಾಗೂ ಕರುಳಬಳ್ಳಿ ಸೋಂಕು ಉಂಟಾಗಿದ್ದ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ.

ಹೊಸೂರು ರಸ್ತೆಯಲ್ಲಿರುವ ಶಿಶು ಮಂದಿರದ ಅಧೀನದಲ್ಲಿದ್ದ ಮಗುವಿನ ಸಾವಿನ ಕುರಿತು ಅಲ್ಲಿನ ಅಧಿಕಾರಿಗಳು ಎಲೆಕ್ಟ್ರಾನಿಕ್‌ಸಿಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ

ನಿರ್ಮಾಣ ಹಂತದ ಕಟ್ಟಡದ ಬಳಿ ಅನಾಥವಾಗಿ ಬಿದ್ದಿದ್ದ ಮಗುವನ್ನು ರಕ್ಷಿಸಿ ಎದೆ ಹಾಲುಣಿಸಿ ಆರೈಕೆ ಮಾಡಿದ್ದ ಪೇದೆ ಡಿ.ಎಸ್. ಅರ್ಚನಾ ಅವರಿಗೆ ಪರಿಶೀಲನೆ ನಡೆಸುವಂತೆ ಕೋರಲಾಗಿತ್ತು.

ಅದರಂತೆ ಅವರು ಆಸ್ಪತ್ರೆಗೆ ತೆರಳಿ ಪರಿಶೀಲಿಸಿದಾಗ ಮಗು ಮೃತಪಟ್ಟಿರುವುದು ಗೊತ್ತಾಯಿತು. ಈ ವಿಷಯ ಹೇಳುತ್ತಿದ್ದ ವೇಳೆ ಪೇದೆ ಅರ್ಚನಾ ಅವರು ಕಣ್ಣೀರಿಟ್ಟರು. ಮಗುವಿನ ಸಾವಿನಿಂದ ಪೇದೆ ದುಃಖಿತರಾಗಿದ್ದಾರೆ. ಶಿಶು ಮಂದಿರದ ವಶಕ್ಕೆ ಮಗುವನ್ನು ನೀಡಿದ ಬಳಿಕ, ಮಗುವಿಗೆ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಿದೆ. ಹೀಗಾಗಿ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ಸೇರಿಸಿರುವುದಾಗಿ ಅಲ್ಲಿನ ಸಿಬ್ಬಂದಿ ತಿಳಿಸಿದ್ದರು. ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ ಎಂಬ ಮಾಹಿತಿ ಬಂತು ಎಂದು ಪೊಲೀಸರು ತಿಳಿಸಿದ್ದಾರೆ

ಜೂ.1ರಂದು ನಿರ್ಮಾಣ ಹಂತದ ಕಟ್ಟಡದ ಬಳಿ ಸಿಕ್ಕ ಅನಾಥ ಮಗುವನ್ನು ರಕ್ಷಿಸಿದ್ದ ಐದು ತಿಂಗಳ ಮಗುವಿನ ತಾಯಿ ಆಗಿರುವ ಪೇದೆ ಅರ್ಚನಾ ಅವರಿಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಪೊಲೀಸ್ ಆಯುಕ್ತರು ಸೇರಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಮಗುವನ್ನು ರಕ್ಷಿಸಿದ ಪೇದೆ, ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಮಗುವನ್ನು ಅನಾಥವಾಗಿ ಬಿಟ್ಟು ಹೋಗಿರುವ ಅಪರಿಚಿತ ಪಾಲಕರ ವಿರುದ್ಧ ಎಲೆಕ್ಟ್ರಾನಿಕ್‌ಸಿಟಿ ಠಾಣೆ ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News