ತಾಲಿಬಾನ್ ಬಂಡುಕೋರರ ಮೇಲೆ ಆತ್ಮಹತ್ಯಾ ದಾಳಿ: ಕನಿಷ್ಠ 36 ಬಲಿ, 65 ಮಂದಿಗೆ ಗಾಯ

Update: 2018-06-17 17:37 GMT

ಕಾಬೂಲ್,ಜೂ.17: ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತದಲ್ಲಿ ಕದನವಿರಾಮದ ಮಧ್ಯೆ ಈದುಲ್‌ಫಿತ್ರ್ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ತಾಲಿಬಾನ್ ಬಂಡುಕೋರರ ಮೇಲೆ ಶನಿವಾರ ನಡೆದ ಆತ್ಮಹತ್ಯಾ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 36ಕ್ಕೇರಿದೆ.

   ಶನಿವಾರ ಅಫ್ಘಾನಿಸ್ತಾನದ ಪೂರ್ವ ನಂಗರ್‌ಹಾರ್ ಪ್ರಾಂತದಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಇತರ 65 ಮಂದಿ ಗಾಯಗೊಂಡಿದ್ದಾರೆಂದು ಆರೋಗ್ಯ ಇಲಾಖೆಯ ನಿರ್ದೇಶಕ ನಜೀಬುಲ್ಲಾ ಕಮಾವಲ್ ತಿಳಿಸಿದ್ದಾರೆ.

ಈದುಲ್ ಫಿತ್ರ್ ಹಬ್ಬದ ಹಿನ್ನೆಲೆಯಲ್ಲಿ ಏರ್ಪಟ್ಟ ಮೂರು ದಿನಗಳ ಕದನವಿರಾಮದ ಮಧ್ಯೆ ಹಬ್ಬದ ಸಡಗರದಲ್ಲಿ ನಿರತರಾಗಿದ್ದ ತಾಲಿಬಾನ್ ಬಂಡುಕೋರರ ಗುಂಪನ್ನು ಗುರಿಯಾಗಿಸಿಕೊಂಡು ಆತ್ಮಹತ್ಯಾ ಬಾಂಬರ್, ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆಂದು ಅಧಿಕೃತ ಮೂಲಗಳು ತಿಳಿಸಿವೆ.

   ಈ ದಾಳಿಯ ಹೊಣೆಯನ್ನು ತಕ್ಷಣವೇ ಯಾರೂ ವಹಿಸಿಕೊಂಡಿಲ್ಲವಾದರೂ, ಕದನವಿರಾಮ ಮಾತುಕತೆಯಲ್ಲಿ ಸೇರ್ಪಡೆಗೊಂಡಿರದ ಐಸಿಸ್ ಭಯೋತ್ಪಾದಕರ ಕೈವಾಡವಿರುವ ಸಾಧ್ಯತೆಯಿದೆಯೆನ್ನಲಾಗಿದೆ. ಈ ದಾಳಿ ಘಟನೆಯ ಬಳಿಕ ಅಫ್ಘಾನ್ ಅಧ್ಯ್ಷಕ್ಷ ಅಶ್ರಫ್ ಘನಿ ಅವರು ತಾಲಿಬಾನ್ ಬಂಡುಕೋರರ ಜೊತೆ 9 ದಿನಗಳ ಕದನವಿರಾಮ ಘೋಷಿಸಿದ್ದರು.

 ಈ ಮಧ್ಯೆ ಅಫ್ಘಾನಿಸ್ತಾನದಲ್ಲಿ 17 ವರ್ಷಗಳ ಅಂತರ್ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಬಂಡುಕೋರರ ಜೊತೆ ಸಂಧಾನ ನಡೆಸಲು ಸರಕಾರದಿಂದ ನಿಯೋಜಿಸಲ್ಪಟ್ಟಿರುವ ಉನ್ನತ ಶಾಂತಿ ಮಂಡಳಿಯು ಹೇಳಿಕೆಯೊಂದನ್ನು ನೀಡಿ, ತಾಲಿಬಾನ್ ಬಂಡುಕೋರರು ಕದನವಿರಾಮಕ್ಕೆ ಸಮ್ಮತಿಸಬೇಕು ಹಾಗೂ ಶಾಂತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News