ಬೆಂಗಳೂರು: ವೈಟ್ ಟಾಪಿಂಗ್ ಕಾಮಗಾರಿ ಸ್ಥಗಿತ

Update: 2018-06-17 18:11 GMT

ಬೆಂಗಳೂರು, ಜೂ.17: ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಕೈಗೆತ್ತಿಕೊಂಡಿದ್ದ ‘ವೈಟ್ ಟಾಪಿಂಗ್’ ಕಾಮಗಾರಿಯಿಂದ ಸಂಚಾರ ದಟ್ಟಣೆ ಹೆಚ್ಚುತ್ತಿರುವ ಕಾರಣ ನೀಡಿ, ಕಾಮಗಾರಿ ಮುಂದುವರಿಸಲು ಸಂಚಾರ ಪೊಲೀಸ್ ಇಲಾಖೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡು ವಾಹನ ಸವಾರರು ಪರದಾಡುವಂತಾಗಿದೆ.

ರಸ್ತೆ ಗುಂಡಿಗಳ ಶಾಶ್ವತ ಪರಿಹಾರಕ್ಕೆ ಬಿಬಿಎಂಪಿ ಕೈಗೆತ್ತಿಕೊಂಡಿದ್ದ ವೈಟ್‌ಟಾಪಿಂಗ್ ಕಾಮಗಾರಿಯನ್ನು ಬಿಬಿಎಂಪಿ ಏಕಕಾಲಕ್ಕೆ ಕೈಗೆತ್ತಿಕೊಂಡ ಕಾರಣ ನಗರಾದ್ಯಂತ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ವಿಧಾನಸಭಾ ಚುನಾವಣೆಯ ಹಿನ್ನೆಲೆ ಚುನಾವಣೆಗೆ ಯಾವುದೇ ಸಮಸ್ಯೆಗಳು ಉದ್ಬವವಾಗಬಾರದೆಂಬ ದೃಷ್ಟಿಯಿಂದ ತಾತ್ಕಾಲಿಕವಾಗಿ ಕಾಮಗಾರಿಯನ್ನು ಸ್ಥಗಿತಗೊಳಿಸಲು ಪೊಲೀಸ್ ಇಲಾಖೆ ಪಾಲಿಕೆಗೆ ಸೂಚಿಸಿತ್ತು.

ಚುನಾವಣೆ ಮುಗಿದ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ಸಂಚಾರ ದಟ್ಟಣೆಯಾಗದಂತೆ ಹಂತ ಹಂತವಾಗಿ ಕಾಮಾರಿ ಮುಂದುವರಿಸಲು ನಿರ್ಧರಿಸಿದ್ದಾರೆ.

ಆದರೆ, ವೈಟ್ ಟಾಪಿಂಗ್ ಕಾಮಗಾರಿ ನಡೆಸಲು ಮುಂದಾದರೆ ತೀವ್ರ ಸಂಚಾರ ದಟ್ಟಣೆಯಾಗುತ್ತದೆ ಎಂಬ ಕಾರಣದಿಂದ ಸಂಚಾರ ಪೊಲೀಸರು ಅನುಮತಿ ನೀಡದೇ ಇರುವುದರಿಂದ ಕಾಮಗಾರಿ ಎಲ್ಲೆಡೆ ಸ್ಥಗಿತವಾಗಿದೆ.

ಸುಗಮ ಸಂಚಾರಕ್ಕೆ ಅಡ್ಡಿ: ವೈಟ್ ಟಾಪಿಂಗ್ ಕಾಮಗಾರಿ ನಡೆಸಲು ಮುಂದಾದರೆ, ಪರ್ಯಾಯ ಮಾರ್ಗವಾಗಿ ರಸ್ತೆಗಳಿಲ್ಲದ ಕಾರಣ ಹೆಚ್ಚು ಸಂಚಾರ ದಟ್ಟಣೆಯಾಗುತ್ತಿದೆ. ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗವಿಲ್ಲದೆ ಸಾರ್ವಜನಿಕರು ತೀವ್ರ ಸಮಸ್ಯೆ ಅನುಭವಿಸಬೇಕಾದಂತ ಪರಿಸ್ಥಿತಿ ಎದುರಾಗಿದೆ.
ಹೀಗಾಗಿ, ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಅರ್ಧಕ್ಕೆ ಸ್ಥಗಿತಗೊಂಡಿರುವ ಕಾಮಗಾರಿ: ವಾಣಿ ವಿಲಾಸ್ ರಸ್ತೆ, ಹಳೇ ಕನಕಪುರ ರಸ್ತೆ, ಆರ್ಮುಗಂ ಮೊದಲಿಯಾರ್ ವೃತ್ತ ಹಾಗೂ ಕೃಷ್ಣಾರಾವ್ ಉದ್ಯಾನ ವೃತ್ತದ ಹಿಂಭಾಗದ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಅರ್ಧಕ್ಕೆ ನಿಂತಿರುವ ಕಾರಣ ಸಂಾರ ದಟ್ಟಣೆ ಹೆಚ್ಚಾಗಿದೆ.
ಎರಡೂವರೆ ತಿಂಗಳಿಂದ ಕಾಮಗಾರಿ ಸ್ಥಗಿತವಾಗಿದೆ. ಅಲ್ಲಿ ಪರ್ಯಾಯ ರಸ್ತೆಗಳು ಬೇರೆ ಸರಿಯಾಗಿಲ್ಲ ಇದರಿಂದ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಬಿಗಡಾಯಿಸಿದೆ.

972.79 ಕೋಟಿ ರೂ. ವೆಚ್ಚದ ಕಾಮಗಾರಿ: ನಗರದ ಹೊರವರ್ತುಲ ರಸ್ತೆ ಸೇರಿದಂತೆ ಒಟ್ಟು 29 ರಸ್ತೆಗಳನ್ನು ಬಿಬಿಎಂಪಿಯು ವೈಟ್‌ಟಾಪಿಂಗ್ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ.

ಅದಕ್ಕಾಗಿ 972.79 ಕೋಟಿ ರೂ. ವೆಚ್ಚದಲ್ಲಿ 93.47 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಎಸಿಸಿ ಮತ್ತು ಮಧುಕಾನ್ ಎಂಬ ಎಡು ಕಂಪೆನಿಗಳಿಗೆ ಗುತ್ತಿಗೆ ನೀಡಿದೆ.
ಈಗಾಗಲೇ, ನಾಗವಾರ ಹೊರವರ್ತುಲ ರಸ್ತೆ, ವಿಜಯನಗರ, ಹೊಸೂರು ರಸ್ತೆ, ಕೋರಮಂಗಲ, ಮೈಸೂರು ರಸ್ತೆ ಸೇರಿದಂತೆ ಮೊದಲ ಹಂತದ 9.5 ಕಿ.ಮೀ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನುಳಿದಂತೆ, ಐದು ಮಾರ್ಗಗಳ 39.80 ಕಿ.ಮೀ ಉದ್ದ  ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಜ್ಞಾನಭಾರತಿಯಿಂದ ಸುಮನಹಳ್ಳಿ ಜಂಕ್ಷನ್ ಹಾಗೂ ತುಮಕೂರು ರಸ್ತೆಯಿಂದ ಹಳೆ ಮದ್ರಾಸ್ ರಸ್ತೆಯ 22.20 ಕಿ.ಮೀ ಮಾರ್ಗದ ಪೈಕಿ 2.9 ಕಿ.ಮೀ ವೈಟ್‌ಟಾಪಿಂಗ್ ಪೂರ್ಣಗೊಂಡಿದೆ. 9.5 ಕಿ.ಮೀ ಉದ್ದದ ವೈಟ್‌ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News