ಪ್ರಶ್ನಿಸುವವರನ್ನು ಸಮಾಜ ಸಹಿಸಲ್ಲ: ಡಾ.ಜಿ.ರಾಮಕೃಷ್ಣ

Update: 2018-06-17 18:54 GMT

ಬೆಂಗಳೂರು, ಜೂ.17: ಸಮಾಜದಲ್ಲಿ ಪ್ರಶ್ನೆ ಮಾಡುವವರನ್ನು ನೋಡಿದರೆ ಹಲವರು ಸಹಿಸಲ್ಲ. ಅವರ ವಿರುದ್ಧವೇ ತಿರುಗಿ ಬೀಳುವಷ್ಟು ಕೆಟ್ಟ ಸಮಾಜದಲ್ಲಿ ನಾವಿದ್ದೇವೆ ಎಂದು ಹಿರಿಯ ಸಾಹಿತಿ ಡಾ.ಜಿ.ರಾಮಕೃಷ್ಣ ವಿಷಾದ ವ್ಯಕ್ತಪಡಿಸಿದರು.

ರವಿವಾರ ನಗರದ ಜ್ಯೋತಿ ಬಸು ಭವನದಲ್ಲಿ ಆಯೋಜಿಸಿದ್ದ ನವಕರ್ನಾಟಕ ಪ್ರಕಾಶನದ ಡಾ.ಜಿ.ರಾಮಕೃಷ್ಣ ಅವರ ‘ಭಗವದ್ಗೀತೆ: ಒಂದು ಅವಲೋಕನ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಗವದ್ಗೀತೆಯಲ್ಲಿ ಮೌಲಿಕ ವಿಚಾರಗಳನ್ನು ಹಾಗೂ ಕೆಟ್ಟ ವಿಚಾರಗಳನ್ನು ಎರಡನ್ನೂ ಪ್ರಸ್ತಾಪ ಮಾಡಲಾಗಿದೆ. ಇದನ್ನು ಅಧ್ಯಯನ ಮಾಡಿದ ಪ್ರತಿಯೊಬ್ಬರೂ ಸಹಜವಾಗಿ ಪ್ರಶ್ನೆ ಮಾಡುತ್ತಾರೆ. ಯಾರು ಓದುವುದಿಲ್ಲವೋ ಅವರು ಮಾತ್ರ ಅದನ್ನು ಭಗವದ್ಗೀತೆ ಸರಿಯಿದೆ ಎಂದು ಒಪ್ಪಿಕೊಳ್ಳುತ್ತಾರೆ ಎಂದ ಅವರು, ಸಮಾಜದಲ್ಲಿ ಪ್ರಶ್ನೆ ಮಾಡುವವರನ್ನು ನೋಡಿದರೆ ಹಲವರು ಸಹಿಸಲ್ಲ. ಅವರ ವಿರುದ್ಧವೇ ತಿರುಗಿ ಬೀಳುವಷ್ಟು ಕೆಟ್ಟ ಸಮಾಜದಲ್ಲಿ ನಾವಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಯಾವುದಾದರೂ ಒಂದು ವಿಷಯವನ್ನು ಪ್ರತಿಪಾದನೆ ಮಾಡಿ, ಜನರ ಮನಸ್ಸಿನಲ್ಲಿ ನಾಟುವಂತೆ ಮಾಡುವ ಚಮತ್ಕಾರಿ ಗ್ರಂಥವೇ ಭಗವದ್ಗೀತೆ ಎಂದರು.
ಲೇಖಕ ಸುಭಾಷ್ ರಾಜಮಾನೆ ಮಾತನಾಡಿ, ಭಗವದ್ಗೀತೆಯನ್ನು ನೋಡಲು ಒಂದು ದಾರಿಯಿಲ್ಲ. ಹಲವು ದೃಷ್ಟಿಕೋನ, ಅಧ್ಯಯನಕ್ರಮಗಳಿವೆ. ಅಲ್ಲದೆ, ಭಗವದ್ಗೀತೆ ಮೂಲಭೂತವಾಗಿ ಧಾರ್ಮಿಕ ಗ್ರಂಥವಲ್ಲ ಹಾಗೂ ಅದಕ್ಕೆ ಯಾರೋ ಒಬ್ಬರು ಸ್ಥಾಪಕರಿಲ್ಲ. ಹೀಗಾಗಿ, ಗೀತೆಯನ್ನು ಯಾವ ರೀತಿ ಆಚರಣೆ ಮಾಡಬೇಕು ಅಥವಾ ಅನುಕರಣೆ ಮಾಡಬೇಕು ಎಂಬ ಸ್ಪಷ್ಟತೆಯಿಲ್ಲ. ಆದುದರಿಂದ ಇದನ್ನು ಧರ್ಮಗ್ರಂಥ ಎನ್ನಲು ಅಸಾಧ್ಯ ಎಂದು ಹೇಳಿದರು.

ಸಮಾಜದಲ್ಲಿ ವರ್ಣ ವ್ಯವಸ್ಥೆಯು ವ್ಯಾಪಕವಾಗಿ ಹರಡಿಕೊಂಡಿದ್ದ ಸಂದರ್ಭದಲ್ಲಿ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಸಲುವಾಗಿ ಮೇಲ್ವರ್ಗದ ಜನರು ಗೀತೆಯ ಮೂಲಕ ಜನರಿಗೆ ಪರೋಕ್ಷವಾಗಿ ನೀಡಬೇಕಾದ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಅದರ ಹೊರತು ಇದಕ್ಕೆ ಯಾವುದೇ ಚಾರಿತ್ರಿಕ ಹಿನ್ನೆಲೆಯಿಲ್ಲ. ಭಗವದ್ಗೀತೆಯ ಅಂತ್ಯ ಅತ್ಯಂತ ವಿಷಾದನೀಯವಾಗಿದೆ ಎಂದು ಅವರು ತಿಳಿಸಿದರು.

ಕನ್ನಡದಲ್ಲಿ ಭಗವದ್ಗೀತೆಯನ್ನು ರಚಿಸುವ ಸಂದರ್ಭದಲ್ಲಿ ನೈಜ ಕೃತಿಯಲ್ಲಿರುವ ಸಾಮಾಜಿಕ ವ್ಯವಸ್ಥೆಯನ್ನು ಹಾಗೂ ವರ್ಣ ವ್ಯವಸ್ಥೆಯನ್ನು ಮರೆ ಮಾಚಿದ್ದಾರೆ. ಅಲ್ಲದೆ, ನಮ್ಮ ದೇಶದ ಇತಿಹಾಸ ಮತ್ತು ಪರಂಪರೆಯನ್ನು ಸಂಪೂರ್ಣವಾಗಿ ತಿಳಿಸಿಕೊಟ್ಟಿಲ್ಲ. ಅದರ ಪರಿಣಾಮದಿಂದಾಗಿ ಭಾರತೀಯ ಪರಂಪರೆ ಎಂದರೆ ವೇದಗಳ ಕಾಲಕ್ಕೆ ಹೋಗುತ್ತಾರೆ. ಆದರೆ, ನಮ್ಮ ದೇಶದಲ್ಲಿನ ಹರಪ್ಪನ ನಾಗರಿಕತೆ ಸೇರಿದಂತೆ ಇನ್ನಿತರೆ ಪರಂಪರೆಯನ್ನು ಎಲ್ಲಿಯೂ ಹೇಳುತ್ತಿಲ್ಲ ಎಂದು ಅವರು ಹೇಳಿದರು.

ಇಲ್ಲಿಯವರೆಗೂ ಭಗವದ್ಗೀತೆ ಕುರಿತು ನೂರಾರು ವಿದ್ವಾಂಸರು ವ್ಯಾಖ್ಯಾನಗಳನ್ನು ನೀಡಿದ್ದಾರೆ. ಆದರೆ, ಜಿ.ರಾಮಕೃಷ್ಣ ಅವರು ಈ ಕೃತಿಯಲ್ಲಿ ಅವುಗಳನ್ನು ವಿಮರ್ಶಿಸದೇ, ಭಿನ್ನವಾದ ಚಾರಿತ್ರಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಅದರ ಪ್ರಾಮುಖ್ಯತೆ ಏನು ಎಂಬುದನ್ನು ತಿಳಿಸಿದ್ದಾರೆ. ಗೀತೆ ಹುಟ್ಟಿಕೊಂಡ ಕಾಲದ ಚಾರಿತ್ರಿಕ ಸಂದರ್ಭ ಮತ್ತು ಒಲವು-ನಿಲುವುಗಳನ್ನು ಗೌಣವಾಗಿಸಕೂಡದು ಮತ್ತು ಅವುಗಳಿಂದ ಪ್ರತ್ಯೇಕಿಸಿ ನೋಡಬಾರದು ಎಂಬ ಸಂದೇಶವನ್ನು ಈ ಕೃತಿಯಲ್ಲಿ ಸಾಧ್ಯವಾದಷ್ಟು ಕಟ್ಟಿಕೊಟ್ಟಿದ್ದಾರೆ ಎಂದು ಅವರು ವಿಮರ್ಶಿಸಿದರು.

ಕಾರ್ಯಕ್ರಮದಲ್ಲಿ ನ್ಯಾಷನಲ್ ಕಾಲೇಜಿನ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಡಾ.ಎಚ್.ವಿ.ವೇಣುಗೋಪಾಲ್, ನವಕರ್ನಾಟಕ ಪ್ರಕಾಶನದ ಡಾ.ಸಿದ್ಧನಗೌಡ ಪಾಟೀಲ್, ಸಿ.ಆರ್.ಕೃಷ್ಣರಾವ್ ಉಪಸ್ಥಿತರಿದ್ದರು.

ಗೀತೆ ಧರ್ಮಗ್ರಂಥವಲ್ಲ
 ಭಗವದ್ಗೀತೆ ಮೂಲಭೂತವಾಗಿ ಧಾರ್ಮಿಕ ಗ್ರಂಥವಲ್ಲ ಹಾಗೂ ಅದಕ್ಕೆ ಯಾರೋ ಒಬ್ಬರು ಸ್ಥಾಪಕರಿಲ್ಲ. ಹೀಗಾಗಿ, ಗೀತೆಯನ್ನು ಯಾವ ರೀತಿ ಆಚರಣೆ ಮಾಡಬೇಕು ಅಥವಾ ಅನುಕರಣೆ ಮಾಡಬೇಕು ಎಂಬ ಸ್ಪಷ್ಟತೆಯಿಲ್ಲ. ಆದುದರಿಂದ ಇದನ್ನು ಧರ್ಮಗ್ರಂಥ ಎನ್ನಲು ಅಸಾಧ್ಯ.
-ಸುಭಾಷ್ ರಾಜಮಾನೆ, ಲೇಖಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News