108ಗೆ 400 ನೂತನ ಆ್ಯಂಬುಲೆನ್ಸ್‌ಗಳ ಸೇರ್ಪಡೆಗೆ ಚಿಂತನೆ

Update: 2018-06-17 19:01 GMT

ಬೆಂಗಳೂರು, ಜೂ.17: ರಾಜ್ಯದ ಜನತೆಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸದಾಗಿ 400 ಹೊಸ 108 ಆ್ಯಂಬುಲೆನ್ಸ್ ಸೇವೆಯನ್ನು ಸದ್ಯದಲ್ಲಿಯೇ ಆರಂಭಿಸಲು ಚಿಂತನೆ ನಡೆಸಿದೆ.

ಹಾವೇರಿಯಲ್ಲಿ ಇತ್ತೀಚೆಗೆ ರೋಗಿಯೊಬ್ಬರಿಂದ ಆ್ಯಂಬುಲೆನ್ಸ್ ಚಾಲಕ ಲಂಚ ನೀಡುವಂತೆ ಒತ್ತಾಯಿಸಿದ್ದರು ಎಂದು ದಾಖಲಿಸಲಾಗಿದ್ದ ಸ್ವಯಂ ಪ್ರೇರಿತ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್‌ಶೆಟ್ಟಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಶ್ರೀನಿವಾಸಗೌಡ ನೀಡಿರುವ ಹೇಳಿಕೆಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿರುವ ಶ್ರೀನಿವಾಸಗೌಡ ಸರಕಾರದ ಹೊಸ ಆ್ಯಂಬುಲೆನ್ಸ್ ಸೇವೆ ಆರಂಭದ ಕುರಿತು ತಿಳಿಸಿದ್ದಾರೆ. ಪೂರ್ತಿ ಉಚಿತ ಆ್ಯಂಬುಲೆನ್ಸ್ ಸೇವೆ ದೊರಕಲು 26ರಿಂದ 30 ಕಿ.ಮೀ. ವ್ಯಾಪ್ತಿಯೊಳಗೆ ಸಾರ್ವಜನಿಕರಿಗೆ ಆರೋಗ್ಯ ಸೇವೆ ದೊರಕುವಂತೆ ಮಾಡಲು 108 ಆ್ಯಂಬುಲೆನ್ಸ್ ಸೇವೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈಗಾಗಲೇ ಇಲಾಖೆಯಡಿ 780 ಆ್ಯಂಬುಲೆನ್ಸ್‌ಗಳಿದ್ದು ಇನ್ನೂ 400 ವಾಹನಗಳನ್ನು ಅತ್ಯಾಧುನಿಕ ಸೌಕರ್ಯಗಳನ್ನು ಕಲ್ಪಿಸಿ ರಸ್ತೆಗೆ ಇಳಿಸಲಾಗುವುದು. ರೋಗಿಗಳಿಗೆ ತುರ್ತಾಗಿ ಬೇಕಾಗಿರುವ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಲಾಗುವುದು. ಇನ್ನು ಮೂರು ತಿಂಗಳೊಳಗೆ ಈ ಆ್ಯಂಬುಲೆನ್ಸ್ ಸೇವೆ ಆರಂಭವಾಗಲಿದೆ. 108 ಆ್ಯಂಬುಲೆನ್ಸ್ ಅಷ್ಟೇ ಅಲ್ಲದೆ, 176 ನಗು-ಮಗು ಆ್ಯಂಬುಲೆನ್ಸ್ ಸೇವೆಯೂ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಸಾಮಾನ್ಯ ಆ್ಯಂಬುಲೆನ್ಸ್ ಸೇವೆಗಳಲ್ಲಿ 759 ಆ್ಯಂಬುಲೆನ್ಸ್‌ಗಳು ಕೆಲವು ಪ್ರಮುಖ ಆಸ್ಪತ್ರೆಗಳಲ್ಲಿ, ತಾಲ್ಲೂಕು ಆಸ್ಪತ್ರೆಗಳಲ್ಲಿ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಿಗಲಿವೆ. ಇವುಗಳಲ್ಲಿ ಎಪಿಎಲ್ ಕಾರ್ಡು ಹೊಂದಿರುವವರಿಗೂ ಪ್ರತಿ ಕಿ.ಮೀ.ಗೆ 3 ರೂ.ಗಳಂತೆ ರಿಯಾಯಿತಿ ದರದಲ್ಲಿ ಮತ್ತು ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಉಚಿತವಾಗಿ ನೀಡಲಾಗುತ್ತದೆ. ಎಲ್ಲಾ 3 ವಿಧದ ಆ್ಯಂಬುಲೆನ್ಸ್‌ಗಳನ್ನು ಸೇರಿಸುವ ಬಗ್ಗೆ ಪ್ರಸ್ತಾವನೆಯಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News