ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಂಗವಿಕಲರಿಗೆ ಅನ್ಯಾಯ : ಮಾಹಿತಿ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2018-06-17 19:03 GMT

ಬೆಂಗಳೂರು, ಜೂ.17: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ನಡೆಸುತ್ತಿರುವ ಸಿ ಮತ್ತು ಡಿ ದರ್ಜೆ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಎಲ್ಲ ವಿಧದ ಅಂಗವಿಕಲರಿಗೆ ನಿಯಮದ ಪ್ರಕಾರ ಮೀಸಲು ಕಲ್ಪಿಸಿಲ್ಲ ಎಂದು ಆಕ್ಷೇಪಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ಈ ಕುರಿತಂತೆ ಮೈಸೂರಿನ ಅಂಗವಿಕಲರ ಅಭ್ಯುದಯ ಸೇವಾ ಸಂಸ್ಥೆ ಅಧ್ಯಕ್ಷರು ಸಲ್ಲಿಸಿರುವ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ಜ್ಯೋತಿ ಬಿ. ಕಣಗಾಂವಕರ್ ವಾದ ಮಂಡಿಸಿ, ಸಿ ಮತ್ತು ಡಿ ದರ್ಜೆಯ 1,543 ಹುದ್ದೆಗಳಿಗೆ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಆದರೆ, ಅಂಗವಿಕಲರ ನಿಯಮ - 1995ರ ಅನುಸಾರ ಶೇ.5ರಷ್ಟು (124 ಹುದ್ದೆಗಳು) ಮೀಸಲು ಇಟ್ಟಿಲ್ಲ ಎಂದು ಆಕ್ಷೇಪಿಸಿದರು.

ಕಿವುಡರು, ಮೂಗರು, ಅಂಧರು ಸೇರಿ ಎಲ್ಲ ಬಗೆಯ ಅಂಗವಿಕಲರಿಗೂ ಸಮಾನ ಅವಕಾಶ ಕಲ್ಪಿಸಬೇಕು. ಆದರೆ, 124 ಹುದ್ದೆಗಳ ಪೈಕಿ 80 ಹುದ್ದೆಗಳನ್ನು ಅಂಧರಿಗೆ ಮಾತ್ರ ಮೀಸಲಿರಿಸಲಾಗಿದೆ. ಇದರಿಂದ ಇನ್ನುಳಿದ ಅಂಗವಿಕಲರಿಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಲು ಸರಕಾರ ಹಾಗೂ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರಿಗೆ ಸಂವಿಧಾನ ಬದ್ಧವಾಗಿ ಒದಗಿಸಬೇಕಿರುವ ಮೀಸಲು ಒದಗಿಸಲಾಗಿದೆಯೇ, ಇಲ್ಲವೇ ಎಂಬ ಬಗ್ಗೆ ಸರಕಾರ ಹಾಗೂ ಕೆಪಿಎಸ್‌ಸಿಯಿಂದ ಮಾಹಿತಿ ಪಡೆದು ಸಲ್ಲಿಸಿ ಎಂದು ಸರಕಾರಿ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಜೂ.27ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News