''ಕರ್ನಾಟಕದಲ್ಲಿ ಯಾವುದಾದರೂ ನಾಯಿ ಸತ್ತರೆ ಮೋದಿ ಏಕೆ ಪ್ರತಿಕ್ರಿಯಿಸಬೇಕು?''

Update: 2018-06-18 08:22 GMT

ಬೆಂಗಳೂರು, ಜೂ.18: ಕಳೆದ ವರ್ಷ ಹತ್ಯೆಗೀಡಾದ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ನಾಯಿಗೆ ಹೋಲಿಸಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಕ್ಕೀಡಾಗಿದ್ದಾರೆ. ಗೌರಿ ಹತ್ಯೆ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೌನ ಮುರಿಯಬೇಕೆಂಬ ಬೇಡಿಕೆಯಿಟ್ಟಿರುವವರ ವಿರುದ್ಧ ಹರಿಹಾಯ್ದ ಮುತಾಲಿಕ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

‘‘ಗೌರಿ ಲಂಕೇಶ್ ಹತ್ಯೆ ನಂತರ ಪ್ರಧಾನಿ ಮೋದಿ ಪ್ರತಿಕ್ರಿಯಿಸಬೇಕೆಂದು ಹಲವರು ಬಯಸಿದ್ದರು. ಕರ್ನಾಟಕದಲ್ಲಿ ಯಾವುದಾದರೂ ನಾಯಿ ಸತ್ತರೆ ಮೋದಿ ಏಕೆ ಪ್ರತಿಕ್ರಿಯಿಸಬೇಕು?’’ ಎಂದು ಮುತಾಲಿಕ್ ಸಭೆಯೊಂದರಲ್ಲಿ ‘ಜೈ ಶ್ರೀ ರಾಮ್’ ಎಂಬ ಘೊಷಣೆಗಳ ನಡುವೆ ಹೇಳುತ್ತಿರುವ ವೀಡಿಯೋ ಒಂದು ಹರಿದಾಡುತ್ತಿದೆ.

ಮುತಾಲಿಕ್ ತಮ್ಮ ಹೇಳಿಕೆಯನ್ನು ಸಮರ್ಥಿಸಿ, ತಾನು ಗೌರಿ ಲಂಕೇಶ್ ಅವರನ್ನು ನೇರವಾಗಿ ನಾಯಿಯೊಂದಿಗೆ ಹೋಲಿಸಿಲ್ಲ, ಹಾಗೂ ಕರ್ನಾಟಕದಲ್ಲಾಗುವ ಪ್ರತಿಯೊಂದು ಸಾವಿಗೂ ಪ್ರಧಾನಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದಷ್ಟೇ ಹೇಳಲು ಪ್ರಯತ್ನಿಸಿದ್ದೆ’’ ಎಂದಿದ್ದಾರೆ.

ಮುತಾಲಿಕ್ ಹೇಳಿಕೆಯನ್ನು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ತೀವ್ರವಾಗಿ ಖಂಡಿಸಿದ್ದಾರೆ. ಮುತಾಲಿಕ್ ಹೇಳಿಕೆ ಅಸಂಬದ್ಧ ಎಂದು ಟ್ವೀಟ್ ಮಾಡಿದ ತಿವಾರಿ, ‘‘ಪ್ರಧಾನಿ ನರೇಂದ್ರ ಮೋದಿಯವರು ಗೌರಿ ಹತ್ಯೆಯನ್ನು ಖಂಡಿಸಿಲ್ಲ, ಈಗ ಅವರು ಮುತಾಲಿಕ್ ಹೇಳಿಕೆಯನ್ನೂ ಕ್ಷಮಿಸಿ ಬಿಡುತ್ತಾರೆ’’ ಎಂದಿದ್ದಾರೆ.

ಗೌರಿ ಹತ್ಯೆಗೆ ಸಂಬಂಧಿಸಿದಂತೆ ಶ್ರೀ ರಾಮ ಸೇನೆಯ ವಿಜಯಪುರ ಜಿಲ್ಲಾ ಅಧ್ಯಕ್ಷ ರಾಕೇಶ್ ಮಠ್ ಎಂಬಾತನನ್ನು ವಿಶೇಷ ತನಿಖಾ ತಂಡ ಇತ್ತೀಚೆಗೆ ವಿಚಾರಣೆ ನಡೆಸಿತ್ತು. ಹತ್ಯೆಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಪರಶುರಾಮ್ ವಾಗ್ಮೋರೆ ಜತೆಗೆ ಮುತಾಲಿಕ್ ಇರುವ ಚಿತ್ರವೂ ಹರಿದಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News