ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಇಲ್ಲ: ಅರುಣ್ ಜೇಟ್ಲಿ

Update: 2018-06-18 15:04 GMT

ಹೊಸದಿಲ್ಲಿ, ಜೂ.18: ಆದಾಯ ಮೂಲವಾಗಿ ತೈಲವನ್ನೇ ಅವಲಂಬಿಸುವುದನ್ನು ತಪ್ಪಿಸಲು ತೆರಿಗೆಯನ್ನು ಪ್ರಾಮಾಣಿಕವಾಗಿ ಪಾವತಿಸಬೇಕು ಎಂದು ಜನತೆಗೆ ಕರೆ ನೀಡಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.

 ವೇತನ ಪಡೆಯುವವರು ತಮ್ಮ ಪಾಲಿನ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಆದರೆ ಬಹುತೇಕ ಇತರ ವರ್ಗದವರು ತಮ್ಮ ತೆರಿಗೆ ಪಾವತಿ ದಾಖಲೆಯನ್ನು ಉತ್ತಮಗೊಳಿಸಿದಲ್ಲಿ ದೇಶದಲ್ಲಿ ತೆರಿಗೆಗೆ ಸಂಬಂಧಿಸಿದ ದೂರುಗಳು ಕಡಿಮೆಯಾಗಬಹುದು. ಆದ್ದರಿಂದ ತೈಲೇತರ ಕ್ಷೇತ್ರದಲ್ಲಿ ತೆರಿಗೆ ತಪ್ಪಿಸುವಿಕೆಯ ಪ್ರಕ್ರಿಯೆಯನ್ನು ತಡೆಯುವಂತೆ ರಾಜಕೀಯ ಮುಖಂಡರಿಗೆ ಹಾಗೂ ಪ್ರಭಾವೀ ವ್ಯಕ್ತಿಗಳಿಗೆ ಮನವಿ ಮಾಡುವುದಾಗಿ ಜೇಟ್ಲಿ ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರಕಾರದ ತೆರಿಗೆ-ಜಿಡಿಪಿ ಅನುಪಾತ ಶೇ.10ರಿಂದ ಶೇ.11.5ಕ್ಕೇರಿದೆ ಎಂದು ‘ದಿ ಇಕಾನಮಿ ಆ್ಯಂಡ್ ದಿ ಮಾರ್ಕೆಟ್ಸ್ ರಿವಾರ್ಡ್ ಸ್ಟ್ರಕ್ಚರಲ್ ರಿಫಾರ್ಮ್ಸ್ ಆ್ಯಂಡ್ ಫಿಸ್ಕಲ್ ಪ್ರೂಡೆನ್ಸ್’ ಎಂಬ ತಲೆಬರಹದಡಿ ಫೇಸ್‌ಬುಕ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಪೋಸ್ಟ್ ಮಾಡಿದ್ದಾರೆ.

 2017-18ರಲ್ಲಿ ತೈಲೇತರ ತೆರಿಗೆ ಮತ್ತು ಜಿಡಿಪಿಯ ಅನುಪಾತ ಶೇ.9.8ರಷ್ಟಿದ್ದು ಇದು 2007-08ರ ನಂತರದ ಅತೀ ಹೆಚ್ಚಿನ ಪ್ರಮಾಣವಾಗಿದೆ. ಹಾಲಿ ಸರಕಾರ ದೂರದೃಷ್ಟಿಯ ಆರ್ಥಿಕ ನೀತಿ ಹಾಗೂ ಸಮಗ್ರ ಅರ್ಥವ್ಯವಸ್ಥೆ ನೀತಿಯ ಮೂಲಕ ಸಬಲ ವ್ಯವಸ್ಥೆಯೊಂದನ್ನು ರೂಪಿಸಿದ್ದು ಆರ್ಥಿಕ ನೀತಿಯಲ್ಲಿ ಶಿಸ್ತು ಪಾಲನೆಯಾಗದಿದ್ದಲ್ಲಿ ಸಾಲ ಹೆಚ್ಚುತ್ತದೆ ಮತ್ತು ಸಾಲದ ಮೇಲಿನ ವೆಚ್ಚವೂ ದುಬಾರಿಯಾಗುತ್ತದೆ. ಆರ್ಥಿಕವಾಗಿ ಸಶಕ್ತವಾದ ಹಾಗೂ ಜವಾಬ್ದಾರಿಯುತ ಕೇಂದ್ರ ಸರಕಾರವಿದ್ದಲ್ಲಿ ಮಾತ್ರ ಗ್ರಾಹಕರಿಗೆ ನೆಮ್ಮದಿ ದೊರಕುತ್ತದೆ. ತೈಲ ಬೆಲೆಗಳಲ್ಲಿ ಅಸಹಜ ಏರಿಕೆಯಿಂದ ರಾಜ್ಯ ಸರಕಾರಗಳು ಹೆಚ್ಚುವರಿ ಆದಾಯ ಪಡೆದಿವೆ ಎಂದು ಜೇಟ್ಲಿ ತಿಳಿಸಿದ್ದಾರೆ.

ತೈಲದ ಮೇಲಿನ ತೆರಿಗೆಯನ್ನು ಪ್ರತೀ ಲೀಟರ್‌ಗೆ 25 ರೂ.ಯಂತೆ ಕಡಿತಗೊಳಿಸಬೇಕು ಎಂಬ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿಕೆಯನ್ನು ಟೀಕಿಸಿದ ಜೇಟ್ಲಿ, ಇದೊಂದು ಕುತಂತ್ರದ ಸಲಹೆಯಾಗಿದೆ ಎಂದರು. ಚಿದಂಬರಂ ಹೆಸರನ್ನು ಉಲ್ಲೇಖಿಸದೆ ಟೀಕಿಸಿದ ಜೇಟ್ಲಿ, ಮಾನ್ಯ ಪೂರ್ವಾಧಿಕಾರಿಗಳು ತಮ್ಮ ಅಧಿಕಾರಾವಧಿಯಲ್ಲಿ ಈ ರೀತಿ ಮಾಡಲು ಯಾವತ್ತೂ ಪ್ರಯತ್ನಿಸಿರಲಿಲ್ಲ. ಯುಪಿಎ ಸರಕಾರ ಉಳಿಸಿಹೋಗಿರುವ ಪರಂಪರೆಯಾದ, ದೇಶವನ್ನು ನಿಭಾಯಿಸಲಾಗದ ಸಾಲದ ಹೊರೆಯಲ್ಲಿ ಮುಳುಗಿಸಿಬಿಡುವ ಪ್ರಯತ್ನ ಇದಾಗಿದೆ ಎಂದು ಟೀಕಿಸಿದರು. ಯುಪಿಎ ಸರಕಾರದ ಅವಧಿಯಲ್ಲಿದ್ದ ನಿಷ್ಕ್ರಿಯ ಸ್ಥಿತಿಯ ಕಾರ್ಯನೀತಿ ಎನ್‌ಡಿಎ ಸರಕಾರದ ಅವಧಿಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಯಾಗಿ ಪರಿವರ್ತನೆಯಾಗಿದೆ. ಸರಕಾರವು ತೆರಿಗೆ- ಜಿಡಿಪಿ ಅನುಪಾತವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ತೈಲೇತರ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆಗೆ ಅವಕಾಶವಿದೆ. ಅಲ್ಲದೆ ತೆರಿಗೆಯನ್ನು ಸಕಾಲದಲ್ಲಿ ಪಾವತಿಸುವ ಮೂಲಕ ದೇಶಾಭಿಮಾನವನ್ನು ವ್ಯಕ್ತಪಡಿಸಬೇಕು. ಪ್ರಾಮಾಣಿಕ ತೆರಿಗೆ ಪಾವತಿಗಾರ ತನ್ನ ಪಾಲಿನ ತೆರಿಗೆಯನ್ನು ಮಾತ್ರವಲ್ಲ, ತೆರಿಗೆ ತಪ್ಪಿಸುವವರ ಪಾಲನ್ನೂ ಪಾವತಿಸುವ ದುರದೃಷ್ಟಕರ ಪರಿಸ್ಥಿತಿ ಇದೆ ಎಂದ ಅವರು, ಕೇಂದ್ರ ಸರಕಾರವು ಆದಾಯ ತೆರಿಗೆ, ಸೀಮಾ ಸುಂಕ ಹಾಗೂ ಜಿಎಸ್‌ಟಿಯಲ್ಲಿ ತನ್ನ ಪಾಲು ಪಡೆಯುವ ಮೂಲಕ ತೆರಿಗೆಯನ್ನು ಸಂಗ್ರಹಿಸುತ್ತದೆ. ಇದರಲ್ಲಿ ಶೇ.42ರಷ್ಟು ಅಂಶ ರಾಜ್ಯಗಳಿಗೆ ಹಂಚಿಕೆಯಾಗುತ್ತದೆ ಎಂದು ವಿವರಿಸಿದರು.

ರಾಜ್ಯ ಸರಕಾರಗಳು ತಮ್ಮ ಪಾಲಿನ ಶೇ.50ರಷ್ಟು ತೆರಿಗೆಯನ್ನು ಜಿಎಸ್‌ಟಿಯಿಂದ ಹಾಗೂ ಉಳಿದ ಪ್ರಮಾಣವನ್ನು ಸ್ಥಳೀಯ ತೆರಿಗೆಯಿಂದ ಸಂಗ್ರಹಿಸುತ್ತವೆ. ಇವು ತೈಲೋತ್ಪನಗಳ ಮೇಲಿನ ಸ್ವತಂತ್ರ ತೆರಿಗೆಯಾಗಿದ್ದು ತೈಲದ ದರಕ್ಕನುಸಾರವಾಗಿ ತೆರಿಗೆ ಸಂಗ್ರಹಿಸುತ್ತವೆ. ತೈಲ ದರ ಹೆಚ್ಚಾದರೆ ರಾಜ್ಯಗಳಿಗೆ ಹೆಚ್ಚಿನ ಆದಾಯ ದೊರಕುತ್ತದೆ ಎಂದು ಜೇಟ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News