ಸರ್ಕಾರದ ಉದ್ದೇಶ ಯಾರೂ ಪ್ರಶ್ನಿಸುವಂತಿಲ್ಲ ಎಂದ ಕೇಂದ್ರ ಕಾನೂನು ಸಚಿವ

Update: 2018-06-19 06:40 GMT

ಹೊಸದಿಲ್ಲಿ, ಜೂ. 19: ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನೇಮಕ ಮಾಡುವ ವಿಚಾರದಲ್ಲಿ ಸರ್ಕಾರದ ಉದ್ದೇಶವನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಹಾಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ತಮ್ಮ ಉತ್ತರಾಧಿಕಾರಿಯ ಹೆಸರನ್ನು ಶಿಫಾರಸ್ಸು ಮಾಡಿದ ಬಳಿಕವಷ್ಟೇ ಈ ವಿಚಾರದ ಬಗ್ಗೆ ಚರ್ಚಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಸುಪ್ರೀಂಕೋರ್ಟ್‌ನ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರನ್ನು ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಸರ್ಕಾರ ನೇಮಕ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಪ್ರಸಾದ್ ಮೇಲಿನಂತೆ ಉತ್ತರಿಸಿದರು. ಈ ಪ್ರಶ್ನೆ ಕಾಲ್ಪನಿಕ ಎಂದು ತಳ್ಳಿಹಾಕಿದ ಅವರು, ನಮ್ಮ ಉದ್ದೇಶವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.

ಜನವರಿ 12ರ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ನ್ಯಾಯಮೂರ್ತಿಯವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಾಲ್ವರು ನ್ಯಾಯಮೂರ್ತಿಗಳ ಪೈಕಿ ನ್ಯಾಯಮೂರ್ತಿ ಗೊಗೋಯ್ ಕೂಡಾ ಒಬ್ಬರು. ಈ ಪೈಕಿ ಇಬ್ಬರು, ಸರ್ಕಾರದ ನಿಲುವನ್ನು ಕೂಡಾ ಟೀಕಿಸಿ, ನ್ಯಾಯಾಂಗದಲ್ಲಿ ಹಸ್ತಕ್ಷೇಪ ನಡೆಸಲು ಸರ್ಕಾರ ಯತ್ನಿಸುತ್ತಿದೆ ಎಂದು ಅಸಮಾಧಾನ ಬಹಿರಂಗಪಡಿಸಿದ್ದರು.

ಮುಖ್ಯ ನ್ಯಾಯಮೂರ್ತಿಗಳ ನೇಮಕ ವಿಧಿವಿಧಾನದಲ್ಲಿ ನಿವೃತ್ತರಾಗುವ ಸಿಜೆಐ ತಮ್ಮ ಬಳಿಕದ ಅತ್ಯಂತ ಹಿರಿಯ ನ್ಯಾಯಮೂರ್ತಿಯ ಹೆಸರನ್ನು ಶಿಫಾರಸ್ಸು ಮಾಡುತ್ತಾರೆ. ಹೆಸರು ಶಿಫಾರಸ್ಸು ಆದ ಬಳಿಕ ಆ ವಿಚಾರವಾಗಿ ಚರ್ಚಿಸಲಾಗುತ್ತದೆ ಎಂದು ಕಾನೂನು ಸಚಿವರು ಹೇಳಿದರು.

ಅಕ್ಟೋಬರ್ 2ರಂದು ನಿವೃತ್ತರಾಗಲಿರುವ ದೀಪಕ್ ಮಿಶ್ರಾ ತಮ್ಮ ಉತ್ತರಾಧಿಕಾರಿ ಹೆಸರನ್ನು ಒಂದು ತಿಂಗಳು ಮುಂಚಿತವಾಗಿ ಶಿಫಾರಸ್ಸು ಮಾಡಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News