ಪಾಸ್ ಪೋರ್ಟ್ ರದ್ದುಗೊಂಡ ಮೇಲೆ ನಾಲ್ಕು ದೇಶಗಳಿಗೆ ಭೇಟಿ ನೀಡಿದ್ದ ನೀರವ್ ಮೋದಿ !

Update: 2018-06-19 09:00 GMT

ಹೊಸದಿಲ್ಲಿ, ಜೂ. 19: ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹುಕೋಟಿ ಹಗರಣದಲ್ಲಿ ಆರೋಪಿಯಾಗಿರುವ ವಜ್ರೋದ್ಯಮಿ ನೀರವ್ ಮೋದಿಯ ಪಾಸ್ ಪೋರ್ಟ್ ರದ್ದುಗೊಂಡ ನಂತರ ಆತ ಅಮೆರಿಕಾ, ಇಂಗ್ಲೆಂಡ್, ಹಾಂಗ್ ಕಾಂಗ್ ಹಾಗೂ ಫ್ರಾನ್ಸ್ ದೇಶಗಳಿಗೆ ಪ್ರಯಾಣಗೈದಿದ್ದಾರೆ ಎಂದು ಸಿಬಿಐ ಹೇಳಿದೆ.

ಜೂ. 5ರಂದು ಇಂಗ್ಲೆಂಡ್ ನೀಡಿದ ಮಾಹಿತಿಯಂತೆ ನೀರವ್ ಮೋದಿ ನ್ಯೂಯಾರ್ಕ್ ನಿಂದ ಲಂಡನ್ ನ ಹೀತ್ರೋ ವಿಮಾನ ನಿಲ್ದಾಣಕ್ಕೆ ಫೆಬ್ರವರಿ 10ರಂದು ಆಗಮಿಸಿದ್ದು, ಮತ್ತೆ ಫೆಬ್ರವರಿ 15ರಂದು ಆತ ಹಾಂಗ್ ಕಾಂಗ್ ನಿಂದ ಹೀತ್ರೋ ತಲುಪಿದ್ದರು. ಮಾರ್ಚ್ 15ರಂದು ಹೀತ್ರೋ ನಿಲ್ದಾಣದಿಂದ ಹಾಂಗ್ ಕಾಂಗ್ ಗೆ ಮತ್ತೆ ತೆರಳಿದ್ದ ಆತ ಮಾರ್ಚ್ 28ರಂದು ಹೀತ್ರೋ ನಿಲ್ದಾಣದಿಂದ ನ್ಯೂಯಾರ್ಕ್ ಗೆ ಹಾಗೂ ಮಾರ್ಚ್ 31ರಂದು ಪ್ಯಾರಿಸ್ ನಿಂದ ಲಂಡನ್ ಗೆ ಪ್ರಯಾಣಿಸಿದ್ದಾನೆ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾರ್ಚ್ 31ರ ನಂತರ ಆತ ಎಲ್ಲಿಗೆ ಪ್ರಯಾಣಿಸಿದ್ದ ಎಂಬ ಬಗ್ಗೆ ಮಾಹಿತಿ ಒದಗಿಸಲಾಗಿಲ್ಲ, ಆತ ಪಾಸ್ ಪೋರ್ಟ್ ಸಂಖ್ಯೆ ಝೆಡ್ 1781888 ಉಪಯೋಗಿಸಿರುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ಇಂಗ್ಲೆಂಡ್ ಹೊರತುಪಡಿಸಿ ಬೇರೆ ಯಾವುದೇ ದೇಶ ನೀರವ್ ಮೋದಿಯ ಪ್ರಯಾಣದ ಮಾಹಿತಿಯೊದಗಿಸಿಲ್ಲ ಎಂದೂ ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. ಆತನ ಪಾಸ್ ಪೋರ್ಟ್ ರದ್ದುಗೊಳಿಸಿದ ನಂತರ ಪಾಸ್ ಪೋರ್ಟ್ ಮಾಹಿತಿಯನ್ನು ಇಂಟರ್ ಪೋಲ್ ಡಾಟಾ ಬೇಸ್ ನಲ್ಲಿರುವ ಎಲ್ಲಾ 190 ದೇಶಗಳಿಗೆ ಡಿಫ್ಯೂಶನ್ ನೋಟಿಸ್ ಕಳುಹಿಸಲಾಗಿತ್ತು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ನೀರವ್ ಮೋದಿ ಬಗ್ಗೆ ಮಾಹಿತಿಯನ್ನು ಎಲ್ಲಾ ದೇಶಗಳಿಂದ ಕೋರಿದ್ದರೆ ಹಾಂಗ್ ಕಾಂಗ್ ಗೆ ಪ್ರತ್ಯೇಕ ಮನವಿ ಸಲ್ಲಿಸಿ ಆತನನ್ನು ವಶಪಡಿಸಿಕೊಂಡು ಭಾರತಕ್ಕೆ ಕಳುಹಿಸುವಂತೆ ಕೋರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News