ಕಾಶ್ಮೀರದಲ್ಲಿ ಮುರಿದು ಬಿದ್ದ ಬಿಜೆಪಿ –ಪಿಡಿಪಿ ಮೈತ್ರಿ

Update: 2018-06-19 16:58 GMT

 ಶ್ರೀನಗರ, ಜೂ. 19: ಜಮ್ಮು ಹಾಗೂ ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಮಂಗಳವಾರ ಅಂತ್ಯಗೊಂಡಿದೆ. ಹೊಸದಿಲ್ಲಿಯಲ್ಲಿ ಮಂಗಳವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಸಂಪುಟ ಸಚಿವರು, ವಿವಿಧ ಪದಾಧಿಕಾರಿಗಳು ಹಾಗೂ ಜಮ್ಮುಕಾಶ್ಮೀರದ ಉಸ್ತುವಾರಿಯೊಂದಿಗೆ ಸಭೆ ನಡೆಸಿ ಜಮ್ಮು ಕಾಶ್ಮೀರದ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ ಬಳಿಕ ಬಿಜೆಪಿ ಈ ನಿರ್ಧಾರ ತೆಗೆದುಕೊಂಡಿದೆ.

ಪಿಡಿಪಿಯೊಂದಿಗೆ ಮೈತ್ರಿ ಅಂತ್ಯಗೊಳಿಸಿರುವ ವಿಚಾರವನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೊಸದಿಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬಿಜೆಪಿ-ಪಿಡಿಪಿ ಮೈತ್ರಿ ಸರಕಾರ ಆರಂಭದಿಂದಲೂ ಅಸ್ಥಿರವಾಗಿತ್ತು. ಭಯೋತ್ಪಾದನ ವಿರೋಧಿ ಕಾರ್ಯಾಚರಣೆಯನ್ನು ರಮಝಾನ್ ಬಳಿಕ ವಿಸ್ತರಿಸಲಾಗುವುದು ಎಂದು ಕೇಂದ್ರ ಸರಕಾರ ಘೋಷಿಸಿದ ಬಳಿಕ ಬಿಜೆಪಿ-ಪಿಡಿಪಿ ಮೈತ್ರಿ ಕುಸಿದಿದೆ.

ಕಥುವಾದಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ-ಹತ್ಯೆ ಘಟನೆ ಬಳಿಕ ಬಿಜೆಪಿ-ಪಿಡಿಪಿ ನಡುವಿನ ಬಿರುಕು ಇನ್ನಷ್ಟು ಹೆಚ್ಚಾಗಿತ್ತು. ಮುಸ್ಲಿಮ್ ಬುಡಕಟ್ಟು ಸಮುದಾಯದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿಗಳ ಬೆಂಬಲಕ್ಕೆ ರಾಜ್ಯದ ಬಿಜೆಪಿ ನಾಯಕರು ನಿಂತಿದ್ದರು. ಬಂಧಿತ ಆರೋಪಿಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ನಡೆದ ರ್ಯಾಲಿಯಲ್ಲಿ ಬಿಜೆಪಿಯ ಇಬ್ಬರು ಶಾಸಕರು ಪಾಲ್ಗೊಂಡಿದ್ದರು. ಎಲ್ಲ ಸಂಸ್ಥೆಗಳ ಬಗ್ಗೆ ಪ್ರತಿಕ್ರಿಯೆ ಪಡೆದುಕೊಂಡ ಬಳಿಕ ರಾಜ್ಯ ಸರಕಾರಕ್ಕೆ ನೀಡಿದ ಬೆಂಬಲ ಹಿಂದೆ ತೆಗೆಯಲು ಇದು ತಕ್ಕುದಾದ ಸಮಯ ಎಂದು ಕೇಂದ್ರ ಸರಕಾರ ಹಾಗೂ ಪಕ್ಷ ನಿರ್ಧರಿಸಿತ್ತು ಎಂದು ರಾಮ್ ಮಾಧವ್ ತಿಳಿಸಿದ್ದಾರೆ.

ಅಧಿಕಾರವಧಿಯ ಎರಡು ವರ್ಷಗಳ ಮುಂಚಿತವಾಗಿ ಬೆಂಬಲ ಹಿಂದೆಗೆಯುವ ನಿರ್ಧಾರವನ್ನು ಸಮರ್ಥಿಸಿಕೊಂಡ ರಾಮ್ ಮಾಧವ್, ‘‘ಬದುಕುವ ಹಕ್ಕು ಹಾಗೂ ಸ್ವತಂತ್ರ ಅಭಿವ್ಯಕ್ತಿ ಸೇರಿದಂತೆ ಮೂಲಭೂತ ಹಕ್ಕುಗಳು ಅಪಾಯದಲ್ಲಿವೆ’’ ಎಂದಿದ್ದಾರೆ. ಈದ್ ಮುನ್ನಾ ದಿನ ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಅವರನ್ನು ಅವರ ಇಬ್ಬರು ಅಂಗರಕ್ಷಕರೊಂದಿಗೆ ಶ್ರೀನಗರದಲ್ಲಿ ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು. ಅದೇ ದಿನ ಈದ್‌ಗೆಂದು ತನ್ನ ನಿವಾಸಕ್ಕೆ ತೆರಳುತ್ತಿದ್ದ ಯೋಧನೋರ್ವನನ್ನು ಅಪಹರಿಸಿ ಹತ್ಯೆಗೈಯಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ‘‘ಶುಜಾತ್ ಅವರ ಹತ್ಯೆಯ ಬಳಿಕ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಮುಂದುವರಿಸದೇ ಇರುವ ಬಗ್ಗೆ ಯಾವುದೇ ಪ್ರಶ್ನೆ ಇಲ್ಲ.’’ ಎಂದು ರಾಮ್ ಮಾಧವ್ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರವಿವಾರ ಸರಣಿ ಟ್ವೀಟ್ ಮಾಡಿ, ಕಾರ್ಯಾಚರಣೆ ಮುಂದುವರಿಸಲು ಭದ್ರತಾ ಪಡೆಗಳಿಗೆ ನಿರ್ದೇಶಿಸಲಾಗಿದೆ ಎಂದು ಹೇಳುವ ಮೂಲಕ ರಮಝಾನ್ ಕದನ ವಿರಾಮ ವಿಸ್ತರಿಸುವುದಿಲ್ಲ ಎಂಬ ಸೂಚನೆ ನೀಡಿದ್ದರು.

89 ಸದಸ್ಯರ ರಾಜ್ಯ ವಿಧಾನ ಸಭೆಯಲ್ಲಿ ಬಿಜೆಪಿ 25 ಶಾಸಕರು ಹಾಗೂ ಪಿಡಿಪಿಯ 28 ಶಾಸಕರು ಇದ್ದರು. ಬಹುಮತಕ್ಕೆ 45 ಸ್ಥಾನಗಳು ಬೇಕಿದ್ದು ಎರಡೂ ಪಕ್ಷಗಳಿಗೆ ಕೊರತೆ ಇತ್ತು. 12 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್, ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಪ್ರಶ್ನೆ ಇಲ್ಲ ಎಂದಿದೆ. ರಾಜ್ಯದಲ್ಲಿರುವ ಇನ್ನೊಂದು ಪ್ರಮುಖ ಪಕ್ಷವೆಂದರೆ, ನ್ಯಾಶನಲ್ ಕಾನ್ಫರೆನ್ಸ್ ಇದು 15 ಸ್ಥಾನಗಳನ್ನು ಹೊಂದಿದೆ. ‘‘ಇದೀಗ ಕಾಲ ಕೂಡಿ ಬಂದಿದೆ...’’ ಎಂದು ನ್ಯಾಶನಲ್ ಕಾನ್ಫರೆನ್‌ನ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News