ರೈತರ ಸಾಲ ಮನ್ನಾ ಬಗ್ಗೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಚರ್ಚೆ: ಸಿ.ಎಂ ಕುಮಾರಸ್ವಾಮಿ

Update: 2018-06-19 13:10 GMT

ಬೆಂಗಳೂರು, ಜೂ.19: ವೈಜ್ಞಾನಿಕವಾಗಿ ಸಾಲ ಮನ್ನಾ ಮಾಡುವ ಸಲುವಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಖ್ಯಸ್ಥರ, ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಪ್ರೆಸ್‌ಕ್ಲಬ್ ಹಾಗೂ ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಲಮನ್ನಾದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಇನ್ನೆರಡು ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಖ್ಯಸ್ಥರ ಸಭೆ ಕರೆದಿದ್ದು, ಅವರೊಂದಿಗೆ ಚರ್ಚೆ ನಡೆಸುತ್ತೇವೆ. ಒಟ್ಟಿನಲ್ಲಿ ಸಾಲ ಮನ್ನಾದ ಹಣ ಸಂಪೂರ್ಣವಾಗಿ ರೈತರಿಗೆ ತಲುಪಬೇಕು ಎಂದು ಅವರು ತಿಳಿಸಿದರು.

ರಾಜ್ಯದ ಜನಸಾಮಾನ್ಯರಿಗೆ ಹೊರೆಯಾಗದಂತೆ ರೈತರ ಸಾಲ ಮನ್ನಾ ಮಾಡಬೇಕು ಎಂಬ ಉದ್ದೇಶದಿಂದ ವಿವಿಧ ಹಂತಗಳಲ್ಲಿ ಹಣ ಹೊಂದಿಸಲಾಗುತ್ತಿದೆ. ಸರಕಾರಿ ಯೋಜನೆಗಳಲ್ಲಿ ಸೋರಿಕೆಯನ್ನು ತಡೆಗಟ್ಟಲಾಗುತ್ತಿದೆ ಎಂದು ಅವರು ಹೇಳಿದರು.

ದಿಲ್ಲಿಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ರೈತರ ಸಾಲಮನ್ನಾ ವಿಚಾರವಾಗಿ ಪ್ರಧಾನಿ ಮೋದಿ ಬಳಿ ಸಹಾಯ ಕೇಳಿದ್ದೇನೆ. ನಾನು ಪ್ರಧಾನಿಯವರ ಬಳಿ ರೈತರ ಸಾಲ ಮನ್ನಾಗೆ ಕೇಳಿದ್ದು ಅವರ ನೈತಿಕತೆ ಅರಿಯಲು ಹೊರತು, ಕೇಂದ್ರದ ಮೇಲೆ ಬೊಟ್ಟು ತೋರಿಸಿ ಪಲಾಯನ ಆಗಲು ಅಲ್ಲ. ಅಲ್ಲದೆ, ಕೇಂದ್ರ ಸರಕಾರಕ್ಕೆ ಮನವಿ ಮಾಡಿ ನನ್ನ ಪ್ರಯತ್ನ ನಾನು ಮಾಡಿದ್ದೇನೆ, ಅವರು ಮಾಡೇಬಿಡ್ತಾರೆ ಅಂತ ತಿಳಿದುಕೊಂಡಿಲ್ಲ ಎಂದು ಅವರು ತಿಳಿಸಿದರು.

ಲೋಕಸಭಾ ಚುನಾವಣೆವರೆಗೂ ನಾನೇ ಸಿಎಂ ಆಗಿರುತ್ತೇನೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕುಮರಸ್ವಾಮಿ, ನಮ್ಮ ಸಮ್ಮಿಶ್ರ ಸರಕಾರ ಐದು ವರ್ಷಗಳ ಕಾಲ ಸುಭದ್ರವಾಗಿರುತ್ತದೆ. ಈ ಸರಕಾರ ಯಾವಾಗ ಬೀಳುತ್ತದೋ ಎಂಬ ಭಾವನೆ ಬೇಡ. ಆದರೆ, ಮಾಧ್ಯಮದವರಿಗಿದ್ದ ಅನುಮಾನ ಸಂಬಂಧ ಮಾಧ್ಯಮದವರ ಧಾಟಿಯಲ್ಲಿ ಉತ್ತರಿಸಿದ್ದೇನೆ ಎಂದರು.

ಗ್ರಾಮ ವಾಸ್ತವ್ಯ: ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ಜನರ ಮೆಚ್ಚುಗೆ ಗಳಿಸಿತ್ತು. ಜನರ ಸೇವಕನಾಗಿ ನಾನು ಜನರ ಕಷ್ಟ ಕಾರ್ಪಣ್ಯಗಳನ್ನು ಅರಿಯಲು ಗ್ರಾಮ ವಾಸ್ತವ್ಯ ನಡೆಸಿದ್ದೆ. ಈಗ ಮತ್ತೆ ಗ್ರಾಮ ವಾಸ್ತವ್ಯವನ್ನು ಆರಂಭಿಸುವ ಮೂಲಕ ಜನರ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ಒದಗಿಸುವ ವಿಶ್ವಾಸ ವ್ಯಕ್ತಪಡಿಸಿದರು.

ದುಂದುವೆಚ್ಚಕ್ಕೆ ಕಡಿವಾಣ: ನನಗಿರುವ ಭದ್ರತೆ ಕಡಿಮೆ ಮಾಡಲು ಅಧಿಕಾರಿಗಳನ್ನು ಕೇಳಿದೆ. ಆದರೆ ಅದು ಸಾಧ್ಯವಿಲ್ಲ. ಮುಖ್ಯಮಂತ್ರಿ ಆದ ಮೇಲೆ ಇಷ್ಟೊಂದು ಭದ್ರತೆ ಕೊಡಲೇಬೇಕಾಗುತ್ತೆ ಎಂದಿದ್ದಾರೆ. ಆದುದರಿಂದಾಗಿ, ನಾನು ಇವತ್ತಿಗೂ ಇಷ್ಟೊಂದು ಭದ್ರತೆಯಲ್ಲಿ ಇದ್ದೇನೆ. ಆದರೆ, ಸರಕಾರದ ಹಣ ದುಂದು ವೆಚ್ಚ ಮಾಡುವುದು ಬೇಡ ಅಂತ ತೀರ್ಮಾನ ಮಾಡಿದ್ದೇನೆ. ನಾನು ದಿಲ್ಲಿಗೆ ಎರಡು ಬಾರಿ ಹೋದಾಗ ವಿಶೇಷ ವಿಮಾನದಲ್ಲಿ ಪ್ರಯಾಣ ಮಾಡದೆ, ಸಾಮಾನ್ಯ ವಿಮಾನದಲ್ಲಿ ಹೋಗಿದ್ದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.

ಜುಲೈನಲ್ಲಿ ಬಜೆಟ್: ಜುಲೈ ಮೊದಲ ವಾರದಲ್ಲಿ ಬಜೆಟ್ ಮಂಡಿಸಲಿದ್ದು, ಅದಕ್ಕೆ ಮೊದಲೇ ಬಜೆಟ್ ಪೂರಕ ಸಚಿವ ಸಂಪುಟ ಸಭೆ ನಡೆಸಲಾಗುತ್ತದೆ. ಅಂದು ನಡೆಯುವ ಬಜೆಟ್ ಅಧಿವೇಶನದಲ್ಲಿ ಸಾಲ ಮನ್ನಾ ಘೋಷಣೆ ಮಾಡುವ ಸಂಬಂಧ ಚರ್ಚೆಗಳು ನಡೆಯುತ್ತಿವೆ ಎಂದು ಅವರು ನುಡಿದರು.

ಮಾಧ್ಯಮದವರು ರಾಜ್ಯದ ಸಮಸ್ಯೆಗಳ ಮೂಲಕ ಸರಕಾರದ ಗಮನ ಸೆಳೆಯಲಿ. ಇದರಿಂದ ನಮ್ಮ ಸರಕಾರಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದೆಂಬ ಮನವರಿಕೆ ಆಗುತ್ತೆ. ನಾವು ಇಬ್ಬರೂ ಕೈ ಜೊಡಿಸಿದ್ರೆ ರಾಜ್ಯದ ಅಭಿವೃದ್ಧಿ ಸಾಧ್ಯ. ಕುಮಾರಸ್ವಾಮಿ ಎಂಬ ವ್ಯಕ್ತಿ ಇವತ್ತಿಗೂ ರಾಜಕೀಯದಲ್ಲಿ ಇದ್ದಾನೆ ಎಂದರೆ ಅದಕ್ಕೆ ಮಾಧ್ಯಮದವರೂ ಕಾರಣ. ನಾನು ವಿರೋಧ ಪಕ್ಷದಲ್ಲಿ ಇದ್ದಾಗ ಮಾಧ್ಯಮದವರೇ ನನ್ನನ್ನು ಜೀವಂತವಾಗಿ ಇರಿಸಿದ್ದವರು ಎಂದು ಸಿಎಂ ಹೇಳಿದರು.

ದೂರು ಹೇಳಿಲ್ಲ, ರಾಜಧರ್ಮ ಪಾಲಿಸಿದ್ದೇನೆ
ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯನ್ನು ದಿಲ್ಲಿಯಲ್ಲಿ ಭೇಟಿಯಾದ ವೇಳೆ ರಾಜ್ಯ ಕಾಂಗ್ರೆಸ್ ನಾಯಕರ ಬಗ್ಗೆ ವೈಯಕ್ತಿಕವಾಗಿ ಯಾವುದೇ ಚರ್ಚೆ ಮಾಡಿಲ್ಲ. ಸಮ್ಮಿಶ್ರ ಸರಕಾರದ ರಾಜಧರ್ಮ ಪಾಲಿಸುವ ಬಗ್ಗೆ ಮಾತ್ರ ಸಲಹೆ ಪಡೆದಿದ್ದೇನೆ. ಆದರೆ, ಕುಮಾರಸ್ವಾಮಿ ರಾಜ್ಯ ನಾಯಕರ ವಿರುದ್ಧ ದೂರು ನೀಡಿದ್ದಾರೆ ಎಂದೆಲ್ಲಾ ಆರೋಪಿಸುತ್ತಿರುವುದು ಸರಿಯಲ್ಲ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News