ಅಹಿಂದ ವರ್ಗ ಎಲ್ಲ ಕ್ಷೇತ್ರದಲ್ಲೂ ಮುನ್ನೆಲೆಗೆ ಬರಬೇಕು: ದಿನೇಶ್ ಅಮೀನ್‌ ಮಟ್ಟು

Update: 2018-06-19 13:09 GMT

ಬೆಂಗಳೂರು, ಜೂ.19: ಅಹಿಂದ(ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಸಮುದಾಯವು ಸಾಹಿತ್ಯ, ಮಾಧ್ಯಮ, ರಂಗಭೂಮಿ ಹಾಗೂ ಸಾಂಸ್ಕೃತಿಕ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಮುನ್ನೆಲೆಗೆ ಬರಬೇಕಾದ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ದಿನೇಶ ಅಮೀನ್‌ಮಟ್ಟು ಅಭಿಪ್ರಾಯಿಸಿದರು.

ಮಂಗಳವಾರ ಮಾನವ ಬಂಧುತ್ವ ವೇದಿಕೆ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ‘ಸಾಮಾಜಿಕ ನ್ಯಾಯಕ್ಕಾಗಿ ಜನಾಗ್ರಹ ಸಮಾವೇಶ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜಕೀಯದಲ್ಲಿ ಅಹಿಂದ ವರ್ಗವು ಶಕ್ತಿಯುತವಾಗಬೇಕಾದರೆ, ಇತರೆ ಕ್ಷೇತ್ರದಲ್ಲೂ ಆ ಸಮುದಾಯದ ಮಂದಿ ಇದ್ದರೆ ಮಾತ್ರ ಸಾಧ್ಯವೆಂದು ತಿಳಿಸಿದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಕಲ್ಪಿಸುವುದೇ ಸಾಮಾಜಿಕ ನ್ಯಾಯ. ರಾಜ್ಯದಲ್ಲಿರುವ ಎಲ್ಲ ಜಾತಿ, ಸಮುದಾಯಕ್ಕೆ ಸಮಾನವಾದ ಅವಕಾಶ ನೀಡುವುದು ಪ್ರಜಾಪ್ರಭುತ್ವದ ಆದ್ಯ ಕರ್ತವ್ಯ ಆಗಬೇಕು. ಆಗ ಮಾತ್ರ ರಾಜ್ಯದ ಎಲ್ಲ ವರ್ಗದ ಜನರ ಸರಕಾರವಾಗಲು ಸಾಧ್ಯವೆಂದು ಅವರು ಹೇಳಿದರು.

ಸಾಮಾಜಿಕ ವ್ಯವಸ್ಥೆಯ ಪರವಾಗಿ ಕೆಲಸ ಮಾಡುವವರನ್ನು ಮೂಲೆಗುಂಪು ಮಾಡುವುದನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬರಲಾಗುತ್ತಿದೆ. ಅದು ಬುದ್ಧನ ಕಾಲದಿಂದ ಪ್ರಾರಂಭಗೊಂಡು ಬಸವಣ್ಣ, ಅಂಬೇಡ್ಕರ್ ಮೊದಲುಗೊಂಡು ಸಿದ್ದರಾಮಯ್ಯವರೆಗೆ ಪಟ್ಟಭದ್ರ ಹಿತಾಸಕ್ತಿಗೆ ಬಲಿಯಾದವರೇ. ಇನ್ನು ಮುಂದಿನ ದಿನಗಳಲ್ಲಾದರೂ ಸಾಮಾಜಿಕ ವ್ಯವಸ್ಥೆಯ ಪರವಾಗಿರುವವರ ಬೆನ್ನಿಗೆ ನಾವು ಇರಬೇಕೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News