ಕಾಂಗ್ರೆಸಿನಲ್ಲಿ ಗೆದ್ದಿರುವ ಎಲ್ಲ ಮಹಿಳೆಯರಿಗೂ ಸಚಿವ ಸ್ಥಾನ ಸಿಗಲಿ ಎಂಬುದು ನನ್ನ ಅಪೇಕ್ಷೆ: ಸಚಿವೆ ಜಯಮಾಲಾ

Update: 2018-06-19 13:34 GMT

ಬೆಂಗಳೂರು, ಜೂ. 19: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕೆ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನನ್ನನ್ನು ಅಕ್ಕ ಎಂದು ಕರೆದಿದ್ದು, ಕ್ಷಮೆ ಕೋರಿದ್ದಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರ ಮಾತಿನ ಬಗ್ಗೆ ನಾನು ಇನ್ನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಯಸ್ಸಿನಲ್ಲಿ ನಾನು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗಿಂತ ದೊಡ್ಡವಳು. ಪಕ್ಷದಲ್ಲಿ ಅವರು ಕೆಲಸ ಮಾಡುತ್ತಿದ್ದು, ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಹೇಳಿದರು.

ಮಹಿಳೆಯರಿಗೆ ಸೂಕ್ತ ಸ್ಥಾನ ದಕ್ಕಬೇಕು. ಸಚಿವ ಸ್ಥಾನ ಕೇಳುವುದು ಅವರ ಹಕ್ಕು. ಕಾಂಗ್ರೆಸಿನಲ್ಲಿ ಗೆದ್ದಿರುವ ಎಲ್ಲ ಮಹಿಳೆಯರಿಗೂ ಸಚಿವ ಸ್ಥಾನ ಸಿಗಲಿ ಎಂಬುದು ನನ್ನ ಅಪೇಕ್ಷೆ. ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ರೂಪಾ ಶಶಿಧರ್ ಸೇರಿ ಎಲ್ಲರಿಗೂ ಅವಕಾಶ ಸಿಗಬೇಕು ಎಂದು ಅವರು ಆಗ್ರಹಿಸಿದರು.

ಅವರಿಗೂ ಬದುಕುವ ಹಕ್ಕಿದೆ: ಎಚ್‌ಐವಿ ಸೋಂಕು ಪೀಡಿತರಾಗಿರುವ ಮಕ್ಕಳಿಗೂ ಬದುಕುವ ಹಕ್ಕಿದೆ. ತಮ್ಮದಲ್ಲದ ತಪ್ಪಿಗೆ ಹುಟ್ಟಿನಿಂದಲೇ ಸೋಂಕಿಗೆ ಒಳಗಾಗಿರುವ ಮಕ್ಕಳ ಬಗ್ಗೆ ಪ್ರೀತಿ ಇರಲಿ ಎಂದು ಸಚಿವೆ ಜಯಮಾಲಾ ಮನವಿ ಮಾಡಿದರು.

ಬೆಳಗಾವಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನದಲ್ಲಿ ಮಹೇಶ್ ಫೌಂಡೇಶನ್ ಸಂಸ್ಥೆ ಎಚ್‌ಐವಿ ಮಕ್ಕಳಿಗಾಗಿ ಪುನರ್‌ವಸತಿ ಕೇಂದ್ರ ನಡೆಸುತ್ತಿದೆ. ಆದರೆ, ಅಕ್ಕಪಕ್ಕದವರು ಕೇಂದ್ರವನ್ನು ತೆರವುಗೊಳಿಸುವಂತೆ ಒತ್ತಡ ಹೇರಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸಿಎಂ ಜತೆ ಚರ್ಚೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹಲವು ಹೊಸ ಯೋಜನೆಗಳ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಿದ್ದು, ಈ ಬಗ್ಗೆ ಬಜೆಟ್‌ನಲ್ಲಿ ಸೇರಿಸುವ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಸಮಾಲೋಚನೆ ನಡೆಸಿ, ಜಾರಿಗೆ ಕ್ರಮ ವಹಿಸಲಾಗುವುದು ಎಂದರು.

‘ತಾನು ಇನ್ನು ಮುಂದೆ ಯಾವುದೇ ಆರೋಪ ಮತ್ತು ಪ್ರತ್ಯಾರೋಪಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಕೆಲಸದ ಮೇಲೆ ನಾನು ನಂಬಿಕೆ ಇಟ್ಟಿದ್ದು, ನನ್ನ ವಿರುದ್ಧ ಆರೋಪ ಮಾಡುವವರಿಗೆ ನನ್ನ ಕೆಲಸದ ಮೂಲಕವೇ ಉತ್ತರ ನೀಡುತ್ತೇನೆ’
-ಜಯಮಾಲಾ ಕನ್ನಡ ಮತ್ತು ಸಂಸ್ಕೃತಿ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News