ವೈಜ್ಞಾನಿಕವಾದ ನಿರ್ವಹಣಾ ಮಂಡಳಿ ರಚನೆಯಾಗಲಿ: ಸಿಎಂ ಕುಮಾರಸ್ವಾಮಿ

Update: 2018-06-19 13:36 GMT

ಬೆಂಗಳೂರು, ಜೂ.19: ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ ಸಂಬಂಧ ಸುಪ್ರೀಂ ಕೋರ್ಟ್‌ನ ಯಾವುದೇ ಆದೇಶವನ್ನು ರಾಜ್ಯ ಸರಕಾರ ಉಲ್ಲಂಘಿಸುವುದಿಲ್ಲ. ಬದಲಿಗೆ, ನಿರ್ವಹಣಾ ಮಂಡಳಿ ವೈಜ್ಞಾನಿಕವಾಗಿ ರಚನೆಯಾಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಗೆಜೆಟೆಡ್ ನೋಟಿಫಿಕೇಷನ್ ಹೊರಡಿಸಿದೆ. ಅದನ್ನು ಮುಂದಿನ 6 ತಿಂಗಳೊಳಗೆ ರಾಜ್ಯಸಭೆ ಮತ್ತು ಪಾರ್ಲಿಮೆಂಟ್‌ನಲ್ಲಿ ಮಂಡನೆ ಮಾಡಿ, ಅನುಮೋದನೆ ಪಡೆದುಕೊಳ್ಳಬೇಕು ಎಂದು ಹೇಳಿದರು.

ನ್ಯಾಯಯುತವಾಗಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ತಿಂಗಳಿಗೆ ಇಷ್ಟು ನೀರುಬಿಡಬೇಕು, ಎಲ್ಲ ಹಂತದಲ್ಲಿಯೂ ವರದಿ ಒಪ್ಪಿಸಬೇಕು ಸೇರಿದಂತೆ ಅವೈಜ್ಞಾನಿಕ ವಿಚಾರಗಳಿಗೆ ನಮ್ಮ ವಿರೋಧವಿದೆ. ಈ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದ ಅವರು, ಅಂತರ್ ರಾಜ್ಯ ನೀರು ಹಂಚಿಕೆ ವಿವಾದಗಳಲ್ಲಿ ನಿರ್ವಹಣಾ ಮಂಡಳಿ ರಚನೆ ಮಾಡುವ ಮೊದಲು ಪಾರ್ಲಿಮೆಂಟಿನ ಎರಡೂ ಸದನಗಳಲ್ಲಿ ಚರ್ಚಿಸಬೇಕಾಗಿದೆ ಎಂದರು.

ಕಸದ ಸಮಸ್ಯೆ ಬಗೆಹರಿಸಲು ಗಾರ್ಬೇಜ್ ಮಾಫಿಯಾ ಬಿಡುವುದಿಲ್ಲ. ಮರಳು ಮತ್ತು ಕಸದ ಸಮಸ್ಯೆ ಬಗೆಹರಿಸಲು ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮಾಫಿಯಾ ವಿರುದ್ಧ ಯಾವುದೇ ಮುಲಾಜಿಗೊಳಗಾಗದೆ, ರಾಜಕೀಯಕ್ಕೆ ಬಲಿಯಾಗದೆ ಕಠಿಣ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಅವರು ಹೇಳಿದರು.

ಯಶಸ್ವಿನಿ ಯೋಜನೆಯನ್ನು ಕೇಂದ್ರ ಸರಕಾರದ ಯೋಜನೆಯಾದ ಆರೋಗ್ಯಶ್ರಿಯೊಂದಿಗೆ ಜೋಡಿಸಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದು, 3 ತಿಂಗಳೊಳಗೆ ಸಾಧಕ-ಭಾದಕಗಳ ಬಗ್ಗೆ ವರದಿ ನೀಡಲು ತಿಳಿಸಲಾಗಿದೆ. ಸರಕಾರದ ಆದಾಯವನ್ನು ಗಮನದಲ್ಲಿಟ್ಟುಕೊಂಡು ಮದ್ಯ ನಿಷೇಧ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಜುಲೈನಲ್ಲಿ ಮಹಾದಾಯಿ ಟರ್ಮಿನಲ್ ತೀರ್ಪು ಬರಲಿದ್ದು, ಅಲ್ಲಿಯವರೆಗೂ ಕಾಯಿರಿ ಎಂದು ಕೇಂದ್ರ ಸರಕಾರ ತಿಳಿಸಿದೆ ಎಂದು ಸಿಎಂ ತಿಳಿಸಿದರು. ಸಂವಾದದಲ್ಲಿ ಪ್ರೆಸ್‌ಕ್ಲಬ್ ಅಧ್ಯಕ್ಷ ಸದಾಶಿವಶಣೈ, ಕಾರ್ಯದರ್ಶಿ ಕಿರಣ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News